ಪೆರಿಫೆರಲ್ ರಸ್ತೆಗೆ ಭೂಸ್ವಾಧೀನಕ್ಕೆ ಬಿಡಿಎ ಸಿದ್ಧತೆ

KannadaprabhaNewsNetwork | Updated : Oct 04 2024, 01:09 AM IST

ಸಾರಾಂಶ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ನಿರ್ಮಾಣಕ್ಕೆ ಕೊನೆಗೂ ಕಾಲಕೂಡಿ ಬಂದಿದ್ದು ಭೂಸ್ವಾಧೀನ ಪ್ರಕ್ರಿಯೆ ಕಾರ್ಯಕ್ಕೆ ಒಂಬತ್ತು ಮಂದಿ(ಕೆಎಎಸ್‌) ಭೂಸ್ವಾಧೀನ ಅಧಿಕಾರಗಳನ್ನು ಬಿಡಿಎ ನೇಮಕ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ನಿರ್ಮಾಣಕ್ಕೆ ಕೊನೆಗೂ ಕಾಲಕೂಡಿ ಬಂದಿದ್ದು ಭೂಸ್ವಾಧೀನ ಪ್ರಕ್ರಿಯೆ ಕಾರ್ಯಕ್ಕೆ ಒಂಬತ್ತು ಮಂದಿ(ಕೆಎಎಸ್‌) ಭೂಸ್ವಾಧೀನ ಅಧಿಕಾರಗಳನ್ನು ಬಿಡಿಎ ನೇಮಕ ಮಾಡಿದೆ.

ಈ ನಡುವೆ ಪೆರಿಫೆರಲ್‌ ವರ್ತುಲ ರಸ್ತೆ ಹೆಸರನ್ನು ಬದಲಿಸಿರುವ ಬಿಡಿಎ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಎಂದು ಮರುನಾಮಕರಣ ಮಾಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಪಿಆರ್‌ಆರ್‌ ಯೋಜನೆ ಅನುಷ್ಠಾನಗೊಳಿಸಲು ಹಲವು ಬಾರಿ ಟೆಂಡರ್‌ ಕರೆದರೂ ಯಾವುದೇ ಕಂಪನಿ ಆಸಕ್ತಿ ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಅಂದಾಜು ₹37 ಸಾವಿರ ಕೋಟಿ ಸಾಲ ಮಾಡಿ, ತಾನೇ ಖುದ್ದಾಗಿ ಯೋಜನೆ ಪೂರ್ಣಗೊಳಿಸಲು ಬಿಡಿಎ ಯೋಜನೆ ರೂಪಿಸಿದೆ.

ಈ ಯೋಜನೆಯಲ್ಲಿ ತುಮಕೂರು ರಸ್ತೆಯನ್ನು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 100 ಮೀಟರ್‌ ಅಗಲದ ಎಂಟು ಪಥದ 74 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮೂರ್ನಾಲ್ಕು ಬಾರಿ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ, ಬಿಡ್‌ ಮಾಡಲು ಯಾರೂ ಆಸಕ್ತಿ ತೋರಿರಲಿಲ್ಲ. ಜತೆಗೆ ರೈತರಿಗೆ ಭೂಪರಿಹಾರ ನಿಗದಿ ವಿಚಾರದಲ್ಲೂ ಸಾಕಷ್ಟು ಗೊಂದಲಗಳಿದ್ದವು. ಹೀಗಾಗಿ ಯೋಜನೆ ವಿಳಂಬವಾಗಿತ್ತು.

ಪಿಆರ್‌ಆರ್‌ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 1,800 ಎಕರೆ ಭೂಸ್ವಾಧೀನಕ್ಕೆ 2007ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಎರಡನೇ ಹಂತದಲ್ಲಿ 2022ರಲ್ಲಿ 600 ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ರಸ್ತೆ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿರುವ ಬಿಡಿಎ ಅಧಿಕಾರಿಗಳು ಸುಮಾರು ನಾಲ್ಕು ಸಾವಿರ ರೈತರಿಗೆ ಭೂಮಿ ಬಿಟ್ಟುಕೊಡುವಂತೆ ನೋಟಿಸ್‌ ನೀಡಿದ್ದಾರೆ.₹37 ಸಾವಿರ ಕೋಟಿ ಅಂದಾಜು: 74 ಕಿ.ಮೀ. ಉದ್ದದ ತುಮಕೂರು ರಸ್ತೆ- ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ಗೆ 30ರಿಂದ 37 ಸಾವಿರ ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಭೂಮಾಲೀಕರಾಗಿರುವ ರೈತರಿಗೆ ಪರಿಹಾರ ಕೊಡಲು 7ರಿಂದ 8 ಸಾವಿರ ಕೋಟಿ ರು. ಖರ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಎಂಟು ಪಥದ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ನಿರ್ಮಿಸಲಾಗುತ್ತಿದ್ದು, ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಈ ರಸ್ತೆಯು ಹೆಸರುಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್‌ ರಸ್ತೆ, ಹೊಸಕೋಟೆ ರಸ್ತೆ ಮತ್ತು ಸರ್ಜಾಪುರ ರಸ್ತೆ ಸೇರಿದಂತೆ 77 ಗ್ರಾಮಗಳ ಮೂಲಕ ಹಾದು ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. 17 ವರ್ಷದ ಹಳೆ ಯೋಜನೆ: 2007ರಲ್ಲಿ ಪಿಆರ್‌ಆರ್‌ ನಿರ್ಮಾಣಕ್ಕಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ನ್ಯಾಯಾಲಯದಲ್ಲಿ ಈ ಯೋಜನೆ ಕುರಿತಂತೆ ವಿಚಾರಣೆ ನಡೆದಿದ್ದು, ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಲು ಆದೇಶ ನೀಡಿದೆ. ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಪಿಆರ್‌ಆರ್‌ ಯೋಜನೆ ಕುರಿತು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಖುದ್ದು ಬಿಡಿಎ ಪಿಆರ್‌ಆರ್‌ ನಿರ್ಮಾಣ ಮಾಡಲು ಮುಂದಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಒಂಬತ್ತು ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.

Share this article