- ರೋಟರಿ ಕ್ಲಬ್ ಆಶ್ರಯದಲ್ಲಿ ಡಿಸಿಎಂಸಿ ಪ್ರೌಢ ಶಾಲೆಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖ ಅಂಗವಾಗಿದ್ದು ಕಣ್ಣಿನ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಮಕ್ಕಳಿಗೆ ಸಲಹೆ ನೀಡಿದರು.
ಶನಿವಾರ ಪಟ್ಟಣದ ಡಿಸಿಎಂಸಿ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ನೇತೃತ್ವದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯದ ಸಹ ಭಾಗಿತ್ವದಲ್ಲಿ 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ಸೌಂದರ್ಯ ವೀಕ್ಷಿಸಲು ಸಹ ಕಣ್ಣು ಅಗತ್ಯವಾಗಿದೆ. ರೋಟರಿ ಸಂಸ್ಥೆ ಪ್ರತಿ ವರ್ಷ ಹಲವಾರು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ತಾಲೂಕು ಒಕ್ಕಲಿಗರ ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಎಚ್.ಟಿ. ರಾಜೇಂದ್ರ ಡಿಸಿಎಂಸಿ ಶಾಲೆ ಮಕ್ಕಳ ಕಣ್ಣಿನ ತಪಾಸಣೆ ಮಾಡಿಸಬೇಕು ಎಂಬ ಆಶಯ ಹೊಂದಿದ್ದರು. ಮಕ್ಕಳಿಗೆ ಮುಂಚಿತ ವಾಗಿ ಕಣ್ಣಿನ ತಪಾಸಣೆ ಮಾಡಿದರೆ ಕಣ್ಣಿನ ದೋಷ ಪತ್ತೆಯಾಗಿ ಮುಂಜಾಗ್ರತೆಯಾಗಿ ಚಿಕಿತ್ಸೆ ಮಾಡಿಸಬಹುದು.ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್, ಪ್ರಾಂಶುಪಾಲೆ ಪದ್ಮ ರಮೇಶ್, ಸ್ಟೇಟ್ ವಿಭಾಗದ ಶಾಲಾ ಮುಖ್ಯೋಪಾಧ್ಯಾಯಿನಿ ಲೆವಿನಾ ಡಿಕೋಸ್ಟಾ, ರೋಟರಿ ಕ್ಲಬ್ ಸದಸ್ಯ ವಿಜಯಕುಮಾರ್ ಮತ್ತಿತರರು ಇದ್ದರು. ಡಿಸಿಎಂಸಿ ವಿಭಾಗದ ಸ್ಟೇಟ್ ವಿದ್ಯಾರ್ಥಿಗಳು ಹಾಗೂ ಸಿ ಬಿ ಎಸ್ ಸಿ ವಿದ್ಯಾರ್ಥಿಗಳು ಸೇರಿ 500 ವಿದ್ಯಾರ್ಥಿಗಳಿಗೆ ನೇತ್ರ ತಪಾಸಣೆ ನಡೆಸಲಾಯಿತು.