ಮಳೆ ಹಾನಿ ಸಂಕಷ್ಟದಲ್ಲಿದ್ದವರಿಗೆ ಬಿಬಿಎಂಪಿ ನೀರು, ಹಾಲು, ಬ್ರೆಡ್‌

KannadaprabhaNewsNetwork | Published : Oct 17, 2024 12:47 AM

ಸಾರಾಂಶ

ಮಳೆ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಯಲಹಂಕ ವಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿರಾಶ್ರಿತರಿಗೆ ಹಾಲು, ಬ್ರೆಡ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಯಲಹಂಕ ವಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಲಾವೃತಗೊಂಡಿದ್ದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ ಅವರು, ಸದ್ಯ ಇರುವ ನೀರುಗಾಲುವೆಯ ಪಕ್ಕ ಖಾಸಗಿ ಜಾಗದಲ್ಲಿ ಕಚ್ಚಾ ಡ್ರೈನ್ ಮಾಡಿಸಲು ತಿಳಿಸಿದರು. ಎರಡು ಅಗ್ನಿ ಶಾಮಕ ವಾಹನಗಳಿಂದ ಪಂಪ್ ಮೂಲಕ ನೀರನ್ನು ಹೊರ ಹಾಕಲಾಯಿತು. ನಿವಾಸಿಗಳಿಗಳಿಗೆ ಕುಡಿಯುವ ನೀರು, ಹಾಲು, ಬ್ರೆಡ್, ಬಿಸ್ಕೆಟ್ ಇನ್ನಿತರೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಯಲಹಂಕ ಕೆರೆಗೆ ಉತ್ತರ, ದಕ್ಷಿಣದಲ್ಲಿ ಕೋಡಿಗಳಿವೆ. ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ ಕಡೆಗಿನ ಉತ್ತರ ಕೋಡಿಯಿಂದ ನೀರಿನ ಹರಿವನ್ನು ಕಡಿಮೆ ಮಾಡಬೇಕಿದೆ. ಈ ಸಂಬಂಧ ದಕ್ಷಿಣದ ಕೋಡಿಯಲ್ಲಿ ನೀರಿನ‌ ಹರಿವಿನ ಮಟ್ಟ ಹೆಚ್ಚಿಸಿದಾಗ ಉತ್ತರದ ಕೋಡಿಯಲ್ಲಿ ನೀರಿನ ಹರಿವಿನ ಮಟ್ಟ ಕಡಿಮೆಯಾಗಲಿದೆ. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ಗೆ ಭೇಟಿ ನೀಡಿದ ಅವರು, ಲೇಔಟ್‌ಗೆ ಬರುವ ನೀರು ತಡೆಯಲು ಹಾಗೂ ಲೇಔಟ್‌ನಲ್ಲಿ ನಿಂತಿರುವ ನೀರನ್ನು ಪಂಪ್ ಮೂಲಕ ತೆರವುಗೊಳಿಸಸಲು ತಿಳಿಸಿದರು.ಶಾಶ್ವತ ಪರಿಹಾರಕ್ಕೆ ಸೂಚನೆ

ಬುಧವಾರ ಬೆಳಗ್ಗೆ ವರ್ಚುವಲ್ ಮೂಲಕ ಸಭೆ ನಡೆಸಿದ ತುಷಾರ್‌ ಗಿರಿನಾಥ್‌, ಅಧಿಕಾರಿಗಳು ಆಯಾ ವಲಯ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಸ್ಥಳದಲ್ಲಾಗಿರುವ ಸಮಸ್ಯೆ ಬಗ್ಗೆ ಅವಲೋಕಿಸಿ ಆ ಸ್ಥಳದಲ್ಲಿ ಶಾಶ್ವತ ಪರಿಹಾರ ಹುಡುಕಿ ಎಂದು ಸೂಚಿಸಿದರು.

ಈ ವೇಳೆ ವಲಯ ಆಯುಕ್ತರಾದ ಕರೀಗೌಡ, ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿಮ್, ಮುಖ್ಯ ಅಭಿಯಂತರ ರಂಗನಾಥ್, ಕಾರ್ಯಪಾಲಕ ಅಭಿಯಂತರ ಸುಧಾಕರ್ ರೆಡ್ಡಿ ಇದ್ದರು.

ಸಮೀಕ್ಷೆ: ಅರ್ಹರಿಗೆ ಪರಿಹಾರ

ಮನೆಗಳಿಗೆ ನೀರು ನುಗ್ಗಿರುವಂತಹ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯ ನಡೆಯುತ್ತಿದ್ದು, ಶೀಘ್ರ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

Share this article