ಕನ್ನಡಪ್ರಭ ವಾರ್ತೆ ಹೊಸಪೇಟೆ
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ನ ಚುನಾವಣೆಯಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಏಕೈಕ ಮತದಿಂದ ಪರಾಭವಗೊಂಡಿದ್ದು, ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ, ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ, ಮಾಜಿ ಸಚಿವ ಆನಂದ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್ ಮತ್ತು ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ವೈ. ಅಣ್ಣಪ್ಪ ಗೆಲುವಿನ ನಗೆ ಬೀರಿದ್ದಾರೆ.ಬಿಡಿಸಿಸಿ ಬ್ಯಾಂಕ್‌ನ 14 ನಿರ್ದೇಶಕರ ಸ್ಥಾನಗಳ ಪೈಕಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಈಗ 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 11 ಸ್ಥಾನಗಳ ಫಲಿತಾಂಶ ಬಂದಿದೆ. ಸಿರುಗುಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮೊಕದ್ದಮೆ ಧಾರವಾಡ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫಲಿತಾಂಶ ಬಹಿರಂಗಪಡಿಸಿಲ್ಲ.
ಪಿಟಿಪಿ ಸೋಲಿಸಿದ ಐಗೋಳ್:ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೂವಿನಹಡಗಲಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದರು. ಈ ಸಂಘದಲ್ಲಿ 19 ಮತದಾರರಿದ್ದು, ಒಂದು ಕಾಲದಲ್ಲಿ ಅವರ ಶಿಷ್ಯರಾಗಿದ್ದ ಐಗೋಳ್ ಚಿದಾನಂದ್ ಅವರು 10 ಮತ ಪಡೆದು, ಒಂದು ಮತದ ಅಂತರದಿಂದ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ಸೋಲಿಸಿದರು.
ಭೀಮಾನಾಯ್ಕಗೆ ಜಯ:ಹಗರಿಬೊಮ್ಮನಹಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಕೆಎಂಎಫ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಭೀಮಾನಾಯ್ಕ 12 ಮತಗಳನ್ನು ಪಡೆದು, ತನ್ನ ಪ್ರತಿಸ್ಪರ್ಧಿ ಚಂದ್ರಶೇಖರ್ ಟಿ. ವಿರುದ್ಧ ಜಯಗಳಿಸಿದರು. ಚಂದ್ರಶೇಖರ್ 3 ಮತಗಳನ್ನು ಗಳಿಸಿದರು.
ಶಾಸಕಿ ಲತಾಗೆ ಭರ್ಜರಿ ಜಯ:ಇತರ ಸಹಕಾರ ಸಂಘಗಳ ಕ್ಷೇತ್ರದಿಂದ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರು 57 ಮತಗಳಿಂದ ಭರ್ಜರಿ ಗೆಲುವು ದಾಖಲಿಸಿದರು. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಗಂಗಾಧರ್ 25, ಪಿ. ಕವಿತಾ 14 ಮತಗಳನ್ನು ಗಳಿಸಿದರು. ಒಂದು ಮತ ಕುಲಗೆಟ್ಟಿದೆ.
ಸಂದೀಪ್ ಸಿಂಗ್‌ಗೆ ಜಯ:ಮಾಜಿ ಸಚಿವ ಆನಂದ ಸಿಂಗ್ ಅಳಿಯ ಸಂದೀಪ್ ಸಿಂಗ್ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಐದು ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಬಾದಾಮಿ ಮೃತ್ಯುಂಜಯ ಎರಡು ಮತಗಳನ್ನು ಗಳಿಸಿದರು. ಒಂದು ಮತ ಕುಲಗೆಟ್ಟ ಮತ ಎಂದು ಪರಿಗಣಿಸಲಾಯಿತು.
ಸಂಸದರ ಪುತ್ರನಿಗೆ ಅದೃಷ್ಟ:ಸಂಸದ ವೈ. ದೇವೇಂದ್ರಪ್ಪರ ಪುತ್ರ ವೈ. ಅಣ್ಣಪ್ಪ ಲಾಟರಿ ಮೂಲಕ ಜಯ ಗಳಿಸಿದರು. ಹರಪನಹಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಅವರಿಗೆ 11 ಮತಗಳು, ಅವರ ಪ್ರತಿಸ್ಪರ್ಧಿ ಬಿ.ಕೆ. ಪ್ರಕಾಶಗೂ 11 ಮತಗಳು ಬಂದಿದ್ದವು, ಒಂದು ಮತ ಕುಲಗೆಟ್ಟ ಮತ ಎಂದು ಪರಿಗಣಿತವಾಗಿತ್ತು. ಆಗ ಚುನಾವಣಾಧಿಕಾರಿಗಳು ಚೀಟಿ ಎತ್ತು ಮೂಲಕ ಫಲಿತಾಂಶ ನಿರ್ಧರಿಸಿದರು.
ಮೂಕಯ್ಯಸ್ವಾಮಿಗೆ ಜಯ:ಕಂಪ್ಲಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮೂವರು ನಾಮಪತ್ರ ಸಲ್ಲಿಸಿದ್ದರು. ಗುಬಾಜಿ ಪಂಪಾಪತಿ, ಪಿ. ಮೂಕಯ್ಯಸ್ವಾಮಿ, ಎಸ್. ಮಾರೇಶ್ ಕಣದಲ್ಲಿದ್ದರು. ಚಲಾವಣೆಯಾದ ನಾಲ್ಕು ಮತಗಳನ್ನು ಪಡೆದ ಮೂಕಯ್ಯಸ್ವಾಮಿ ಜಯಶಾಲಿಯಾದರು.
ದಾರುಕೇಶ್‌ಗೆ ಒಲಿದ ಲಾಟರಿ!ಕೊಟ್ಟೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹತ್ತು ಮತದಾರರಿದ್ದರು. ಐ. ದಾರುಕೇಶ್, ಕೆ. ಭರಮರೆಡ್ಡಿ ತಲಾ ಐದು ಮತಗಳನ್ನು ಗಳಿಸಿದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಐ. ದಾರುಕೇಶ್ ಜಯಗಳಿಸಿದರು.
ಹುಲುಗಪ್ಪಗೆ ಒಲಿದ ಕುರುಗೋಡು:ಕುರುಗೋಡು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹುಲುಗಪ್ಪ ನಾಯಕರ 3 ಮತಗಳನ್ನು ಪಡೆದು ಜಯಗಳಿಸಿದರು. ಎನ್. ಮಂಜುನಾಥ ಎರಡು ಮತಗಳನ್ನು ಪಡೆದರು.
ನವೀನ್‌ಗೆ ಗೆಲುವು:ಬಳ್ಳಾರಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಿ. ನವೀನ್ ಕುಮಾರ ರೆಡ್ಡಿ 12 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಡಿ. ಬೋಗಾರೆಡ್ಡಿ ಐದು ಮತಗಳನ್ನು ಗಳಿಸಿದರು. ಅನಿಲ್ ವಿರುದ್ಧ ಆನಂದಗೆ ಜಯ:ಹೊಸಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎಲ್. ಎಸ್. ಆನಂದ 10 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಅನಿಲ್ ಜೋಶಿ 7 ಮತಗಳನ್ನು ಪಡೆದರು. ಪಿ. ವಿಶ್ವನಾಥಗೆ ಗೆಲುವು:ಅರ್ಬನ್ ಬ್ಯಾಂಕ್ ಮತ್ತು ಪತ್ತಿನ ಸಹಕಾರ ಸಂಘದಿಂದ ಪಿ. ವಿಶ್ವನಾಥ 15 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಗಳಾದ ಕೊಳೂರು ಮಲ್ಲಿಕಾರ್ಜುನ ಗೌಡ 5, ಪ್ರಿಯಾಂಕಾ ಜೈನ್ 1, ಜೆ. ಮಂಜುನಾಥ 11 ಮತಗಳನ್ನು ಪಡೆದರು. ಸಿರುಗುಪ್ಪ ಕ್ಷೇತ್ರದ ನ್ಯಾಯಾಲಯದಲ್ಲಿ ಮೊಕದ್ದಮೆ:ಸಿರುಗುಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ, ಸಹಕಾರ ಧುರೀಣ ಚೊಕ್ಕ ಬಸವನಗೌಡ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಹೊಸದಾಗಿ ಮೂವರು ಮತದಾರರನ್ನು ಸೇರ್ಪಡೆ ಮಾಡಲಾಗಿದ್ದನ್ನು ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಹಾಗಾಗಿ ಧಾರವಾಡ ಹೈಕೋರ್ಟ್ ಫಲಿತಾಂಶ ಘೋಷಣೆಗೆ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ಫಲಿತಾಂಶ ಘೋಷಣೆ ಮಾಡಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ.ಇಬ್ಬರು ನಿರ್ದೇಶಕರು ಅವಿರೋಧ ಆಯ್ಕೆ:ಕೂಡ್ಲಿಗಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆ. ತಿಪ್ಪೇಸ್ವಾಮಿ ಮತ್ತು ಸಂಡೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಜೆ.ಎಂ. ಶಿವಪ್ರಸಾದ್ ಅವಿರೋಧ ಆಯ್ಕೆ ಆಗಿದ್ದಾರೆ. ಈ ಕ್ಷೇತ್ರಗಳಿಗೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದವು.ಇದೊಂದು ಅವಕಾಶ:
ಬಿಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದೆ. ಕೃಷಿಕರ ಪರವಾಗಿ ಕೆಲಸ ಮಾಡಲು ಇದೊಂದು ಅವಕಾಶ. ನಾನು ಕೂಡ ರೈತ ಕುಟುಂಬದಿಂದ ಬಂದಿರುವೆ. ಗ್ರಾಹಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಕೃಷಿಕರ ಬ್ಯಾಂಕ್ ಬೆಳೆಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದರು.ಅಧ್ಯಕ್ಷರ ಆಯ್ಕೆ:ಈ ಹಿಂದೆ ನನ್ನ ಸಹೋದರ ಎಂ.ಪಿ. ರವೀಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನನಗೆ ಸಹಕಾರ ರಂಗ ಹೊಸದು, ಸಹಕಾರಿಗಳ ಸಹಕಾರದಿಂದ ಗೆಲುವು ಸಾಧಿಸಿರುವೆ. ಎಲ್ಲರೂ ಚರ್ಚಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ಶಾಸಕಿ ಎಂ.ಪಿ. ಲತಾ ಶಾಸಕಿ ತಿಳಿಸಿದರು.
ನಿರಾಧಾರ ಆರೋಪಕ್ಕೆ ಸೋಲು: ಸಹಕಾರ ರಂಗದಲ್ಲಿ ಸೇವೆ ಸಲ್ಲಿಸಲು ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಸೇವೆ ಮಾಡಲು ನಮಗೆ ಅವಕಾಶ ದೊರೆತಿದೆ. ಈ ಹಿಂದೆ ಮಾಜಿ ಸಚಿವ ಆನಂದ ಸಿಂಗ್ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಲಾಗಿತ್ತು. ನಿರಾಧಾರ ಆರೋಪಗಳಿಗೆ ಎಂದಿಗೂ ಜಯ ಇರುವುದಿಲ್ಲ ಎಂದರು ನೂತನ ನಿರ್ದೇಶಕ ಸಂದೀಪ್ ಸಿಂಗ್.