ಕೋಲಾರ : ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಯಾವುದೇ ರೀತಿಯ ಕೊರತೆಯಾಗದಂತೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರು ಪೋಲಾಗದಂತೆ ಲಭ್ಯವಿರುವ ನೀರಿನ ಸಮರ್ಪಕ ನಿರ್ವಹಣೆ ಸೇರಿದಂತೆ ಅವಶ್ಯಕತೆಯಿರುವ ಮತ್ತು ತೀವ್ರ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳಲ್ಲಿ ಖಾಸಗಿ ಬೋರ್ ವೆಲ್ ಗುರುತಿಸಿ, ಮಾಲೀಕರೊಂದಿಗೆ ನಿಯಮಾವಳಿ ಅನ್ವಯ ಒಡಂಬಡಿಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಟ್ಯಾಂಕರ್ ಮೂಲಕ ನೀರು
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಟೆಂಡರ್ ಪ್ರಕ್ರಿಯೆಗಳ ಸಮಸ್ಯೆಯನ್ನು ತಕ್ಷಣ ಬಗೆಹರಿಸಿಕೊಳ್ಳಬೇಕು. ದುರಸ್ತಿ ಇರುವ ಪೈಪ್‌ಲೈನ್ ಗಳುನ್ನು ತಕ್ಷಣ ದುರಸ್ತಿಗೊಳಿಸಿ, ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ವಿವಿಧ ಜಲಾಶಯ ಹಾಗೂ ನದಿಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತುವುದನ್ನು ತಡೆಯಬೇಕು. ಆಯಾ ತಹಸೀಲ್ದಾರರು, ವಿದ್ಯುತ್ ಇಲಾಖೆಯ ಅಧಿಕಾರಿಗಳು ತೀವ್ರ ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆಯಾಗಬೇಕು. ನೀರು ಪೋಲಾಗದಂತೆ ತಡೆಯಲು ನೀರು ಬಿಡುವ ಸಮಯ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಕಸ ವಿಲೇವಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು. ಬರದ ಹಿನ್ನೆಲೆಯಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆದು ನೀರು ಪೂರೈಸಲು ಚುನಾವಣಾ ಸಂದರ್ಭದಲ್ಲಿ ಯಾವುದೇ ಅಭ್ಯಂತರ ಇಲ್ಲ ಎಂದರು.
ಖಾಸಗಿ ಬೋರ್‌ವೆಲ್ ಗುರುತಿಸಿ
ಮುಂಬರುವ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ, ಈಗಿನಿಂದಲೇ ಖಾಸಗಿ ಬೋರ್‌ವೆಲ್ ಗುರುತಿಸುವ ಕಾರ್ಯ ಮಾಡಬೇಕು. ಬೋರ್‌ವೆಲ್ ಗುರುತಿಸಿದ ತಕ್ಷಣ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ತಹಸೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸರಿಪಡಿಸಿಕೊಂಡು ಸಕಾಲಕ್ಕೆ ಹಣ ಸಂದಾಯವಾಗುವಂತೆ ನೋಡಿಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಜಿಲ್ಲೆಯಲ್ಲಿ ಸದ್ಯ ಎಂಟು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಈ ಗ್ರಾಮಗಳಿಗೆ ಬಾಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಅವಶ್ಯಕ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.ಕೋಲಾರ ನಗರದಲ್ಲಿ ಒಟ್ಟಾರೆ 52 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ 42 ಕಾರ್ಯ ನಿರ್ವಹಿಸುತ್ತಿವೆ ಎಂದರು. ಈ 42 ಘಟಕದ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಇನ್ನು ಮೂರು ದಿನದಲ್ಲಿ ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ
ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅವಶ್ಯಕ ಮುಂಜಾಗ್ರತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದು, ಮುಂದಿನ ಎರಡು ತಿಂಗಳು ಇನ್ನೂ ಹೆಚ್ಚು ಉಷ್ಣಾಂಶ ಹೆಚ್ಚಲಿದೆ. ಕಾರಣ ಬಿಸಿಲಿನಲ್ಲಿ ಓಡಾಡುವದನ್ನು ಕಡಿಮೆಮಾಡಬೇಕು. ಎಳನೀರು, ಜೂಸ್ ಲಿಕ್ವಿಡ್ ಮಾದರಿಯ ಪಾನೀಯಗಳನ್ನು ಸೇವಿಸಬೇಕು. ಆರೋಗ್ಯಕ್ಕೆ ವಿಶೇಷ ಗಮನ ನೀಡಬೇಕು. ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣ ಆರೋಗ್ಯ ಕೇಂದ್ರ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿದ್ದಾರೆ. ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಬಸವಂತಪ್ಪ, ಎಡಿಸಿ ಶಂಕರ ವಣಿಕ್ಯಾಳ ಇದ್ದರು.