ದೇವದುರ್ಗ: ದೇವದುರ್ಗ ಹಾಗೂ ಅರಕೇರಾ ತಾಲೂಕುಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿವ ನೀರಿನ ಯಾವುದೇ ತೊಂದರೆಗಳಾಗದಂತೆ ಮುಂಜಾಗ್ರತಾ ಸಿದ್ಧತೆ ವ್ಯವಸ್ಥೆ ಕೈಗೊಳ್ಳಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆ ಅಧ್ಯಕ್ಷತೆವಹಿಸಿ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಎಲ್ಲಾ ಗ್ರಾಪಂ ಪಿಡಿಓಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು, ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಪ್ರತಿನಿಧಿಗಳಿಗೆ ಗೌರವ ಕೊಡುವ, ಮಾಹಿತಿ ನೀಡುವ ಪರಿಪಾಠ ಬೆಳಸಿಕೊಳ್ಳಬೇಕು. ಯಾವುದೇ ಸಭೆಯಲ್ಲಿ ಎಲ್ಲಾ ಇಲಾಖೆಗಳ ಸಮಸ್ಯೆ ಕುರಿತು ಚರ್ಚಿಸಿರುವ ವಿವರ ಕಡ್ಡಾಯವಾಗಿ ಗೊತ್ತುವಳಿಯಲ್ಲಿ ಇರಬೇಕು.ಕೊತ್ತದೊಡ್ಡಿಯಲ್ಲಿ ನೂತನ ಶಾಲೆ ಕಟ್ಟಡ ತರಾತುರಿಯಲ್ಲಿ ಯಾರದೋ ಪ್ರಭಾವಕ್ಕೆ ಒಳಗಾಗಿ ಕನಿಷ್ಠ ಶಾಸಕರಿಗೆ ಮಾಹತಿ ನೀಡಿದೇ ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟರು. ಅದರ ಪಕ್ಕದಲ್ಲಿಯೇ ಮುಖ್ಯರಸ್ತೆ, ಮೊತ್ತೊಂದು ಕಡೆ ಎನ್ಆರ್‌ಬಿಸಿ ಮುಖ್ಯ ಕಾಲುವೆ ಇದೆ. ಕಂಪೌಂಡ್ ನಿರ್ಮಿಸಿಲ್ಲ. ಏನಾದರೂ ಆದರೆ ಯಾರು ಹೊಣೆ? ಹೆಮನೂರ ಗ್ರಾಮದಲ್ಲಿ ಹೊಸ ಶಾಲಾ ಕಟ್ಟಡ ಪ್ರಾರಂಭಿಸಿದೆವು. ಗ್ರಾಮಸ್ಥರು ನನಗೆ ಬರಲು ಹೇಳಿದ್ದರು. ಆದರೆ ಬಿಇಓ ಮಾತ್ರ ಮಾಹಿತಿ ನೀಡಲಿಲ್ಲಾ. ಇಂಥ ಘಟನೆಗಳು ಜರುಗಿದರೆ ನೋವಾಗುತ್ತೆ. ಅಧಿಕಾರಿಗಳು ಶಿಷ್ಟಾಚಾರ ಮರೆತರೆ ಹೇಗೆ? ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಜಿಪಂ ಕುಡಿವ ನೀರಿನ ವಿಭಾಗದ ಎಇಇ ಟಾಸ್ಕಫೋರ್ಸನಲ್ಲಿ ಕೈಗೊಂಡಿರುವ ಕ್ರೀಯಾ ಯೋಜನೆಗಳ ಮಾಹಿತಿ ನೀಡಿದರು.ಭೂಮನಗುಂಡ ಹಾಗೂ ಸಲಕ್ಯಾಪೂರ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಬೇಸಿಗೆ ಪ್ರಾರಂಭಗೊಳ್ಳಲು ಇನ್ನೂ ಅವಕಾಶವಿದೆ. ಕೂಡಲೇ ಎಲ್ಲಾ ಟ್ಯಾಂಕ್‌ಗಳನ್ನು ಶುಚಿಗೊಳಿಸಿ, ಖಾನಾಪೂರ ಪ್ರಕರಣ ಮತ್ತೊಮ್ಮೆ ಮರುಕಳಿಸದಂತೆ ನಿಗಾವಹಿಸಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಸೂಚಿಸಿದರು.
ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿವ ನೀರಿನ ಮೂಲಗಳನ್ನು ಪರಿಶೀಲಿಸಿ ನೀರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸರಬರಾಜಿನ ಮೂಲ ಬದಲಾವಣೆಯಾದಲ್ಲಿ ಪಿಡಿಓಗಳು ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಅಂಬ್ಯುಲೆನ್ಸ್ ಸೇವೆ ಲಭ್ಯವಿದ್ದು, ಒಂದು ಅಂಬ್ಯುಲೆನ್ಸ್ ಮಾತ್ರ ದುರಸ್ತಿಗೆ ಕಳುಹಿಸಲಾಗಿದೆ. 2 ಹೊಸ ಅಂಬ್ಯುಲೆನ್ಸ್‌ಗಳು ಇಷ್ಟರಲ್ಲಿಯೇ ಬರಲಿವೆ ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ.ಜಿ.ಬನದೇಶ್ವರ ತಿಳಿಸಿದರು.ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸೌಕರ್ಯ ಮತ್ತು ಸಮಸ್ಯೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಕೃಷಿ ಮತ್ತು ಜೆಸ್ಕಾಂ ಇಲಾಖೆ ಅಧಿಕಾರಿಗಳು ಕೂಡ ಪೂರ್ವ ಸಿದ್ಧತೆ ಕ್ರಮಗಳ ಮಾಹಿತಿ ನೀಡಿದರು.
ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ, ಪ್ರಭಾರಿ ಇಒ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣಾರಾವ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು, ಎಲ್ಲಾ ಗ್ರಾ.ಪಂಗಳ ಪಿಡಿಓ ಪಾಲ್ಗೊಂಡಿದ್ದರು. ಸಹಾಯಕ ನಿರ್ದೇಶಕ ಅಣ್ಣಾರಾವ್ ನಿರೂಪಿಸಿದರು. ಸಭೆಯಲ್ಲಿ ಜಾಲಹಳ್ಳಿ ಉಪ ತಹಸೀಲ್ದಾರ ವಿಕಾಸ, ಟಾಸ್ಕಫೋರ್ಸ ಸಭೆಯಲ್ಲಿ ಗಾಢ ನಿದ್ರೆಗೆ ಜಾರಿ ಗಮನ ಸೆಳೆದರು.