ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ವಹಿಸುವುದನ್ನು ವಿರೋಧಿಸಿ ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರು ನಾಲ್ಕನೇ ದಿನವಾದ ಗುರುವಾರವೂ ಪ್ರತಿಭಟನೆ ಮುಂದುವರೆಸಿದ್ದು ಬೇಡಿಕೆ ಈಡೇರಿಸುವವರೆಗೂ ಅನಿರ್ಧಿಷ್ಟಾವಧಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.ಪ್ರತಿಭಟನೆ ನಡೆಯುತ್ತಿರುವ ಸ್ವಾತಂತ್ರ್ಯ ಉದ್ಯಾನ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್. ಆಶೋಕ್ ಭೇಟಿ ನೀಡಿ ಬೆಂಬಲಿಸಿ, ಸರ್ಕಾರದ ನಿರ್ಧಾರದಿಂದ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಅವರ ಹಲವು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರು ಈಗ ಬೇರೆ ಕೆಲಸ ಹುಡುಕುವಂತಾಗಿದೆ. ಸರ್ಕಾರ ಕೂಡಲೇ ಈ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಿ ಇದುವರೆಗೆ ಸೇವೆ ಮಾಡುತ್ತಿದ್ದ ಶಾಲೆಗಳಲ್ಲೇ ಮುಂದುವರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಿಸುವ ಸಂಸ್ಥೆಯನ್ನು ರದ್ದು ಮಾಡಬೇಕು, ಹೊರಗುತ್ತಿಗೆ ಶಿಕ್ಷಕರಿಗೆ ಬಿಬಿಎಂಪಿಯಿಂದಲೇ ನೇರವಾಗಿ ವೇತನ ಪಾವತಿಸಬೇಕು. ಮಹಿಳಾ ಶಿಕ್ಷಕಿ-ಉಪನ್ಯಾಸಕರಿಗೆ ಸರ್ಕಾರದಿಂದ ಸಿಗುವಂತೆ ಹೆರಿಗೆ ರಜೆ, ಮಕ್ಕಳ ಅನಾರೋಗ್ಯ ರಜೆ ಸೇರಿದಂತೆ ವೇತನ ಸಹಿತ ರಜೆಗಳನ್ನು ಹೊರಗುತ್ತಿಗೆ ಮಹಿಳಾ ಶಿಕ್ಷಕಿಯರಿಗೂ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಈ ಎಲ್ಲ ಬೇಡಿಕೆಗಳ ಈಡೇರಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಶಿಕ್ಷಕರು ಪಟ್ಟು ಹಿಡಿದಿದ್ದಾರೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮತಕ್ಕಾಗಿ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ನೇಮಕಾತಿ ಸೇರಿದಂತೆ ಎಲ್ಲ ಬಗೆಯ ನೇಮಕಾತಿಗಳನ್ನು ಮಾಡುತ್ತೇವೆ ಎಂದು ಹೇಳಿದ್ದರು. ಗೆದ್ದ ನಂತರ ಈಗ ಕೈ ಕೊಟ್ಟಿದ್ದಾರೆ. ಕೈ ಕೊಡುವುದರಲ್ಲೇ ಇವರು ಪರಿಣತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದಂತೆಯೇ ನಡೆಯಬೇಕಿತ್ತು. ಹೊರಗುತ್ತಿಗೆ ಶಿಕ್ಷಕರಿಗೆ ಮೊದಲಿನಂತೆ ನೇರ ಸಂಬಳ ನೀಡುವ ಬೇಡಿಕೆಯನ್ನು ನಾನು ಕೂಡ ಬೆಂಬಲಿಸುತ್ತೇನೆ ಎಂದರು.ಪ್ರತಿಭಟನೆ ಮಾಡುವುದು ಪ್ರತಿ ನಾಗರಿಕರ ಹಕ್ಕು. ಅದನ್ನು ಇಷ್ಟೇ ಸಮಯ ಮಾಡಬೇಕು ಎನ್ನಲು ಯಾರಿಗೂ ಅಧಿಕಾರ ಇಲ್ಲ. ಈ ತುಘಲಕ್ ಸರ್ಕಾರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವುದೂ ಇಲ್ಲ, ಪ್ರತಿಭಟನೆಗೂ ಅವಕಾಶ ನೀಡುವುದಿಲ್ಲ. ಪೊಲೀಸ್ ಅಧಿಕಾರಿಗಳು ಕಾನೂನು ಪಾಲಿಸಬೇಕೆ ಹೊರತು ಪ್ರತಿಭಟಕಾನಾರರನ್ನು ಓಡಿಸಬಾರದು. ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಮಾಡುವ ಪ್ರವೃತ್ತಿ ಬಿಡಬೇಕು. ಇಲ್ಲದಿದ್ದರೆ ಅದು ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು.