ಕನ್ನಡಪ್ರಭ ವಾರ್ತೆ ಖಾನಾಪುರ
ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ಕುಡಿಯುವ ನೀರು ಸರಬರಾಜು ಕುರಿತ ಮುಂಜಾಗೃತಾ ಸಭೆಯಲ್ಲಿ ಅವರು ಮಾತನಾಡಿದರು. ಈಗಷ್ಟೇ ಬೇಸಿಗೆ ಪ್ರಾರಂಭವಾಗಿದ್ದು, ಮಳೆಗಾಲಕ್ಕೆ ಇನ್ನೂ ಎರಡೂವರೆ-ಮೂರು ತಿಂಗಳು ಬಾಕಿ ಇದೆ. ಅಲ್ಲಿವರೆಗೂ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನೀರು ಸರಬರಾಜು ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಜನರು ನೀರಿಗಾಗಿ ಪರಿತಪಿಸಿದಾಗ ಉದ್ಭವಿಸುವ ಸಮಸ್ಯೆಗೆ ಪರಿಹಾರ ಹುಡುಕದೇ ನೀರಿನ ಸಮಸ್ಯೆ ಉಂಟಾಗಬಹುದಾದ ಸ್ಥಳಗಳ ಪಟ್ಟಿ ಸಿದ್ಧಪಡಿಸಬೇಕು. ಕೇವಲ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಹುಡಕದೇ ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕು. ಊರಿನ ಸಮೀಪದ ಬೋರವೆಲ್‌ಗಳನ್ನು ಬಾಡಿಗೆ ಪಡೆದುಕೊಳ್ಳುವುದು, ತೆರೆದ ಬಾವಿಗಳನ್ನು ಸ್ವಚ್ಛಗೊಳಿಸುವುದು ಸೇರಿ ನಿಯಮಿತ ನೀರು ಸರಬರಾಜು ಆಗುವಂತೆ ಗಮನಹರಿಸಬೇಕು. ಗ್ರಾಮೀಣ ಭಾಗದ ಎಲ್ಲ ನೀರಿನ ಮೂಲಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ತಾಲೂಕಿನ ಎಲ್ಲ ಗ್ರಾಪಂಗಳ ಪಿಡಿಒಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ತಾಪಂ ಇಒ ರಮೇಶ ಮೇತ್ರಿ, ಪಿಆರ್‌ಇಡಿ ಎಇಇ ರಾಜೇಂದ್ರ ಜಾಧವ್, ಲೋಕೋಪಯೋಗಿ ಇಲಾಖೆ ಎಇಇ ಸಂಜಯ ಗಸ್ತಿ, ಸಹಾಯಕ ನಿರ್ದೇಶಕ ವಿಜಯ ಕೋತಿನ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮನೋಹರ ದಾದ್ಮಿ ಸೇರಿದಂತೆ ಪಿಡಿಒಗಳು, ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.