ಕೊಲೆ ಪ್ರಕರಣ : ಬಿಕಾಂ ವಿದ್ಯಾರ್ಥಿ ಸೇರಿ 4 ಸುಪಾರಿ ಹಂತಕರ ಸೆರೆ

KannadaprabhaNewsNetwork |  
Published : Jul 23, 2025, 01:45 AM ISTUpdated : Jul 23, 2025, 10:01 AM IST
 Bikkalu Shiva accused

ಸಾರಾಂಶ

ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಸರ್ಕಾರಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸೇರಿದಂತೆ ನಾಲ್ವರು ಸುಪಾರಿ ಹಂತಕರನ್ನು ಪೂರ್ವ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.

 ಬೆಂಗಳೂರು :  ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಸರ್ಕಾರಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸೇರಿದಂತೆ ನಾಲ್ವರು ಸುಪಾರಿ ಹಂತಕರನ್ನು ಪೂರ್ವ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದಿಣ್ಣಹಳ್ಳಿಯ ಅವಿನಾಶ್‌, ಸುದರ್ಶನ್‌, ಮುರುಗೇಶ್‌ ಹಾಗೂ ನರಸಿಂಹ ಬಂಧಿತರಾಗಿದ್ದು, ಹತ್ಯೆ ಬಳಿಕ ದಿಣ್ಣಹಳ್ಳಿಯಲ್ಲಿ ಅಡಗಿದ್ದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಅವರ ಮಾರ್ಗದರ್ಶನದಲ್ಲಿ ಹಲಸೂರು ಉಪ ವಿಭಾಗದ ಎಸಿಪಿ ಟಿ.ರಂಗಪ್ಪ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹತ್ಯೆ ಬಳಿಕ 1.3 ಲಕ್ಷ ಸಂದಾಯ

ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರ ಆಪ್ತ ಎನ್ನಲಾದ ಕಿರಣ್ ಮೂಲಕ ರೌಡಿ ಹತ್ಯೆಗೆ ಮಾಲೂರು ಹುಡುಗರನ್ನು ಸಜ್ಜುಗೊಳಿಸಲಾಗಿತ್ತು. ಶಾಸಕರ ಹುಟ್ಟು ಹಬ್ಬದ ಆಚರಣೆಗಳಿಗೆ ಮುರುಗೇಶ್ ಪಾಳ್ಯದ ಶಾಸಕರ ಬೆಂಬಲಿಗನೊಬ್ಬನ ಮೂಲಕ ಕಿರಣ್‌ಗೆ ಅವಿನಾಶ್‌, ಮುರುಗೇಶ್‌, ಸುದರ್ಶನ್ ಹಾಗೂ ನರಸಿಂಹ ಪರಿಚಯವಾಗಿದ್ದರು. ರೌಡಿಸಂ ಬಗ್ಗೆ ವಿಪರೀತ ಕ್ರೇಜ್ ಹೊಂದಿದ್ದ ಈ ನಾಲ್ವರು, ಹೆಣ್ಣೂರಿನ ಜಗದೀಶ ಅಲಿಯಾಸ್ ಜಗ್ಗ ಸೇರಿದಂತೆ ನಗರದ ಕೆಲವು ಪಾತಕಿಗಳ ಜತೆ ಪೋಟೋ ತೆಗೆಸಿಕೊಂಡು ಶೋಕಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಈ ರೌಡಿಸಂ ಹುಚ್ಚಿನಿಂದಲೇ ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆಗೆ ಮಾಲೂರು ಹುಡುಗರನ್ನು ಕಿರಣ್ ಹಾಗೂ ವಿಮಲ್ ಸಜ್ಜುಗೊಳಿಸಿದ್ದರು. ಈ ಹತ್ಯೆ ಬಳಿಕ ಆರೋಪಿಗಳಿಗೆ 1.3 ಲಕ್ಷ ರು.ಗಳನ್ನು ಕಿರಣ್ ಹಾಗೂ ವಿಮಲ್ ಕೊಟ್ಟಿದ್ದರು. ಪೂರ್ವಯೋಜಿತ ಸಂಚಿನಂತೆ ಜು.15 ರಂದು ಮಂಗಳವಾರ ರಾತ್ರಿ ಹಲಸೂರು ಕೆರೆ ಸಮೀಪ ಬಿಕ್ಲು ಶಿವನ ಮೇಲೆ ಭೀಕರವಾಗಿ ದಾಳಿ ನಡೆಸಿ ಹತ್ಯೆಗೈದು ಈ ನಾಲ್ವರು ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆಗಿಳಿದ ಪೊಲೀಸರು, ಹತ್ಯೆ ನಡೆದ ಕೆಲವೇ ತಾಸಿನಲ್ಲಿ ಕಿರಣ್ ಹಾಗೂ ವಿಮಲ್ ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದರು. ಈ ಆರೋಪಿಗಳ ಸಂಪರ್ಕ ಜಾಲವನ್ನು ಶೋಧಿಸಿದಾಗ ಮಾಲೂರು ಹುಡುಗರ ಮಾಹಿತಿ ಸಿಕ್ಕಿದೆ. ಈ ಸುಳಿವು ಲಭ್ಯವಾದ ಕೂಡಲೇ ಮಾಲೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಎಸಿಪಿ ರಂಗಪ್ಪ ನೇತೃತ್ವದ ತಂಡವು ಬಂಧಿಸಿದೆ ಎಂದು ತಿಳಿದು ಬಂದಿದೆ.

ಹಂತಕರಲ್ಲಿ ಬಿಕಾಂ ವಿದ್ಯಾರ್ಥಿ

ಈ ನಾಲ್ವರು ಆರೋಪಿಗಳ ಪೈಕಿ ಸರ್ಕಾರಿ ಕಾಲೇಜೊಂದರಲ್ಲಿ ನರಸಿಂಹ ಬಿಕಾಂ ಓದುತ್ತಿದ್ದ. ಇನ್ನುಳಿದವರು ಲಾರಿ ಚಾಲಕ ಹಾಗೂ ಗಾರೆ ಕೆಲಸ ಮಾಡಿಕೊಂಡಿದ್ದರು. ಈ ಹುಡುಗರಿಗೆ ಹಣದ ಆಮಿಷ ಹಾಗೂ ರೌಡಿಸಂ ಹುಚ್ಚಿನಿಂದ ರೌಡಿ ಬಿಕ್ಲು ಶಿವನ ಹತ್ಯೆಯಲ್ಲಿ ಜಗ್ಗನ ಸಹಚರರು ಬಳಸಿದ್ದರು ಎಂದು ಮೂಲಗಳು ತಿಳಿಸಿವೆ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್