ಕುಟುಂಬ ಸಮೀಕ್ಷೆಯಿಂದ ವಂಚಿತರಾಗದಂತೆ ಎಚ್ಚರ ವಹಿಸಿ

KannadaprabhaNewsNetwork | Published : Apr 30, 2025 12:38 AM

ಸಾರಾಂಶ

ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಯಾವುದೇ ಲೋಪವಿಲ್ಲದೆ ವ್ಯವಸ್ಥಿತವಾಗಿ ಕೈಗೊಳ್ಳಬೇಕು

ಬಳ್ಳಾರಿ: ನ್ಯಾ.ಎಚ್.ಎನ್. ನಾಗಮೋಹನ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ ಕಾರ್ಯವು ಮೇ.5 ರಿಂದ 23ರ ವರೆಗೆ 3 ಹಂತಗಳಲ್ಲಿ ನಡೆಯಲಿದ್ದು, ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಸಮೀಕ್ಷೆ ವೇಳೆ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ನಿರ್ದೇಶನ ನೀಡಿದರು.

ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಿಂದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಸ್ಟರ್ ಟ್ರೈನರ್‌ಗಳಿಗೆ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ನಗರದ ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ ಜನಾಂಗದ ಕುಟುಂಬಗಳ ಸಮಗ್ರ ಸಮೀಕ್ಷೆ ವೈಜ್ಞಾನಿಕವಾಗಿ ಕೈಗೊಳ್ಳಲು ಸರ್ಕಾರ ನಿರ್ದೇಶಿಸಿದ್ದು, ಯಾವುದೇ ಕುಟುಂಬ ಈ ಸಮೀಕ್ಷೆಯಿಂದ ವಂಚಿತರಾಗದಂತೆ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಯಾವುದೇ ಲೋಪವಿಲ್ಲದೆ ವ್ಯವಸ್ಥಿತವಾಗಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೇ 9 ರಿಂದ 17 ರವರೆಗೆ ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷಾ ಭೇಟಿಯ ಉದ್ದೇಶ ಮನವರಿಕೆ ಮಾಡಿ ಮೊಬೈಲ್ ಆಪ್ ನಲ್ಲಿಯೇ ಮಾಹಿತಿ ಬ್ಲಾಕ್ ಆಧಾರದಲ್ಲಿ ತಲಾ 300 ಮನೆಗಳ ಕುಟುಂಬಗಳ ಮಾಹಿತಿ ಸಂಗ್ರಹಿಸಬೇಕು. ನಂತರ ಮೇ 19 ರಿಂದ 21 ರವರೆಗೆ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದ ಕುಟುಂಬ ಗುರುತಿಸಿ ಮಾಹಿತಿ ಸಂಗ್ರಹಿಸಬೇಕು. ಇದರಲ್ಲಿಯೂ ಬಿಟ್ಟು ಹೋದ ಕುಟುಂಬಗಳಿದ್ದಲ್ಲಿ ಆನ್ ಲೈನ್ ಮೂಲಕ ಸಂಬಂಧಪಟ್ಟ ಜನಾಂಗದವರು ತಾವಾಗಿಯೇ ಸಮೀಕ್ಷೆಯಡಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಕಾರಣ ಸಮೀಕ್ಷೆದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಸಮೀಕ್ಷೆಯ ಮೇಲ್ವಿಚಾರಣೆಗಾಗಿ ರಾಜ್ಯ ಮಟ್ಟದಲ್ಲಿ ಸಮಿತಿ ಇದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಇದೆ. ರಾಜ್ಯದಲ್ಲಿ ಗುರುತಿಸಿದ 101 ಪರಿಶಿಷ್ಟ ಜಾತಿಗಳ ಜನಗಣತಿ ನಡೆಯುತ್ತಿದ್ದು, ಇದರ ಅಂಗವಾಗಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಯಾವುದೇ ಲೋಪವಿವಿಲ್ಲದೆ ಪರಿಶಿಷ್ಟ ಜಾತಿ ಜನಾಂಗದ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ ರಾಜ್ಯಮಟ್ಟದಲ್ಲಿ ತರಬೇತಿ ಪಡೆದ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಾದ ಸಯ್ಯದ್ ಬಾಷಾ, ಮಲ್ಲಿಕಾರ್ಜುನ, ಕೆ.ಎಸ್. ಶಬರೀಶ್ ಗುಪ್ತ ಸೇರಿದಂತೆ ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Share this article