ಬೆಂಗಳೂರು : ತನ್ನ ಆದಾಯ ಹೆಚ್ಚಿಸಿಕೊಳ್ಳಲು ಖಾಸಗಿ ಸಹಭಾಗಿತ್ವದಲ್ಲಿ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ವಾಣಿಜ್ಯ ಸಂಕೀರ್ಣಗಳಿಗೆ ಆತ್ಯಾಧುನಿಕ ಸ್ಪರ್ಶ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮುಂದಾಗಿದೆ.
ಬಿಡಿಎ ಅಧೀನದಲ್ಲಿರುವ ವಿವಿಧ ಬಡಾವಣೆಗಳಲ್ಲಿರುವ ಶಿಥಿಲ ವಾಣಿಜ್ಯ ಸಂಕೀರ್ಣಗಳನ್ನು ಎಂಎಫ್‌ಎಆರ್ ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲು ಬಿಡಿಎ ನಿರ್ಧರಿಸಿದೆ. ಈಗಾಗಲೇ ಕಾಮಗಾರಿಗಳನ್ನು ಆರಂಭಿಸಿದೆ. ಈ ಕಂಪನಿಯು ವಾಣಿಜ್ಯ ಸಂಕೀರ್ಣಗಳನ್ನು 70:30 ಅನುಪಾತದಲ್ಲಿ ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಿದ್ದು, 30 ವರ್ಷಗಳ ಅವಧಿವರೆಗೆ ನಿರ್ವಹಣೆ ಮಾಡಲಿದೆ.
ಮೂವತ್ತು ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವ ಎಂಎಫ್‍ಎಆರ್ ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ವಾಣಿಜ್ಯ ಸಂಕೀರ್ಣದ ಒಟ್ಟು ನಿರ್ಮಿತಿ ಪ್ರದೇಶದ ಶೇ. 70ರಷ್ಟು ಜಾಗ ಲಭಿಸಲಿದೆ. ಉಳಿದ ಶೇ. 30ರಷ್ಟು ಜಾಗವು ಬಿಡಿಎಗೆ ಪಾಲಿಗೆ ಬರಲಿದೆ. ಈ ಸಂಕೀರ್ಣದಲ್ಲಿ ಬರುವ ಲಾಭದ ಶೇ.30ರಷ್ಟು ಲಾಭಾಂಶ ಪ್ರಾಧಿಕಾರಕ್ಕೆ ಸಿಗಲಿದೆ. ಆದರೆ, ವಾಣಿಜ್ಯ ಮಳಿಗೆಗಳ ನಿರ್ಮಾಣ, ನಿರ್ವಹಣೆ ಕಂಪನಿಯ ಜವಾಬ್ದಾರಿಯಾಗಿದೆ. ಗುತ್ತಿಗೆ ಅವಧಿ ಮುಗಿದ ಬಳಿಕ ಸಂಕೀರ್ಣವನ್ನು ಬಿಡಿಎ ವಶಕ್ಕೆ ಪಡೆಯಲಾಗುತ್ತದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಿಡಿಎ ಅಧೀನದಲ್ಲಿರುವ ಇಂದಿರಾನಗರ, ಕೋರಮಂಗಲ, ಆರ್‌ಎಂವಿ ಮಿನಿ ಮಾರುಕಟ್ಟೆ ಆಸ್ಟಿನ್ ಟೌನ್, ದೊಮ್ಮಲೂರು, ಎಚ್‍ಎಸ್‍ಆರ್ ಲೇಔಟ್, ನಾಗರಬಾವಿ, ಆರ್.ಟಿ.ನಗರ, ಎಚ್‍ಬಿಆರ್ ಲೇಔಟ್, ಬನಶಂಕರಿ 2ನೇ ಹಂತ, ವಲಗೇರಹಳ್ಳಿ, ಹಲಗೇವಡೇರಹಳ್ಳಿ, ದೊಡ್ಡಬನಹಳ್ಳಿಯಲ್ಲಿ ವಾಣಿಜ್ಯ ಸಂಕೀರ್ಣಗಳಿವೆ. ಇವುಗಳಲ್ಲಿ ಬಹುತೇಕ ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿವೆ. ಮೂಲಸೌಕರ್ಯಗಳ ವ್ಯವಸ್ಥೆಯೂ ಹೇಳಿಕೊಳ್ಳುವಂತಿಲ್ಲ. ಒಳ್ಳೆಯ ಕಂಪನಿಗಳು ಈ ವಾಣಿಜ್ಯ ಮಳಿಗೆಗಳಿಗೆ ಶಾಪ್ ತೆರೆಯಲು ಮುಂದಾಗುತ್ತಿಲ್ಲ ಎಂಬ ಆರೋಪವೂ ಇದೆ. ಹಾಗೆಯೇ ಗ್ರಾಹಕರು ಕೂಡ ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು ಸೇರಿದಂತೆ ಇತರೆಡೆಗೆ ಹೋಗುತ್ತಿದ್ದಾರೆ. ಆದ್ದರಿಂದ ಬಿಡಿಎ ವಾಣಿಜ್ಯ ಮಳಿಗೆಗಳನ್ನು ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬಿಡಿಎ ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ಆರಂಭಿಸಿದೆ.- - -
ಆದಾಯ ಹೆಚ್ಚಳ ನಿರೀಕ್ಷೆ: 2021-22ನೇ ಸಾಲಿಗೆ ಹೋಲಿಸಿದರೆ 2022-23ನೇ ಸಾಲಿನಲ್ಲಿ ವಾಣಿಜ್ಯ ಸಂಕೀರ್ಣಗಳಿಂದ ಸಂಗ್ರಹವಾದ ಬಾಡಿಗೆ ಆದಾಯವು ದುಪ್ಪಟ್ಟಾಗಿದೆ. ಅಂದರೆ 5.53 ಕೋಟಿ ರು. ನಿಂದ 10.17 ಕೋಟಿ ರು.ಗಳಿಗೆ ಏರಿಕೆಯಾಗಿದೆ. ನಗರದ 15 ವಾಣಿಜ್ಯ ಸಂಕೀರ್ಣಗಳ ಪೈಕಿ ಎಚ್‍ಎಸ್‍ಆರ್ ಲೇಔಟ್‍ನ ಬಿಡಿಎ ಕಾಂಪ್ಲೆಕ್ಸ್ ನಿಂದ ಅಧಿಕ ವರಮಾನ ಬರುತ್ತಿದೆ. ಬನಶಂಕರಿ, ಪಾಪರೆಡ್ಡಿಪಾಳ್ಯ ಸಮೀಪದ ಕಾಂಪ್ಲೆಕ್ಸ್ ಸೇರಿದಂತೆ ಇತರೆಡೆ ಉತ್ತಮ ಆದಾಯ ತರುವಂತ ವಾಣಿಜ್ಯ ಮಳಿಗೆಗಳು ಇದ್ದರೂ, ಸೌಲಭ್ಯದ ಕೊರತೆಯಿಂದ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ.
ವಾಣಿಜ್ಯ ಸಂಕೀರ್ಣದಲ್ಲಿ ಶಾಪಿಂಗ್ ಮಳಿಗೆಗೆ ಮಾತ್ರ ಆದ್ಯತೆ ನೀಡದೆ, ಮನೋರಂಜನಾ ಚಟುವಟಿಕೆಗೂ ಪ್ರಾಮುಖ್ಯತೆ ನೀಡುವ ಉದ್ದೇಶವಿದೆ. ಖಾಸಗಿ ಸಹಭಾಗಿತ್ವದಲ್ಲಿ ಮಾಲ್ ಮಾದರಿಯಲ್ಲೇ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸುವ ಚಿಂತನೆ ಇದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಧುನಿಕರಣಕ್ಕೆ ಆದ್ಯತೆ ನೀಡಲಾಗುವುದು. ಇದರಿಂದ ಆದಾಯವೂ ಜಾಸ್ತಿಯಾಗಲಿದೆ ಎಂಬ ನಿರೀಕ್ಷೆ ಮಾಡಲಾಗಿದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.