ಅನಗತ್ಯ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ

KannadaprabhaNewsNetwork | Published : Mar 26, 2025 1:34 AM

ಸಾರಾಂಶ

ಅನಧಿಕೃತವಾಗಿ ಬಳಸುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ, ಯಾವುದೇ ಕಾರಣಕ್ಕೂ ಎಲ್ಲಿಯೂ ಅನಗತ್ಯವಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು.‌

ಕನ್ನಡಪ್ರಭ ವಾರ್ತೆ ಇಂಡಿ

ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕೆರೆ ಸುತ್ತಮುತ್ತಲು ಅನಧಿಕೃತವಾಗಿ ಬಳಸುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ, ಯಾವುದೇ ಕಾರಣಕ್ಕೂ ಎಲ್ಲಿಯೂ ಅನಗತ್ಯವಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು.‌ ಕೇವಲ ಫೋಟೋ ಹಾಕಿ ಕೆಲಸ ಮಾಡಿದ್ದೇವೆ ಅನ್ನೊದಕ್ಕಿಂತ, ಪರಿಣಾಮಕಾರಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಹಸೀಲ್ದಾರ್‌ ಬಿ.ಎಸ್ ಕಡಕಭಾವಿ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಕುಡಿಯುವ ನೀರಿನ ಕುರಿತು ನಡೆದ ಪಿಡಿಒ ಮತ್ತು ತಾಲೂಕುಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಬರಗಾಲ ಪರಿಸ್ಥಿತಿಯನ್ನು ಬಹಳ ಗಂಭೀರವಾಗಿ ಅನುಭವಿಸಿದ್ದೇವೆ. ಆದರೆ ಈ ಬಾರಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.

ಕಂದಾಯ, ಪೊಲೀಸ್‌, ಹೆಸ್ಕಾಂ ಇಲಾಖೆಯವರು ಮತ್ತು ಪಿಡಿಒಗಳು ಕಾಲುವೆ ನೀರು ರೈತರು ಕೃಷಿಗೆ ಬಳಸದಂತೆ ನೋಡಿಕೊಂಡರೆ ಕುಡಿಯುವ ನೀರಿನ ತೊಂದರೆ ಆಗುವುದಿಲ್ಲ. ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ, ಸಣ್ಣ ನೀರಾವರಿ ಮತ್ತು ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿಗಳು ಹೆಚ್ಚಿನ ಜಾಗರೂಕತೆ ವಹಿಸಿ ಏಪ್ರಿಲ್- ಮೇ ಎರಡು ತಿಂಗಳಲ್ಲಿ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಪಂ ಇಒ ನಂದೀಪ ರಾಠೋಡ ಮಾತನಾಡಿ, ಈ ಬಾರಿ ತಾಲೂಕು ಬರಗಾಲ ಎಂದು ಘೋಷಿಸಿಲ್ಲ. ಹೀಗಾಗಿ ಸದ್ಯ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಅನುದಾನ ಬರುವುದಿಲ್ಲ. ಕಾರಣ ಇದ್ದ ಎಲ್ಲ ಸಂಪನ್ಮೂಲ ಬಳಸಿಕೊಂಡು ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಅವಶ್ಯವೆನಿಸಿದ್ದಲ್ಲಿ ಪಿಡಿಓಗಳು ಗ್ರಾಪಂ ಸಂಪನ್ಮೂಲ ಬಳಕೆ ಮಾಡಿಕೊಳ್ಳಲು ತಿಳಿಸಿದರು.

ಹೊರ್ತಿ ಭಾಗಕ್ಕೆ ಬರುವ ಬಹುಹಳ್ಳಿ ಕುಡಿಯುವ ನೀರಿನ ವಿದ್ಯುತ್‌ ಮೋಟಾರ್‌ ಕೆಟ್ಟಿರುವುದರಿಂದ ಅನೇಕ ಗ್ರಾಮಗಳಿಗೆ ನೀರಿನ ತೊಂದರೆಯಾಗುತ್ತದೆ. ಕಾರಣ ಸಾಧ್ಯವಾದಷ್ಟು ಬೇಗ ಹೊಸ ವಿದ್ಯುತ್‌ ಮೋಟಾರ್‌ ಅಳವಡಿಸಬೇಕು. ಇರುವ ವಿದ್ಯುತ್‌ ಮೋಟಾರ್‌ ರಿಪೇರಿ ಮಾಡಲು ಪಿಡಿಒಗಳು ಸಭೆಗೆ ಅಭಿಪ್ರಾಯ ತಿಳಿಸಿದರು.

ಕೆಬಿಜೆಎನ್‌ಎಲ್‌ ರಾಂಪೂರ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಹಿರಿಯ ಪಶು ವೈದ್ಯಾಧಿಕಾರಿ ಡಾ.ರಾಜಕುಮಾರ ಅಡಕಿ, ಎಇಇ ಗ್ರಾಮೀಣ ನೀರು ಸರಬರಾಜು ಎಸ್.ಬಿ.ಪಾಟೀಲ ಮಾತನಾಡಿದರು.

ಪಿಡಿಒಗಳಾದ ಸಿ.ಜಿ.ಪಾರೆ, ಜಬ್ಬಾರ ಹಳ್ಳಿ, ಬಿ.ಎಂ.ಬಬಲಾದ, ಮಹೇಶ ನಾಯಕ, ಎಸ್.ಎಸ್.ಶಿವಣಗಿ, ಎಸ್.ಆರ್.ಮುಜಗೊಂಡ, ವೀಣಾ ಕೊಳುರಗಿ, ಎಚ್.ಎಚ್.ಗುನ್ನಾಪುರ, ಜಿ.ಎಂ.ಬಿರಾದಾರ, ಯಲ್ಲಪ್ಪ ಪೂಜಾರಿ, ಸಿದ್ದು ಪೂಜಾರಿ ಮತ್ತಿತರಿದ್ದರು.

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ತಾಲೂಕಿನಲ್ಲಿರುವ ಸಂಗೋಗಿ, ಹಂಜಗಿ, ಅರ್ಜನಾಳ ಮತ್ತು ಲೋಣಿ ಬಿಕೆ ಕೆರೆಗಳನ್ನು ತುಂಬಿದ್ದು ಬರುವ ದಿನಗಳಲ್ಲಿ ಆ ನೀರನ್ನು ಕೆರೆಗಳ ಮೂಲಕ ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಪೂರೈಸಲಾಗುತ್ತದೆ.

ಮನೋಜಕುಮಾರ ಗಡಬಳ್ಳಿ, ಕೆಬಿಜೆಎನ್‌ಎಲ್‌ ಅಧಿಕ್ಷಕ ಅಭಿಯಂತರ,ರಾಂಪೂರ

Share this article