ಬೆಂಗಳೂರು : ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಮಾತು ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅನ್ವಯವಾಗಬಹುದು.
ರಸ್ತೆ ಗುಂಡಿ ಮುಚ್ಚುವುದಕ್ಕೆ, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಅಂಡರ್ ಪಾಸ್ ದುರಸ್ತಿಗೆ ನೂರು ನೆಪ ಹೇಳುವ ಬಿಬಿಎಂಪಿಯ ಅಧಿಕಾರಿಗಳು, ಮಾಗಡಿ ರಸ್ತೆಯ ಟೋಲ್‌ಗೇಟ್ ಅಂಡರ್ ಪಾಸ್‌ನ ಥಳಕು ಬಳುಕಿನ ಎಲ್‌ಇಡಿ ವಿದ್ಯುದೀಕರಣಕ್ಕಾಗಿ ಬರೋಬ್ಬರಿ ಮೂರು ಕೋಟಿ ರು. ವೆಚ್ಚ ಮಾಡುತ್ತಿದ್ದಾರೆ.
ಬೆಂಗಳೂರಿನ ರಸ್ತೆಯ ಗುಂಡಿ ಮುಚ್ಚುವುದಕ್ಕೆ, ದುರಸ್ತಿಗೆ ಮತ್ತು ಮಳೆ ನೀರಿಗೆ ತುಂಬುವ ಅಂಡರ್ ಪಾಸ್ ದುರಸ್ತಿಗೆ ದುಡ್ಡಿಲ್ಲ ಎಂದು ಹೇಳುವ ಬಿಬಿಎಂಪಿಯ ಅಧಿಕಾರಿಗಳು ಕೇವಲ ಒಂದು ಅಂಡರ್ ಪಾಸ್‌ನ ಅಂದ ಚಂದ ಹೆಚ್ಚಿಸಲು ಕೋಟಿ ಕೋಟಿ ರು. ವೆಚ್ಚ ಮಾಡುತ್ತಿದ್ದಾರೆ. ಅದರ ಅಗತ್ಯವಿದೆಯೇ ಎಂಬುದನ್ನು ಕೂಡ ಯೋಚಿಸಿಲ್ಲ ಎಂದು ಸಾರ್ವಜನಿಕರ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.
ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ ಮತ್ತು ಗೋವಿಂದರಾಜನಗರದ ನಡುವೆ ಸಂಪರ್ಕ ಕಲ್ಪಿಸುವ ಈ ಅಂಡರ್ ಪಾಸ್ ಕೇವಲ 180 ಮೀಟರ್ ಉದ್ದವಿದೆ. ದುಬೈ, ದೆಹಲಿ, ಹೈದರಾಬಾದ್ ಸೇರಿದಂತೆ ಬೇರೆ ಬೇರೆ ನಗರಗಳ ಮಾದರಿ ತೋರಿಸಿ ಸಾರ್ವಜನಿಕರ ಹಣ ದುಂದು ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
ಕೇವಲ 180 ಮೀಟರ್ ಉದ್ದದ ಅಂಡರ್ ಪಾಸ್‌ಗೆ ವಿದ್ಯುತ್ ದೀಪ ಅಳಡಿಕೆ ಮಾಡುವುದಕ್ಕೆ, ಬಣ್ಣ ಬಳಿಯುವುದಕ್ಕೆ ಮತ್ತು ಪಾದಚಾರಿ ಪುಟ್‌ಪಾತ್ ಅಭಿವೃದ್ಧಿಪಡಿಸುವುದಕ್ಕೆ ಬರೋಬ್ಬರಿ 3 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎನ್ನುವುದು ಆಶ್ಚರ್ಯ ಉಂಟು ಮಾಡಿದೆ.
ಚಾಲಕರ ಕಣ್ಣಿಗೆ ಚುಚ್ಚುವ ಲೈಟ್
ಈಗಾಗಲೇ ಅಂಡರ್ ಪಾಸ್‌ನ ಒಂದು ಕಡೆಯ ಗೋಡೆಗೆ ಎಲ್‌ಇಡಿ ಪ್ರೋಪೈಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ರಾತ್ರಿ ವೇಳೆಯಲ್ಲಿ ವಾಹನ ಚಾಲನೆ ಮಾಡುವ ಚಾಲಕರ ಕಣ್ಣಿಗೆ ಚುಚ್ಚುತ್ತಿದೆ. ಇದರಿಂದ ಅಪಘಾತ ಉಂಟಾಗುವ ಸಾಧ್ಯತೆ ಎಂದು ಬೈಕ್ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ದುಬೈ ಮಾದರಿ ಅಭಿವೃದ್ಧಿ
ರಾತ್ರಿ ವೇಳೆಯಲ್ಲಿ ಅಂಡರ್ ಪಾಸ್‌ಗಳು ಅಂದವಾಗಿ ಕಾಣಬೇಕೆಂದು ದುಬೈ ಸೇರಿದಂತೆ ದೇಶದ ವಿವಿಧ ನಗರದಲ್ಲಿ ಕ್ರಿಸ್ ಕ್ರಾಸ್ ಎಲ್ಇಡಿ ಪ್ರೋಪೈಲ್ ಲೈಟ್‌ಗಳನ್ನು ಅಂಡರ್ ಪಾಸ್‌ನ ಗೋಡೆಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಜತೆಗೆ, ಅಂಡರ್ ಪಾಸ್ ಗೋಡೆಗಳಿಗೆ ಪ್ರತಿ ವರ್ಷ ಬಣ್ಣ ಬಳಿಯುವುದನ್ನು ತಪ್ಪಿಸುವುದಕ್ಕೆ ಎಸಿಪಿ ಬಣ್ಣ ಬಳಿಯಲಾಗುತ್ತಿದ್ದು, ಕನಿಷ್ಠ 10 ವರ್ಷ ಬಾಳಿಕೆ ಬರಲಿದೆ. ಹೊಗೆ, ಧೂಳು ಹಾಗೂ ನೀರಿಗೆ ಈ ಬಣ್ಣ ಹಾಳಾಗುವುದಿಲ್ಲ. ಪ್ರಾಯೋಗಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್ ವಿವರಿಸಿದ್ದಾರೆ.