ನೀರು ಕಲುಷಿತವಾಗದಂತೆ ಎಚ್ಚರವಹಿಸಿ

KannadaprabhaNewsNetwork | Published : Sep 7, 2024 1:34 AM

ಸಾರಾಂಶ

ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳು ರಾಜಕಾಲುವೆಗಳ ಹಾಗೂ ಚರಂಡಿಗಳಲ್ಲಿನ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಿಕೊಡಬೇಕು. ಗ್ರಾಪಂ ಮಟ್ಟದಲ್ಲಿ ಅತಿವೃಷ್ಟಿ ಸಂಭವಿಸಿದಲ್ಲಿ ನಿರ್ವಹಣೆಗೆ ಸಿದ್ಧರಾಗಬೇಕು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾದ್ಯಂತ ಮುಂಗಾರು ಮಳೆ ಸಾಧಾರಣವಾಗಿದೆ, ಹವಾಮಾನ ಇಲಾಖೆ ಸೂಚನೆಯಂತೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆ ಕೊರತೆ ಉಂಟಾಗಬಹುದಾಗಿದೆ, ಆದ್ಯಾಗೂ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕು. ಕುಡಿಯುವ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ಸೂಚಿಸಿದರು. ಮಳೆಯಿಂದ ಜಿಲ್ಲೆಯ ಜನ ಜಾನುವಾರು ಜೀವ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ತಹಸೀಲ್ದಾರ್ ತಮ್ಮ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಟಾಸ್ಕ್ ಫೋರ್ಸ್ ಸಭೆ ನಡೆಸಿ ತಾಲೂಕಾ ಹಂತದಲ್ಲಿ ಮಳೆ ಸಮರ್ಪಕ ನಿರ್ವಹಣೆ ಕುರಿತಂತೆ ಹಾಗೂ ಅತೀವೃಷ್ಟಿ ನಿರ್ವಹಣೆ ಯೋಜನೆ ಬಗ್ಗೆ ಕಾಲಕಾಲಕ್ಕೆ ಸಭೆ ನಡೆಸಬೇಕು ಎಂದರು.

ರಾಜಕಾಲುವೆ ನಿರ್ವಹಣೆ

ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳು ರಾಜಕಾಲುವೆಗಳ ಹಾಗೂ ಚರಂಡಿಗಳಲ್ಲಿನ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಿಕೊಡಬೇಕು. ಗ್ರಾಪಂ ಮಟ್ಟದಲ್ಲಿ ಅತಿವೃಷ್ಟಿ ಸಂಭವಿಸಿದಲ್ಲಿ ನಿರ್ವಹಣೆಗೆ ಸಿದ್ಧರಾಗಬೇಕು. ಅತಿವೃಷ್ಟಿ ಎದುರಾದಲ್ಲಿ ತಕ್ಷಣ ಜೀವಹಾನಿ ತಡೆಗೆ ಮುಂದಾಗಬೇಕು. ಜನಸಾಮಾನ್ಯರ ಜೀವ, ಆಸ್ತಿಹಾನಿ ತಡೆಗೆ ಸ್ಥಳೀಯ ಹಂತದಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು.

ಅಗ್ನಿಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಅತಿವೃಷ್ಟಿ ನಿರ್ವಹಣೆಗೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ಸುವ್ಯವಸ್ಥೆಯಲ್ಲಿಟ್ಟುಕೊಳ್ಳಬೇಕು. ನುರಿತ ಈಜುಗಾರರನ್ನು ಗುರುತಿಸಿಟ್ಟುಕೊಂಡು ಸಂದರ್ಬಕ್ಕನುಸಾರ ಸಾರ್ವಜನಿಕರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಮಟ್ಟದಲ್ಲಿ ಅತಿವೃಷ್ಟಿ ನಿರ್ವಹಣೆಗಾಗಿ ಜನಸಾಮಾನ್ಯರಿಗೆ ಸಹಾಯವಾಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಂದಿಗ್ದ ಪರಿಸ್ಥಿತಿಯಲ್ಲಿ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಸಹಾಯ ಪಡೆಯುವಂತೆ ತಿಳಿಸಿದರು.

ಮೇವು ದಾಸ್ತಾನಿಗೆ ಸೂಚನೆ

ಪಶುಸಂಗೋಪನ ಇಲಾಖೆ ಅಧಿಕಾರಿಗಳಿಗೆ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ಸಾಕಷ್ಟು ಮೇವು ದಾಸ್ತಾನು ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು.

Share this article