ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳ ಗೂಂಡಾಗಿರಿ

KannadaprabhaNewsNetwork |  
Published : Apr 20, 2024, 01:31 AM ISTUpdated : Apr 20, 2024, 02:17 PM IST
CCB 6 | Kannada Prabha

ಸಾರಾಂಶ

ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲು ತೆರಳಿದ ಸಿಸಿಬಿ ಪೊಲೀಸರ ಮೇಲೆ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ರಾಜಾನುಕುಂಟೆ ಪೊಲೀಸರ ಜತೆ ಸಿಸಿಬಿ ಸಹ ತನಿಖೆ ನಡೆಸಲಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

ಬೆಂಗಳೂರು :  ತಮ್ಮನ್ನು ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಬಂಧಿಸಲು ಬಂದಿದ್ದ ಸಿಸಿಬಿ ಪೊಲೀಸರ ಮೇಲೆ ಹಲ್ಲೆ ಮಾಡಿ ನೈಜೀರಿಯಾ ಪ್ರಜೆಗಳು ಗೂಂಡಾಗಿರಿ ನಡೆಸಿರುವ ಘಟನೆ ನಗರ ಹೊರವಲಯದಲ್ಲಿ ಗುರುವಾರ ರಾತ್ರಿ ನಡೆದಿದೆ.

ಸಿಸಿಬಿ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯಸ್ವಾಮಿ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ರಾಜೀವ್‌ ಗಾಯಗೊಂಡಿದ್ದು, ಕೊಡಿಗೇಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಸಿಸಿಬಿ ಪೊಲೀಸರ ಜೀಪು ಹಾಗೂ ರಾಜಾನುಕುಂಟೆ ಠಾಣೆ ಹೊಯ್ಸಳ ವಾಹನ ಜಖಂಗೊಂಡಿವೆ. ಮಾವಳ್ಳಿಪುರದಲ್ಲಿ ನೆಲೆಸಿದ್ದ ನೈಜೀರಿಯಾ ದೇಶದ ಡ್ರಗ್ಸ್‌ ಪೆಡ್ಲರ್‌ ಬಂಧನಕ್ಕೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳು, ತಮ್ಮ ಸ್ನೇಹಿತರ ಜತೆ ಪೊಲೀಸರ ಮೇಲೆ ದಾದಾಗಿರಿ ನಡೆಸಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏನಿದು ಘಟನೆ?: ಕೆಲ ದಿನಗಳ ಹಿಂದೆ ಬಾಗಲಗುಂಟೆ ಸಮೀಪ ವಿದೇಶಿ ಪ್ರಜೆಯನ್ನು ಬಂಧಿಸಿ 4 ಕೇಜಿ ಎಡಿಎಂಎಯನ್ನು ಸಿಸಿಬಿ ಜಪ್ತಿ ಮಾಡಿತ್ತು. ಈ ಪ್ರಕರಣದ ತನಿಖೆ ಮುಂದುವರೆಸಿದಾಗ ಯಲಹಂಕದ ಪ್ರಕೃತಿ ಲೇಔಟ್‌ನ ಮನೆಯಲ್ಲಿ ಆರೋಪಿಯ ಸಹಚರರು ನೆಲೆಸಿರುವ ಮಾಹಿತಿ ತನಿಖಾಧಿಕಾರಿ ಸುಬ್ರಹ್ಮಣ್ಯಸ್ವಾಮಿ ಅವರಿಗೆ ಲಭಿಸಿತು. ತಕ್ಷಣ‍ವೇ ಗುರುವಾರ ರಾತ್ರಿ ಪೆಡ್ಲರ್‌ಗಳ ಬಂಧನಕ್ಕೆ ಸಿಬ್ಬಂದಿ ಜತೆ ತೆರಳಿದ್ದರು.

ಆಗ ಸಿಂಗನಾಯಕನಹಳ್ಳಿ ಬಳಿಯ ಭಗಿನಿ ರೆಸ್ಟೋರೆಂಟ್‌ನಲ್ಲಿ ಸಿಸಿಬಿಗೆ ಓರ್ವ ಆರೋಪಿ ಪತ್ತೆಯಾಗಿದ್ದಾನೆ. ರೆಸ್ಟೋರೆಂಟ್‌ನಿಂದ ಹೊರಬಂದ ಕೂಡಲೇ ಆತನನ್ನು ಹಿಂಬಾಲಿಸಿದ ಸಿಸಿಬಿ ತಂಡ ಮಾವಳ್ಳಿಪುರದಲ್ಲಿರುವ ಮನೆಗೆ ನುಗ್ಗಿ ಬಂಧಿಸಲು ಮುಂದಾಗಿದ್ದಾರೆ. ಆ ವೇಳೆ ಮನೆಯಲ್ಲಿದ್ದ ಇಬ್ಬರು ನೈಜೀರಿಯನ್‌ ಪ್ರಜೆಗಳು, ತಮ್ಮನ್ನು ಬಂಧಿಸಲು ಬಂದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಆಗ ತಾವು ಸಿಸಿಬಿ ಪೊಲೀಸರು ಎಂದು ಗುರುತಿ ಚೀಟಿ ತೋರಿಸಿದರೂ ಕ್ಯಾರೇ ಎನ್ನದೆ ತನಿಖಾ ತಂಡದ ಜತೆ ಗಲಾಟೆ ಶುರು ಮಾಡಿದ್ದಾರೆ. ತಕ್ಷಣವೇ ವಾಟ್ಸ್ ಆ್ಯಪ್‌ನಲ್ಲಿ ತಮ್ಮ ನಾಲ್ವರು ಸ್ನೇಹಿತರಿಗೆ ಸಂದೇಶ ಕಳುಹಿಸಿ ಆರೋಪಿಗಳು ಕರೆಸಿಕೊಂಡಿದ್ದಾರೆ. ನಂತರ ಪೊಲೀಸರನ್ನು ಮನೆಯಿಂದ ಹೊರಗೆ ತಳ್ಳಿಕೊಂಡು ಬಂದು ವಿದೇಶಿ ಪ್ರಜೆಗಳು ಥಳಿಸಿದ್ದಾರೆ. ಡ್ರ್ಯಾಗರ್‌ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಲು ಆರೋಪಿಗಳು ಯತ್ನಿಸಿದ್ದಾರೆ. ಆಗ ಅವರಿಂದ ತಪ್ಪಿಸಿಕೊಂಡು ಮುಖ್ಯರಸ್ತೆಗೆ ಸಿಸಿಬಿ ಪೊಲೀಸರು ಓಡಿ ಬಂದಿದ್ದಾರೆ. ಅಷ್ಟರಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ 122) ಎಚ್‌ಸಿ ಶಶಿಧರ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ತೆರಳಿದ್ದಾರೆ. ಸಮವಸ್ತ್ರದಲ್ಲಿ ಬಂದ ರಾಜಾನಕುಂಟೆ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದಲ್ಲದೆ ಮಚ್ಚು ಹಾಗೂ ದೊಣ್ಣೆಗಳಿಂದ ವಿದೇಶಿ ಪ್ರಜೆಗಳು ದಾಳಿ ಮಾಡಿದ್ದಾರೆ. ಕೂಡಲೇ ಆ ಗಲಾಟೆಯಿಂದ ತಪ್ಪಿಸಿಕೊಂಡು ಪೊಲೀಸರು ಸುರಕ್ಷಿತರಾಗಿದ್ದಾರೆ. ಗಾಯಾಳು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಗೂಂಡಾಗಿರಿ ಪ್ರಕರಣ ಸಂಬಂಧ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''