ಧಾರವಾಡ:
ಇತ್ತೀಚೆಗೆ ಆನ್‌ಲೈನ್ ವಂಚನೆ, ದೂರವಾಣಿ ಕರೆಗಳ ಮೂಲಕ ಆರ್ಥಿಕ ವಂಚನೆ ಅಂತಹ ಅಪರಾಧಗಳು ಹೆಚ್ಚುತ್ತಿವೆ. ಸಾರ್ವಜನಿಕರು ವಿಶೇಷವಾಗಿ ಸರ್ಕಾರಿ ನೌಕರರು, ಅವರ ಕುಟುಂಬ ಮತ್ತು ಪಿಂಚಣಿದಾರರು ಜಾಗೃತರಾಗಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಪ್ರಾದೇಶಿಕ ಹೂಡಿಕೆದಾರರ ಜಾಗೃತಿ ಮತ್ತು ಆನ್‌ಲೈನ್ ಆರ್ಥಿಕ ವಂಚನೆ, ಸೈಬರ್ ಅಪರಾಧಗಳ ಬಗ್ಗೆ ಸೋಮವಾರ ನಡೆದ ಸರ್ಕಾರಿ ನೌಕರರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಿವೃತ್ತಿ ನಂತರ ಆರ್ಥಿಕ ಅನುಕೂಲತೆಗಳ ಇರಬೇಕು. ನೌಕರರು ಸೇವೆಯಲ್ಲಿದ್ದಾಗ ನಿಯಮಿತವಾಗಿ ಮತ್ತು ಸುರಕ್ಷಿತ ಕ್ಷೇತ್ರಗಳಲ್ಲಿ ಉಳಿತಾಯ ಮಾಡಬೇಕು. ಒಬ್ಬ ಹೂಡಿಕೆದಾರನಾಗಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದಿರಬೇಕು. ಲಾಭದ ಆಸೆಯ ಮಾತುಗಳಿಗೆ ಮರುಳಾಗಬಾರದು. ಪ್ರತಿ ಸಂದರ್ಭದಲ್ಲಿಯೂ ಪರಿಶೀಲಿಸಿ, ಹೂಡಿಕೆಗೆ ಮುಂದುವರಿಯಬೇಕು ಎಂದು ಎಚ್ಚರಿಸಿದರು.
ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆ ಕ್ರಮ, ಹೂಡಿಕೆ ಮಾಡುವಾಗ ಪಾಲಿಸಬೇಕಾದ ನಿಯಮ ಮತ್ತು ವಂಚನೆಗಳಿಂದ ದೂರವಿರುವ ವಿಧಾನಗಳ ಬಗ್ಗೆ ನೌಕರರಿಗೆ ಮತ್ತು ವಿವಿಧ ಇಲಾಖೆಗಳ ಯೋಜನಾ ಫಲಾನುಭವಿಗಳಿಗೆ ತಿಳಿವಳಿಕೆ ನೀಡುವುದು ಅಗತ್ಯವಿದೆ. ಯಾವುದೇ ರೀತಿಯಲ್ಲಿ ಹಣಕಾಸು ಹೂಡಿಕೆ ಮಾಡುವ ಮೊದಲು ಸರಿಯಾದ ಮಾಹಿತಿ ಸಂಗ್ರಹಿಸಿ, ಪರಿಶೀಲಿತ ಮೂಲಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಸಂಶಯಾಸ್ಪದ ಯೋಜನೆಗಳಿಂದ ದೂರವಿರುವುದು ಅವಶ್ಯಕ ಎಂದರು.ಸೆಬಿ, ಸ್ಟಾಕ್ ಎಕ್ಸಚೈಂಜ್, ಶೇರ್, ಡಿಬೆಂಚರ್‌ಗಳ ಬಗ್ಗೆ ಹೂಡಿಕೆ ಪೂರ್ವದಲ್ಲಿ ಮಾಹಿತಿ ಪಡೆಯಬೇಕು. ಅಂದಾಗ ವಂಚನೆಗಳಿಂದ ದೂರವಿರಬಹುದು. ತೆರಿಗೆ ಉಳಿತಾಯ, ತೆರಿಗೆ ವಿಧಿಸುವ ಹೊಸ ನಿಯಮಗಳ ಬಗ್ಗೆ ತಿಳಿದಿರಬೇಕು. ಮೊಬೈಲ್‌ಗಳಿಗೆ ಅನೇಕ ತರನಾದ ಆ್ಯಪ್‌ಗಳು ಬರುತ್ತವೆ. ಅನಗತ್ಯವಾಗಿ ಅವುಗಳನ್ನು ಡೌನ್‌ಲೋಡ್ ಮಾಡಬಾರದು. ಇದರಿಂದ ಬ್ಯಾಂಕ್ ವಿವರ ಸೇರಿದಂತೆ ವೈಯಕ್ತಿಕ ಮಾಹಿತಿ ಸೋರಿಕೆ ಆಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಸೆಬಿ ಹಿರಿಯ ಅಧಿಕಾರಿಗಳಾದ ಎಂ.ಆರ್. ವೆಂಕಟೇಶ ಬಾಬು ವರ್ಚುವಲ್ ಮೂಲಕ ಸೈಬರ್ ಅರಾಧಗಳು ಮತ್ತು ಸುರಕ್ಷಿತ ಹೂಡಿಕೆಗಳ ಬಗ್ಗೆ ಉಪನ್ಯಾಸ ನೀಡಿದರು. ಮತ್ತೊರ್ವ ಹಿರಿಯ ಅಧಿಕಾರಿ ಬದರಿ ನಾರಾಯಣ, ಹೂಡಿಕೆದಾರರು ಮಾರುಕಟ್ಟೆಯಲ್ಲಿ ಉಂಟಾಗುವ ಅಪಾಯಗಳನ್ನು ತಿಳಿದುಕೊಂಡು ಜಾಣ್ಮೆಯಿಂದ ಹೂಡಿಕೆ ಮಾಡಬೇಕು. ಜೊತೆಗೆ ಕೆವೈಸಿ, ಪಾನ್, ಡಿಮ್ಯಾಟ್ ಅಕೌಂಟ್ ಮುಂತಾದ ಮೂಲಭೂತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದರು.ಜಿಪಂ ಸಿಇಒ ಭುವನೇಶ ಪಾಟೀಲ, ಲೆಕ್ಕ ಪರಿಶೋಧಕಿ ವೀಣಾ ಮುದಿಗೌಡರ ಸೇರಿ ಸರ್ಕಾರಿ ನೌಕರರು ಇದ್ದರು.