ಶಿವಮೊಗ್ಗ: ವಿಶ್ವದಲ್ಲಿ 150 ಕೋಟಿ, ಭಾರತದಲ್ಲಿ 61 ಕೋಟಿಗೂ ಹೆಚ್ಚು ಜನ ಜಂತು ಹುಳು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಓ.ಮಲ್ಲಪ್ಪ ತಿಳಿಸಿದರು.
ನಗರದ ರೋಟರಿ ಪೂರ್ವ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಪದವಿಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ರೋಟರಿ ಪೂರ್ವ ಶಾಲೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಂತು ಹುಳು ನಮ್ಮಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕುಂಠತವಾಗಲು ಕಾರಣವಾಗುತ್ತದೆ. ಆದ್ದರಿಂದ ಇದರ ನಿವಾರಣೆ ಅತಿ ಅಗತ್ಯವಾಗಿದೆ. ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡುವಲ್ಲಿಯೂ ಜಂತು ಹುಳು ನಿವಾರಣೆ ಕಾರ್ಯಕ್ರಮ ಪೂರಕವಾಗಿದೆ ಎಂದರು.
2015ರಲ್ಲಿ ರಾಜ್ಯದಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ 19 ವರ್ಷದೊಳಗಿನ ಶೇ.49 ಮಕ್ಕಳು ಜಂತುಹುಳಿವಿನಿಂದ, ರಕ್ತಹೀನತೆಯಿಂದ ಬಳಲುತ್ತಿದ್ದರು. 2015ರಿಂದ ಪ್ರತಿ ವರ್ಷ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆ ನೀಡುತ್ತಾ ಬಂದಿದ್ದು, ಸೋಂಕಿನ ಪ್ರಮಾಣ ಶೇ0.22 ಗೆ ಇಳಿಸಲಾಗಿದೆ ಎಂದು ತಿಳಿಸಿದರು.ಜಂತು ಹುಳು ಆಗದಂತೆ ಮುಂಜಾಗ್ರತೆ ವಹಿಸಬೇಕು. ಊಟಕ್ಕೂ ಮುನ್ನ ಸೋಪು ಹಚ್ಚಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಉಗುರು ಕಟ್ ಮಾಡಿಕೊಳ್ಳಬೇಕು, ಬಯಲು ಮಲ ವಿಸರ್ಜನೆ ನಿಲ್ಲಿಸಿ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿಎಚ್‌ಒ ಡಾ.ಕೆ.ಎಸ್.ನಟರಾಜ್, ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಜಂತುಹುಳು ಕುಂಠಿತಗೊಳಿಸುತ್ತಿದ್ದು, ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದ ಎಲ್ಲ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳುವ ಮೂಲಕ ಜಂತು ಹುಳು ನಿವಾರಣೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.ಮಕ್ಕಳೆಲ್ಲ ಇಂದು ಜಂತುಹುಳು ನಿವಾರಣಾ ಮಾತ್ರೆ ಆಲ್ಬೆಂಡಜೋಲ್‌ನ್ನು ಶಿಕ್ಷಕರಿಂದ ಪಡೆದು, ಜಗಿದು ನುಂಗಬೇಕು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ(ಪುಡಿ ಮಾಡಿ) ಮತ್ತು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ಜಗಿದು ನುಂಗಲು ಶಿಕ್ಷಕರು ನೀಡಬೇಕು ಎಂದು ಹೇಳಿದರು.ಈ ಹಿಂದೆ ಜಂತು ಹುಳು ಮಾತ್ರೆಯನ್ನು ತೆಗೆದುಕೊಂಡಿದ್ದರೂ, ಪಲ್ಸ್ ಪೋಲಿಯೊ ಮಾದರಿಯಲ್ಲಿ ಇಂದು ಎಲ್ಲ ಮಕ್ಕಳು ಮಾತ್ರೆಯನ್ನು ತಗೆದುಕೊಳ್ಳಬೇಕು. ಮಾತ್ರೆಯನ್ನು ಜಗಿದು ನುಂಗಬೇಕು. ಜಂತು ಹುಳು ಸೋಂಕಿನಿಂದ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ವಾಂತಿ, ನಿಶಕ್ತಿ, ಅತಿಸಾರ, ಓದಿನಲ್ಲಿ ಏಕಾಗ್ರತೆ ಕೊರತೆ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಮಕ್ಕಳು ಆರು ತಿಂಗಳಿಗೊಮ್ಮೆ ಜಂತು ಹುಳು ಮಾತ್ರೆ ತೆಗೆದುಕೊಳ್ಳಬೇಕು. ಜೊತೆಗೆ ಸೋಂಕು ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಹಾರ ತೆಗೆದುಕೊಳ್ಳುವ ಮುನ್ನ ಸೋಪಚ್ಚಿ ಕೈಗಳನ್ನು ತೊಳೆದುಕೊಳ್ಳಬೇಕು. ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ರೋಟರಿ ಪೂರ್ವ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟ್ ಎಂ.ಚಂದ್ರಶೇಖರಯ್ಯ ಮಾತನಾಡಿ, ಜಂತು ಹುಳುಗಳು ಪರಾವಲಂಬಿ ಜೀವಿಯಾಗಿದ್ದು, ಇವು ಮೂಲ ಜೀವವನ್ನು ಬೆಳೆಯಲು ಬಿಡುವುದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ಡಿಎಲ್‌ಒ ಡಾ.ಕಿರಣ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಟಿಎಚ್‌ಒ ಡಾ.ಚಂದ್ರಶೇಖರ್, ರೋಟರಿ ಪೂರ್ವ ಖಜಾಂಚಿ ವಿಜಯಕುಮಾರ್, ರೋಟರಿ ಪೂರ್ವ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲ ಸೂರ್ಯನಾರಾಯಣ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ ಸ್ವಾಗತಿಸಿದರು. ರೋಟರಿ ಪೂರ್ವ ಶಿಕ್ಷಣ ಕಾರ್ಯದರ್ಶಿ ಎಸ್.ವಿ.ರಾಮಚಂದ್ರ ವಂದಿಸಿದರು.