ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ
ಮಾನವ ಹಕ್ಕುಗಳು ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ನೀಡಿದ್ದು, ಮಾನವ ಹಕ್ಕುಗಳ ಬಗ್ಗೆ ಎಲ್ಲರೂ ಅರಿವು ಹೊಂದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಪಂ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಬ್ಬರೂ ಶುದ್ಧ ಕುಡಿಯುವ ನೀರು, ಗಾಳಿ ಹಾಗೂ ಪರಿಸರವನ್ನು ಪಡೆದುಕೊಂಡು ಗೌರವಯುತವಾಗಿ ಬಾಳುವ ಹಕ್ಕನ್ನು ಹೊಂದಿದ್ದಾರೆ. ಮನುಷ್ಯನು ಜೀವಿಸುವುದಕ್ಕಾಗಿ ಸಂವಿಧಾನದಲ್ಲಿ ಮಾತನಾಡುವ ಹಕ್ಕು, ಧರ್ಮ ಆಚರಣೆ ಮಾಡುವ ಹಕ್ಕು ಹೀಗೆ ಹಲವಾರು ಹಕ್ಕು ನೀಡಲಾಗಿದೆ. ಮನುಷ್ಯ ಗೌರವಯುತವಾಗಿ ಬದುಕುವುದಕ್ಕಾಗಿಯೇ ಮಾನವ ಹಕ್ಕುಗಳು ಜಾರಿಯಲ್ಲಿವೆ. ದಿನ ನಿತ್ಯದ ಕೆಲಸಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕಾಣುಬಹುದು. ಆದರೆ, ಸಾಮಾನ್ಯವಾಗಿ ಇದರ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಮೊದಲು ಮಾನವ ಹಕ್ಕುಗಳ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಸಾಗಿಸಲು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ನೀಡಿದೆ. ಮಾನವ ಹಕ್ಕುಗಳ ರಕ್ಷಣೆಗೂ ಸಹ ಕಾಯ್ದೆ ರೂಪಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಅರಿವನ್ನು ಹೊಂದುವುದರ ಜೊತೆಗೆ, ಇತರರಿಗೂ ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಶಾಲೆ ಬಿಡಿಸುವುದು ಸಹ ಅವರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮಕ್ಕಳಿಗೆ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರತಿಜ್ಞಾ ವಿಧಿ ಸ್ವೀಕಾರ:
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ. ಕಣವಿ, ಕೊಪ್ಪಳ ತಹಸೀಲ್ದಾರ ವಿಠಲ್ ಚೌಗಲೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಕೊಪ್ಪಳ ಯುನಿಸೆಫ್ ವಿಭಾಗದ ಹರೀಶ್ ಜೋಗಿ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಕೊಪ್ಪಳ ನಗರದ ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಉಪಸ್ಥಿತರಿದ್ದರು.