ಆತಂಕವಾದದ ವಿಷಬೀಜ ಬಿತ್ತುವವರ ಬಗ್ಗೆ ಎಚ್ಚರ ಇರಲಿ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Aug 16, 2025, 12:00 AM IST
ಫೋಟೋ : 15ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಆರ್ಥಿಕ ಹೊರೆ ಹೇರುವ ವಿದೇಶಿಗರಿಗೆ ನಮ್ಮ ಒಗ್ಗಟ್ಟಿನ ಬೆಳವಣಿಗೆ ಎಚ್ಚರಿಕೆಯಾಗುವ ಹಾಗೆ ಏಕತೆಯಿಂದ ನಡೆಯೋಣ.

ಹಾನಗಲ್ಲ: ಪರಕೀಯರ ಜೀತದಾಳುಗಳಂತಿದ್ದ ನಮ್ಮ ದೇಶಕ್ಕೆ ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ್ಯಕ್ಕೆ ಸಾಕ್ಷಿಯಾದ ನಮ್ಮ ಹುತಾತ್ಮ ಹಾಗೂ ವೀರ ಸೇನಾನಿಗಳನ್ನು ನೆನೆದು ಭಕ್ತಿಯಿಂದ ನಮಿಸೋಣ. ಆತಂಕವಾದದ ವಿಷಬೀಜ ಬಿತ್ತುವವರ ಬಗೆಗೆ ಎಚ್ಚರಿಕೆಯಿಂದಿರೋಣ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.ಶುಕ್ರವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ನಮ್ಮ ಪೀಳಿಗೆ ಅದೃಷ್ಟವಂತರು. ಪರಕೀಯರ ಒಡೆದಾಳುವ ನೀತಿಗೆ ಭಾರತ ನಲುಗಿದೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಆಚರಿಸೋಣ ಎಂದರು.

ಆರ್ಥಿಕ ಹೊರೆ ಹೇರುವ ವಿದೇಶಿಗರಿಗೆ ನಮ್ಮ ಒಗ್ಗಟ್ಟಿನ ಬೆಳವಣಿಗೆ ಎಚ್ಚರಿಕೆಯಾಗುವ ಹಾಗೆ ಏಕತೆಯಿಂದ ನಡೆಯೋಣ. ಇದು ಶರಣರು ಸಂತರ ನಾಡು. ಎಲ್ಲರನ್ನೂ ಪ್ರೀತಿಸುವುದು ನಮ್ಮ ಗುಣ. ಹಾನಗಲ್ಲ ತಾಲೂಕು ನೀರಾವರಿಯಲ್ಲಿ ಅತಿ ದೊಡ್ಡ ಹೆಜ್ಜೆ ಹಾಕಿ ಈಗ ತಾಲೂಕಿನ 900 ಕೆರೆಗಳನ್ನು ತುಂಬಿಸಲು ಸಜ್ಜಾಗಿದೆ. ಮಾವು ವಿವಿಧ ಹಣ್ಣು, ವಿವಿಧ ಕೃಷಿ ಉತ್ಪನ್ನಗಳ ಸಂಸ್ಕರಣ ಘಟಕ ಸ್ಥಾಪನೆಯಾಗುತ್ತಿದೆ. ಈಗ ₹50 ಕೋಟಿ ಅನುದಾನದಲ್ಲಿ ತಾಲೂಕಿನ 42 ಗ್ರಾಮ ಪಂಚಾಯಿತಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಅವಕಾಶವಾಗಿದೆ ಎಂದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎಸ್. ರೇಣುಕಾ, 79ರ ಸ್ವಾತಂತ್ರ್ಯ ಸಂಭ್ರಮ ನಮ್ಮದು. ಬ್ರಿಟಿಷರ ಸರ್ವಾಧಿಕಾರದ ವಿರುದ್ಧದ ನಮ್ಮ ಹೋರಾಟ ಯಶಸ್ವಿಯಾಗಿದೆ. ನಮ್ಮ ದೇಶದ ರೈತರು ಸೈನಿಕರನ್ನು ನೆನೆದು ಕೃತಜ್ಞರಾಗಿರೋಣ. ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸೋಣ. ಶಿಕ್ಷಣಕ್ಕೆ ಆದ್ಯತೆ ನೀಡಿ ಭವ್ಯ ಭಾರತ ನಿರ್ಮಾಣಕ್ಕೆ ಹೆಜ್ಜೆ ಹಾಕೋಣ ಎಂದರು.

ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ಗಣ್ಯರಾದ ಪುಟ್ಟಪ್ಪ ನರೇಗಲ್ಲ, ವಿಜಯಕುಮಾರ ದೊಡ್ಡಮನಿ, ಅನಿತಾ ಶಿವೂರ, ಮಮತಾ ಆರೆಗೊಪ್ಪ, ಟಾಕನಗೌಡ ಪಾಟೀಲ, ವೀರೇಶ ಬೈಲವಾಳ, ಕ್ಷೇತ್ರ ಶಿಕ್ಷಣಧಿಕಾರಿ ವಿ.ವಿ. ಸಾಲಿಮಠ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಪರಶುರಾಮ ಪೂಜಾರ, ಜಗದೀಶ ವೈ.ಕೆ., ಗಿರೀಶ ರಡ್ಡೇರ, ಗುರುನಾಥ ಗವಾಣಿಕರ, ಎಸ್. ದೇವರಾಜ, ಪಿಎಸ್‌ಐ ಸಂಪತ್ ಆನಿಕಿವಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ: ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಧ್ವಜಾರೋಹಣದ ನಂತರ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ