ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಅರಿತುಕೊಳ್ಳಲಿ: ಶಶಿಕುಮಾರ

KannadaprabhaNewsNetwork | Published : Jul 31, 2024 1:03 AM

ಸಾರಾಂಶ

ಹಳೆಯ ಹಾಗೂ ಹೊಸ ಕಾನೂನುಗಳಲ್ಲಿ ಯಾವ ಯಾವ ಬದಲಾವಣೆಗಳು ಆಗಿವೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ದೇಶದಲ್ಲಿ ಹಳೆಯ ಕ್ರಿಮಿನಲ್ ಕಾನೂನುಗಳನ್ನು ತೆಗೆದು ಹಾಕಲಾಗಿದೆ. ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿವೆ. ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.

ಇಲ್ಲಿನ ನವನಗರದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೇಂದ್ರ ಸಂವಹನ ಇಲಾಖೆ, ಧಾರವಾಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಳೆಯ ಹಾಗೂ ಹೊಸ ಕಾನೂನುಗಳಲ್ಲಿ ಯಾವ ಯಾವ ಬದಲಾವಣೆಗಳು ಆಗಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಯುವಕರು ಸಮಾಜದಲ್ಲಿ ಉತ್ತಮ ಕಾರ್ಯ ಮಾಡಬೇಕಿದೆ. ತಮಗೆ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಮಯ ಪಾಲನೆಗೆ ಹೆಚ್ಚಿನ ಮಹತ್ವ ನೀಡಿ. ಕಠಿಣ ಅಭ್ಯಾಸದ ಮೂಲಕ ಯಶಸ್ಸು ದೊರೆಯಲಿದೆ. ಹಾಗಾಗಿ ಸತತ ಪ್ರಯತ್ನ ಹಾಗೂ ಸ್ಮಾರ್ಟ್ ಅಧ್ಯಯನದಿಂದ ಜೀವನದಲ್ಲಿ ಉನ್ನತ ಹುದ್ಧೆ ಅಲಂಕರಿಸಬಹುದು ಎಂದು ತಿಳಿಸಿದರು.

ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಸಿ. ಬಸವರಾಜು ಮಾತನಾಡಿ, ಹಳೆಯ ಕಾನೂನುಗಳಿಂದ ಅಪರಾಧಿಗಳಿಗೆ ಶಿಕ್ಷೆಯಾಗಲು ಬಹಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಹೊಸ ಕಾನೂನುಗಳಿಂದ ಅಪರಾಧ ಪ್ರಕರಣಗಳಿಗೆ ತ್ವರಿತವಾಗಿ ಶಿಕ್ಷೆಯಾಗಲಿದೆ ಎಂದರು.

ಕೇಂದ್ರ ಸಂವಹನ ಇಲಾಖೆಯ ಮುರಳೀಧರ ಕಾರಭಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ನ್ಯಾಯಧೀಶ ಎಸ್.ಎಚ್. ಮಿಟ್ಟಲಕೋಡ, ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ 2024, ಸಹಾಯಕ ಪ್ರಾಧ್ಯಾಪಕ ಡಾ. ಎಂ.ಕೆ. ಮಾಟೋಳ್ಳಿ ಭಾರತೀಯ ಸಾಕ್ಷ್ಯ ಅಧಿನಿಯಮ 2024 ಮತ್ತು ಧಾರವಾಡ ಹೈಕೋರ್ಟಿನ ವಕೀಲ ರಾಜೇಶ ನವಳಗಿಮಠ ಭಾರತೀಯ ನ್ಯಾಯ ಸಂಹಿತೆ 2024 ಕುರಿತು ವಿಶೇಷ ಉಪನ್ಯಾಸ ನೀಡಿದರು.

ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸಿದ್ಧಿ ಎನ್., ವೈಶಾಖ, ಅಪರ್ಣಾ, ಎಲೋಕೇಷನ್ ಸ್ಪರ್ಧೆಯಲ್ಲಿ ವಿಜೇತರಾದ ಸಿಮ್ರನ್, ವೈಶಾಖ, ಮಲ್ಲಿಕಾರ್ಜುನ ಎಂ. ಮತ್ತು ಪಿಪಿಟಿ ಪ್ರಸೆಂಟೇಷನ್ ಸ್ಪರ್ಧೆಯಲ್ಲಿ ವಿಜೇತರಾದ ರೋಸ್ವಿತಾ, ಶ್ರೀನಿಧಿ ಹಾಗೂ ಸಿಮ್ರನ್ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.

ಕಾನೂನು ವಿವಿ ಕುಲಸಚಿವರಾದ ಅನುರಾಧ ವಸ್ತ್ರದ, ಪ್ರೊ. ಡಾ. ರತ್ನಾ ಆರ್. ಭರಮಗೌಡರ, ಸಹಾಯಕ ಪ್ರಾಧ್ಯಾಪಕ ಡಾ.ಸುನೀಲ ಬಗಾಡೆ, ಗಿರೀಶಗೌಡ ಪಾಟೀಲ, ಐ.ಬಿ. ಬಿರಾದಾರ, ಡಾ. ದೀಪಾ, ಮಹಾದೇವಿ, ಡಾ. ಪ್ರಶಾಂತ, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಮತಿ ಪ್ರಾರ್ಥಿಸಿದರು. ಶ್ರವಣಾ ನಿರೂಪಿಸಿದರು. ಲಕ್ಷ್ಮಿ ಸ್ವಾಗತಿಸಿ, ವಂದಿಸಿದರು.

Share this article