ರಾಜ್ಯದ ಕಾಂಗ್ರೆಸ್‌ ಸರ್ಕಾರ ಹೋರಾಟ ಹತ್ತಿಕ್ಕಲು ಕೇಸ್‌ ಹಾಕಿದ್ರೆ ಹುಷಾರ್‌ : ಕೂಡಲ ಶ್ರೀ ಎಚ್ಚರಿಕೆ

KannadaprabhaNewsNetwork |  
Published : Dec 03, 2024, 12:35 AM ISTUpdated : Dec 03, 2024, 12:12 PM IST
ಪಂಚಮಸಾಲಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ. | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರ ನಮ್ಮ ಹೋರಾಟ ಹತ್ತಿಕ್ಕಲು, ನಮ್ಮ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಪಂಚಮಸಾಲಿ ಸಮಾಜದ ಯಾವುದೇ ಪದಾಧಿಕಾರಿಯನ್ನು ಮುಟ್ಟಿದರೆ ನಾವು ಸುಮ್ಮನಿರಲ್ಲ. 

 ಕಾಗವಾಡ : ರಾಜ್ಯದ ಕಾಂಗ್ರೆಸ್‌ ಸರ್ಕಾರ ನಮ್ಮ ಹೋರಾಟ ಹತ್ತಿಕ್ಕಲು, ನಮ್ಮ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಪಂಚಮಸಾಲಿ ಸಮಾಜದ ಯಾವುದೇ ಪದಾಧಿಕಾರಿಯನ್ನು ಮುಟ್ಟಿದರೆ ನಾವು ಸುಮ್ಮನಿರಲ್ಲ. ದಬ್ಬಾಳಿಕೆ ಮಾಡಿ ಕೇಸ್ ಹಾಕಿದರೆ ಬಂಡಾಯ ಆಗುತ್ತದೆ. ಎರಡನೇ ನರಗುಂದ ಬಂಡಾಯ ಆಗುವುದರಲ್ಲಿ ಸಂದೇಹವಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿ.10ರಂದು ಹಮ್ಮಿಕೊಂಡಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುವ, ನೈತಿಕ ಶಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿರುವುದು ಬೇಸರ ತರಿಸಿದೆ. ಶೆಟ್ಟರ್, ಬಿಎಸ್‌ವೈ, ಬೊಮ್ಮಾಯಿ ಇದ್ದಾಗಲೂ ಹೋರಾಟ ಮಾಡಿದ್ದೇವೆ. ಆಗ ಒಂದೇ ಒಂದು ಕೇಸ್ ಹಾಕಿಲ್ಲ. ನಮ್ಮದು ಅಹಿಂಸಾತ್ಮಕ ಹೋರಾಟ. ಆದರೆ, ಈಗಿನ ಸರ್ಕಾರ ನಮ್ಮ ಹೋರಾಟ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಎಲ್ಲ ರಾಜಕೀಯ ಪಕ್ಷಗಳು ಪಂಚಮಸಾಲಿ ಹೋರಾಟ ಹತ್ತಿಕ್ಕಲು ಮತ್ತು ನಮ್ಮ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿವೆ. ಸಿದ್ದರಾಮಯ್ಯನವರ ಸರ್ಕಾರ ನಮ್ಮ ಸಮುದಾಯದ ಶಾಸಕರಿಗೆ ಅಧಿವೇಶನದಲ್ಲಿ ಮೀಸಲಾತಿ ಕುರಿತು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಹೆಸರಿಗೆ ಪಂಚಮಸಾಲಿ ಹೋರಾಟವಾದರೂ ನಮ್ಮದು ರೈತ ಮಕ್ಕಳ ಹೋರಾಟ. ಬಿಜೆಪಿಯವರಂತೆ ಕಾಂಗ್ರೆಸ್‌ನವರೂ ಮಾತನಾಡಲಿ. ಸರ್ಕಾರ ಮೆಚ್ಚಿಸಲು ಕೆಲ ಜನಪ್ರತಿನಿಧಿಗಳು ಹೋರಾಟಕ್ಕೆ ಹಿನ್ನಡೆ ಮಾಡುತ್ತಿದ್ದಾರೆ. ಸಿಎಂ ಮನಸು ಗೆಲ್ಲಲು ಕೆಲ ಶಾಸಕರು ಹೇಳಿಕೆ ಕೊಡುತ್ತಿದ್ದಾರೆ. ಪಕ್ಷಕ್ಕಿಂತ ಸಮಾಜ ದೊಡ್ಡದು. ಅದನ್ನು ಶಾಸಕರು ತಿಳಿದುಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ವಿನಯ್ ಕುಲಕರ್ಣಿ, ರಾಜು ಕಾಗೆ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಕೆಲವರು ಬಾಯಿ ಇದ್ದರೂ ಗಟ್ಟಿಯಾಗಿ ಮಾತನಾಡುವುದಿಲ್ಲ. ಡಿ.10ರಂದು ಪಂಚಮಸಾಲಿ ಸಮಾಜದ ರಾಜಕೀಯ ರಹಸ್ಯ ಸಭೆ ಕೂಡ ನಡೆಸಲಿದ್ದೇವೆ ಎಂದು ತಿಳಿಸಿದರು.

ಕಾಗವಾಡ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ಮಾಳ), 2ಎ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಧರೆಪ್ಪ ಠಕ್ಕನ್ನವರ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉಮೇಶ ಪಾಟೀಲ, ವಕೀಲರ ವಿಭಾಗದ ಅಣ್ಣಾಗೌಡ ಪಾಟೀಲ, ಅರ್ಚನಾ ಪಾಟೀಲ, ಕಾಗವಾಡ ಲಿಂಗಾಯತ ಸಮಾಜದ ಅಧ್ಯಕ್ಷ ರಾಜಗೌಡ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗುಲೆ, ನಾಥಗೌಡ ಪಾಟೀಲ, ಶಿವಾನಂದ ಪಾಟೀಲ, ಚಿದಾನಂದ ಅವಟಿ, ಎಂ.ಬಿ. ಉದಾಗವೆ, ಸತೀಶ ಬಿರಾದರ, ಶಿವರಾಜ ಪಾಟೀಲ, ಅಶೋಕ ಪಾಟೀಲ, ಎಂ.ಎಸ್. ಪಾಟೀಲ, ಅಶೋಕ ಪಾಟೀಲ, ಶಿವಾನಂದ ನವಿನಾಳೆ, ರವಿ ಪಾಟೀಲ, ಸೇರಿದಂತೆ ತಾಲೂಕಿನ ಪಂಚಮಸಾಲಿ ಸಮುದಾಯದವರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ