ಕನ್ನಡಪ್ರಭ ವಾರ್ತೆ ಬೆಳಗಾವಿ
ಜನನ, ಮರಣ ದಾಖಲಾತಿಗಳು ಪ್ರತಿಯೊಬ್ಬ ಸಾರ್ವಜನಿಕರಿಗೆ ಅತೀ ಅಮೂಲ್ಯವಾದ ದಾಖಲೆಗಳಾಗಿದ್ದು, ಇವುಗಳ ನೋಂದಣಿ ಕಾರ್ಯದಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ಅತೀ ಜಾಗರೂಕತೆಯಿಂದ ದಾಖಲಿಸುವಂತೆ ಹೆಚ್ಚುವರಿ ಜಿಲ್ಲಾ ಜನನ, ಮರಣ ನೋಂದಣಾಧಿಕಾರಿ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರೇಖಾ ಶೆಟ್ಟರ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಜನನ, ಮರಣ ನೋಂದಣಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನನ, ಮರಣ ನೋಂದಣಿ ಕಾರ್ಯವು ಪ್ರತಿಶತ ನೂರರಷ್ಟು ಪ್ರಗತಿ ಸಾಧಿಸಲು ಸಂಬಂಧಿಸಿದ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.ಜನನ, ಮರಣ ನೋಂದಣಿ ದಾಖಲೆಗಳನ್ನು ಸಂರಕ್ಷಿಸಿ ನಿರ್ವಹಿಸುವದು ಅತೀ ಮುಖ್ಯವಾಗಿರುತ್ತದೆ. ನೋಂದಣಿ ಸಮಯದಲ್ಲಿ ಸರಿಯಾದ ದಾಖಲೆಗಳನ್ನು ಗಣಕೀಕರಣ ಮಾಡಬೇಕು. ನೋಂದಣಿಗಾಗಿ ಸಂಗ್ರಹಿಸಲಾದ ಶುಲ್ಕವನ್ನು ನಿಯಮಿತವಾಗಿ ಸರ್ಕಾರಕ್ಕೆ ಭರಣಾ ಮಾಡಬೇಕು ಎಂದು ತಿಳಿಸಿದರು.ಮರಣ ದಾಖಲೆಗಳನ್ನು ನೋಂದಣಿ ಮಾಡುವಂತಹ ಸಂದರ್ಭದಲ್ಲಿ ಅಗತ್ಯದ ದಾಖಲೆಗಳನ್ನು ಕುಲಂಕುಷವಾಗಿ ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸುವುದರ ಜೊತೆಗೆ ಜನನ-ಮರಣ ನೋಂದಣಿ ವಹಿಗಳನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ತಿಳಿಸಿದರು.ಹೊಸದಾಗಿ ಸೃಜಿಸಲಾದ ತಾಲೂಕುಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಜನನ, ಮರಣ ದಾಖಲೆಗಳನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಉಪನೋಂದಣಾಧಿಕಾರಿಗಳೆಂದು ನೇಮಕ ಮಾಡಿ ಈಗಾಗಲೇ ತರಬೇತಿ ನೀಡಲಾಗಿರುತ್ತದೆ. ತಾಲೂಕು ಮಟ್ಟದಲ್ಲಿ ರಚಿಸಲಾದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯನ್ನು ನಿಯಮಿತವಾಗಿ ಜರುಗಿಸಿ ಯಾವುದೇ ಕಾರಣಕ್ಕೂ ಜನನ, ಮರಣ ನೋಂದಣಿ ಕಾರ್ಯದಲ್ಲಿ ವಿಳಂಬಕ್ಕೆ ಆಸ್ಪದ ನೀಡಬೇಡಿ. ಜಿಲ್ಲೆಯಲ್ಲಿ 1471 ನೋಂದಣಿ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು ಇವುಗಳ ಪೈಕಿ 1402 ಘಟಕಗಳು ಗ್ರಾಮೀಣ ಹಾಗೂ 69 ಘಟಕಗಳು ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೇ-2024ರ ಅಂತ್ಯದವರೆಗೆ 30905 ಜನನ ಹಾಗೂ 15833 ಮರಣ ದಾಖಲೆಗಳನ್ನು ನೋಂದಣಿ ಮಾಡಲಾಗಿರುತ್ತದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರೇಖಾ ಶೆಟ್ಟರು ತಿಳಿಸಿದರು. ಇದೇ ಸಂದರ್ಭದಲ್ಲಿ ಕೃಷಿ ಅಂಕಿ ಅಂಶಗಳ ಹಾಗೂ 11ನೇ ಕೃಷಿ ಗಣತಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ಜರುಗಿತು. ಸಭೆಯಲ್ಲಿ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು, ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜನನ, ಮರಣ ನೋಂದಾಣಿಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರುಗಳು ಉಪಸ್ಥಿತರಿದ್ದರು.