1.19 ಲಕ್ಷ ಸಸಿ ನೆಡಲು ಬಿಬಿಎಂಪಿ ಸಿದ್ಧತೆ

KannadaprabhaNewsNetwork | Published : Jul 14, 2024 1:35 AM

ಸಾರಾಂಶ

ಬೆಂಗಳೂರಿನಲ್ಲಿ ಹಸಿರೀಕರಣ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ ನಗರದಲ್ಲಿ 1.19 ಲಕ್ಷ ಸಸಿ ನೆಟ್ಟು ಬೆಳೆಸಲು ಬಿಬಿಎಂಪಿ ಆರೋಗ್ಯ ವಿಭಾಗ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಹಸಿರೀಕರಣ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ ನಗರದಲ್ಲಿ 1.19 ಲಕ್ಷ ಸಸಿ ನೆಟ್ಟು ಬೆಳೆಸಲು ಬಿಬಿಎಂಪಿ ಆರೋಗ್ಯ ವಿಭಾಗ ಮುಂದಾಗಿದೆ.

ಅಭಿವೃದ್ಧಿ ಮತ್ತು ನಗರೀಕರಣದ ಹೆಸರಿನಲ್ಲಿ ಸಾವಿರರು ಮರಗಳನ್ನು ಕಡಿದು ಹಾಕಲಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿ ಅರಣ್ಯ ವಿಭಾಗ ಪ್ರತಿ ವರ್ಷದಂತೆ ಈ ವರ್ಷವೂ ಸಸಿ ನೆಟ್ಟು ಬೆಳೆಸುವ ಯೋಜನೆ ರೂಪಿಸಿಕೊಂಡಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ಮಾಹಿತಿ ನೀಡಿದ್ದಾರೆ.

1.19 ಲಕ್ಷ ಸಸಿಗಳ ಪೈಕಿ 87.500 ಸಸಿಗಳನ್ನು ರಸ್ತೆ ಮತ್ತು ಬಡಾವಣೆಗಳಲ್ಲಿ ನೆಡಲಾಗುವುದು. 10.500 ಸಸಿಗಳನ್ನು ಉದ್ಯಾನವನ, 21 ಸಾವಿರ ಸಸಿಗಳನ್ನು ಕೆರೆಯ ಅಂಗಳದಲ್ಲಿ ನೆಟ್ಟು ಬೆಳೆಸಲು ತೀಮಾನಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರವಾರು ಟೆಂಡರ್‌ ಆಹ್ವಾನಿಸಲಾಗಿದ್ದು, ಇನ್ನೊಂದು ವಾರದಲ್ಲಿ ಗುತ್ತಿಗೆದಾರರನ್ನು ಅಂತಿಮ ಪಡಿಸಲಾಗುತ್ತದೆ. ಗುತ್ತಿಗೆದಾರರು ಸಸಿ ನೆಟ್ಟು, ಅದಕ್ಕೆ ಟ್ರೀ ಗಾರ್ಡ್‌ ಅಳವಡಿಕೆ ಮಾಡಿ ಮೂರು ವರ್ಷ ನಿರ್ವಹಣೆ ಮಾಡಬೇಕು. ಪ್ರತಿ ಗಿಡಕ್ಕೆ ಸುಮಾರು ₹1,800 ವೆಚ್ಚ ಮಾಡಲಾಗುತ್ತಿದೆ ಎಂದು ಸ್ವಾಮಿ ವಿವರಿಸಿದ್ದಾರೆ.

ವಲಯವಾರು ಸಸಿ ನೆಡುವ ವಿವರ

ವಲಯರಸ್ತೆ/ಬಡಾವಣೆಪಾರ್ಕ್‌ಕೆರೆಒಟ್ಟು

ಯಲಹಂಕ23,0002,0009,00034,000

ಮಹದೇವಪುರ17,0002,0003,00023,000

ಪಶ್ಚಿಮ5,000--5,000

ಬೊಮ್ಮನಹಳ್ಳಿ14,001,6002,40018,000

ಆರ್‌ಆರ್‌ನಗರ13,0002,4001,60012,000

ದಾಸರಹಳ್ಳಿ8,5002,5004,00015,000

ಪೂರ್ವ4,000--4,000

ದಕ್ಷಿಣ3,000--3,000

ಒಟ್ಟು87,50010,50021,0001,19,000ಪ್ರತಿ ಸಸಿಗೆ ₹3,100

ವೆಚ್ಚದ ಟೆಂಡರ್‌ ರದ್ದು

ನಗರದ ಹೊರವಲಯದಲ್ಲಿ ದಾಬಸಪೇಟೆ-ದೊಡ್ಡಬೆಳವಂಗಲ ನಡುವೆ ನಿರ್ಮಿಸಲಿರುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಎರಡೂ ಬದಿಯಲ್ಲಿ ಪ್ರತಿ ಸಸಿಗೆ ₹3,100 ನಂತೆ 10,900 ಸಸಿಗಳನ್ನು ನೆಡಲು ₹3.4 ಕೋಟಿ ವೆಚ್ಚಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅರಣ್ಯ ವಿಭಾಗ ಆಹ್ವಾನಿಸಿದ್ದ ಟೆಂಡರನ್ನು ರದ್ದು ಪಡಿಸಲಾಗಿದೆ.

ಪ್ರತಿ ಸಸಿಗೆ ದುಬಾರಿ ವೆಚ್ಚ ಮಾಡಲಾಗುತ್ತಿದೆ. ಜತೆಗೆ, ಬಿಬಿಎಂಪಿ ವ್ಯಾಪ್ತಿಯಿಂದ ಹೊರ ಭಾಗದಲ್ಲಿ ಸಸಿ ನೆಟ್ಟು ಬೆಳೆಸಲು ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್‌ ರದ್ದು ಪಡಿಸಲಾಗಿದೆ.

Share this article