ಅಮೂಲ್ಯ ಜೀವಕ್ಕೆ ಕುತ್ತು ಬಾರದಂತೆ ಎಚ್ಚರ ವಹಿಸಿ

KannadaprabhaNewsNetwork | Published : Feb 21, 2024 2:09 AM

ಸಾರಾಂಶ

ಎದೆ ನೋವು ಕಾಣಿಸಿಕೊಂಡರೆ ಅದು ಗ್ಯಾಸ್ ಇರಬಹುದು ಅಥವಾ ಇನ್ನೇನೋ ಸಣ್ಣಪುಟ್ಟ ಸಮಸ್ಯೆ ಇರಬಹುದು ಎಂದು ಕೆಲವರು ಅಸಡ್ಡೆ ತೋರುತ್ತಾರೆ. ಎಂದೂ ಹಾಗೆ ಮಾಡಬೇಡಿ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕದ ಹೆಸರಾಂತ ಮಲ್ಟಿ ಸ್ಪೇಷಾಲಿಟಿ ಆರೋಗ್ಯ ಕೇಂದ್ರವಾದ ಯುನೈಟೆಡ್ ಆಸ್ಪತ್ರೆಯು ಜನಸಾಮಾನ್ಯರಿಗಾಗಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ತನ್ನ 12ನೇ ವರ್ಷಾಚರಣೆ ಆಚರಿಸಿಕೊಂಡಿತು.

ಜ್ಯೋತಿ ಬೆಳಗಿಸುವ ಮೂಲಕ ಹೃದಯ ಶಿಬಿರಕ್ಕೆ ಚಾಲನೆ ನೀಡಿದ ಕಲಬುರಗಿ ನಗರದ ಪೊಲೀಸ್ ಕಮೀಷನರ್ ಯುನೈಟೆಡ್ ಆಸ್ಪತ್ರೆಯು ತನ್ನ ಪಯಣದ ಬಹುಮುಖ್ಯ ಮೈಲಿಗಲ್ಲೊಂದನ್ನು ಹೀಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ಆಚರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎದೆ ನೋವು ಕಾಣಿಸಿಕೊಂಡರೆ ಅದು ಗ್ಯಾಸ್ ಇರಬಹುದು ಅಥವಾ ಇನ್ನೇನೋ ಸಣ್ಣಪುಟ್ಟ ಸಮಸ್ಯೆ ಇರಬಹುದು ಎಂದು ಕೆಲವರು ಅಸಡ್ಡೆ ತೋರುತ್ತಾರೆ. ಎಂದೂ ಹಾಗೆ ಮಾಡಬೇಡಿ. ಅದು ಹೃದಯಾಘಾತದ ಮುನ್ಸೂಚನೆ ಆಗಿರಬಹುದು. ಹಾಗಾಗಿ, ಹೃದಯಾಘಾತದ ಯಾವುದೇ ಲಕ್ಷಣಗಳು ಕಂಡುಬಂದರೂ ಕೂಡಲೇ ಆಸ್ಪತ್ರೆಗೆ ಧಾವಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಸಡ್ಡೆಯಿಂದ ಅಮೂಲ್ಯ ಜೀವಕ್ಕೆ ಕುತ್ತು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಕರೆ ನೀಡಿದರು.

ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿ, ಹನ್ನೆರಡು ವರ್ಷಗಳ ಹಿಂದೆ 2012ರ ಫೆ.19ರಂದು ಕೇವಲ 24 ಹಾಸಿಗೆಯ ಒಂದು ಸಣ್ಣ ಆಸ್ಪತ್ರೆಯಾಗಿ ಪ್ರಾರಂಭವಾದ ಯುನೈಟೆಡ್ ಆಸ್ಪತ್ರೆ ಈಗ 150 ಹಾಸಿಗೆ ದೊಡ್ಡ ಆಸ್ಪತ್ರೆಯಾಗಿ ಮಾತ್ರವಲ್ಲ ಅತ್ಯಾಧುನಿಕ ತಂತ್ರಜ್ಞಾನ, ಉತ್ಕೃಷ್ಟ ದರ್ಜೆಯ ಉಪಕರಣಗಳು ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕಲ್ಯಾಣ ಕರ್ನಾಟಕದ ಅಚ್ಚುಮೆಚ್ಚಿನ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎಂದರು.

ಈ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ಮಾತ್ರವಲ್ಲದೇ ವೈದ್ಯರು ಸೂಚಿಸಿದರೆ ಆಂಜಿಯೋಗ್ರಾಂ ರೀತಿಯ ಕ್ಯಾಥ್ ಲ್ಯಾಬ್ ಪ್ರಕ್ರಿಯೆಯನ್ನೂ ಕೂಡ ಉಚಿತವಾಗಿ ಮಾಡುತ್ತೇವೆಂದರು.

ಈ ಉಚಿತ ಶಿಬಿರದಲ್ಲಿ ಸುಮಾರು 870 ಜನರನ್ನು ಪರೀಕ್ಷಿಸಲಾಗಿದ್ದು ಎಲ್ಲರಿಗೂ ರಕ್ತಪರೀಕ್ಷೆ ಮತ್ತು ಇಸಿಜಿಗಳನ್ನು ಮಾಡಲಾಯಿತು. ಅವರಲ್ಲಿ 90 ರೋಗಿಗಳಿಗೆ ವೈದ್ಯರ ಸಲಹೆಯ ಮೇರೆಗೆ ಇಕೋ ಸ್ಕ್ಯಾನಿಂಗ್ ಮಾಡಲಾಗಿದ್ದು ಅವರಲ್ಲಿ ಸುಮಾರು 30 ರೋಗಿಗಳಿಗೆ ಕೊರೋನರಿ ಆಂಜಿಯೋಗ್ರಾಂ ಪ್ರಕ್ರಿಯೆಗೆ ಒಳಗಾಗಲು ಸಲಹೆ ನೀಡಲಾಯಿತು. 550ಕ್ಕೂ ಹೆಚ್ಚು ರೋಗಿಗಳು ಕ್ರಾಸ್ ಕನ್ಸಲ್ಟೇಶನ್ ಕೂಡ ಮಾಡಿಸಿಕೊಂಡರು.

ಯುನೈಟೆಡ್ ಆಸ್ಪತ್ರೆಯ ನಿರ್ದೇಶಕರು ಮತ್ತು ಹಿರಿಯ ನೇತ್ರಜ್ಞೆ ಡಾ. ವೀಣಾ ಸಿದ್ದಾರೆಡ್ಡಿ, ಹಿರಿಯ ಹೃದಯ ತಜ್ಞರಾದ ಡಾ. ಬಸವಪ್ರಭು ಅಮರಖೇಡ್ ಮತ್ತು ಡಾ. ಅರುಣ್ ಕುಮಾರ್ ಹರಿದಾಸ್, ಮೂಳೆ ತಜ್ಞರಾದ ಡಾ. ರಾಜು ಕುಲ್ಕರ್ಣಿ ಮತ್ತು ಡಾ. ನಿಶಾಂತ್ ಜಾಜಿ, ಇಂಟೆನ್ಸಿವಿಸ್ಟ್ ಡಾ. ಸುದರ್ಶನ ಲಾಖೆ ಮತ್ತು ಡಾ. ಶೇಖ್ ಅಹ್ಮದ್, ಜನರಲ್ ಸರ್ಜನ್ ಡಾ. ಮೊಹ್ಮದ್ ಅಬ್ದುಲ್ ಬಶೀರ್, ನರರೋಗ ತಜ್ಞರಾದ ಡಾ. ವಿನಯ ಸಾಗರ್ ಶರ್ಮ, ಪ್ಲಾಸ್ಟಿಕ್ ಸರ್ಜನ್ನರುಗಳಾದ ಡಾ. ಪವನ್ ಪಾಟೀಲ್ ಮತ್ತು ಡಾ. ಅನಿಲ್ ಕುಮಾರ್ ಮಲ್ಹಾರಿ, ಮಕ್ಕಳ ತಜ್ಞರಾದ ಡಾ. ಪ್ರಶಾಂತ್ ಕುಲ್ಕರ್ಣಿ, ಸ್ತ್ರೀರೋಗ ತಜ್ಞರಾದ ಡಾ. ಶ್ವೇತಾ ಆಳಂದ, ಫಿಜಿಶಿಯನ್ನರಾದ ಡಾ. ದಯಾನಂದ ರೆಡ್ಡಿ ಮತ್ತು ಡಾ. ಶಿವರಾಜ್ ಹಂಚಿನಾಳ, ರೇಡಿಯಾಲಿಸ್ಟ್ ಡಾ. ರಾಮಾಚಾರಿ, ಫಿಜಿಯೋಥೆರೆಪಿಸ್ಟ್ ಡಾ. ಅಬ್ದುಲ್ ಹಕೀಮ್, ಸೀನಿಯರ್ ಅಡ್ಮಿನ್ ದಾವುದ್ ಅಲಿ ಮತ್ತು ಡಾ. ಜಿತೇಂದ್ರ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಗೀತಾ, ಮಾರುಕಟ್ಟೆ ವಿಭಾಗದ ಮ್ಯಾನೇಜರ್ ರಾಚಣ್ಣ ಇದ್ದರು.

Share this article