ಸೋಷಿಯಲ್ ಮೀಡಿಯಾ ಬಳಸುವಾಗ ಎಚ್ಚರವಿರಲಿ

KannadaprabhaNewsNetwork |  
Published : Feb 08, 2025, 12:32 AM IST

ಸಾರಾಂಶ

ಮಕ್ಕಳ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ, ಹದಿ ಹರೆಯದ ವಯಸ್ಸಿನ ಗಂಡಾಗಲಿ, ಹೆಣ್ಣಾಗಲಿ ಸೋಷಿಯಲ್ ಮಿಡಿಯಾ ಬಳಸುವ ವೇಳೆ ಎಚ್ಚರಿಕೆಯಿಂದ ಇರುವಂತೆ ನ್ಯಾ.ನೂರುನ್ನಿಸಾ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಮಕ್ಕಳ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ, ಹದಿ ಹರೆಯದ ವಯಸ್ಸಿನ ಗಂಡಾಗಲಿ, ಹೆಣ್ಣಾಗಲಿ ಸೋಷಿಯಲ್ ಮಿಡಿಯಾ ಬಳಸುವ ವೇಳೆ ಎಚ್ಚರಿಕೆಯಿಂದ ಇರುವಂತೆ ನ್ಯಾ.ನೂರುನ್ನಿಸಾ ಸಲಹೆ ನೀಡಿದ್ದಾರೆ.

ನಗರದ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊಬಿಲಿಟಿ ಇಂಡಿಯಾ , ತುಮಕೂರು ಘಟಕದ ವತಿಯಿಂದ ಆಯೋಜಿಸಿದ್ದ ತುಮಕೂರು ಶೈಕ್ಷಣಿಕ ಜಿಲ್ಲೆಯ ಪ್ರೌಢ ಶಾಲಾ ಹಂತದ ಮಕ್ಕಳ ರಕ್ಷಣಾ ಸಮಿತಿಯನ್ನು ಪ್ರತಿನಿಧಿಸುವ ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಸಂಸ್ಥೆಯೊಂದಿಗಿನ ಒಪ್ಪಂದದಂತೆ ಮಕ್ಕಳಿಗೆ ಹಲವಾರು ಹಕ್ಕುಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾದುದ್ದು, ಘನತೆಯಿಂದ ಬದುಕುವ ಹಕ್ಕು ಎಂದರು. ಒಂದು ವೇಳೆ ನಿಮಗೆ ಗೊತ್ತಿಲ್ಲದೆಯೋ, ಗೊತ್ತಿದ್ದೋ, ಸಮಾಜಘಾತಕರೊಂದಿಗೆ ಸಂಪರ್ಕ ಪಡೆದರೆ, ಜೀವನವೀಡಿ, ಜೈಲು, ಕೋರ್ಟು, ವಿಚಾರಣೆ ಎಂದು ಓಡಾಡುವುದರಿಂದ ನಿಮಗೆ ವಿದ್ಯಾಭ್ಯಾಸವೂ ಕುಂಠಿತವಾಗಲಿದೆ. ಅಲ್ಲದೆ ನಿಮ್ಮ ಬಾಲ್ಯವೂ ಇಲ್ಲದಂತಾಗುತ್ತದೆ. ಜಿಲ್ಲೆಯಲ್ಲಿ ಪ್ರತಿವರ್ಷದಿಂದ ವರ್ಷಕ್ಕೆ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 2025ರ ಜನವರಿ ತಿಂಗಳಲ್ಲಿಯೇ 18 ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತೆ ನ್ಯಾ.ನೂರುನ್ನಿಸಾ ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ಮಾತನಾಡಿ, ಇಡೀ ಭಾರತದಲ್ಲಿಯೇ ಮೊದಲ ಬಾರಿಗೆ 2016ರಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ನೀತಿ-2016 ರೂಪಿಸಿದೆ. ನೀತಿ ರೂಪಿತವಾಗಿ 9 ವರ್ಷಗಳಾಗುತ್ತಾ ಬಂದಿದ್ದರೂ ಯಾವ ಶಾಲಾ, ಕಾಲೇಜುಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಹಾಗೂ ಸರಕಾರ ಪ್ರತಿವರ್ಷ ನವೆಂಬರ್ 14 ರಿಂದ ಜನವರಿ 31ರವರೆಗೆ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸಿ, ಮಕ್ಕಳ ಅಭಿಪ್ರಾಯಗಳನ್ನು ಆಲಿಸಲು ಕ್ರಮ ಕೈಗೊಂಡಿದೆ.

ರಾಜ್ಯದ 5927 ಗ್ರಾಮಪಂಚಾಯಿತಿಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆದಿದೆ. ಇದರ ಹಿಂದಿನ ಉದ್ದೇಶ ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ಸಿಗಬೇಕು. ಅವರು ಸಹ ಗ್ರಾಮದ ಅಭಿವೃದ್ದಿಯಲ್ಲಿ ಪಾಲುದಾರರಾಗಬೇಕು ಎಂಬುದಾಗಿದೆ ಎಂದರು.

ಕಳೆದ ವಾರದ ಬಾಲಭವನದಲ್ಲಿಯೇ ಜಿಲ್ಲೆಯ ಎರಡು ಶೈಕ್ಷಣಿಕ ಜಿಲ್ಲೆಗಳ ಬಿಆರ್.ಪಿ, ಸಿಆರ್‌ಪಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ನೀತಿ-2016 ಕುರಿತು ತರಬೇತಿ ನೀಡಲಾಗಿದೆ. ಪ್ರತಿಶಾಲೆಯಲ್ಲಿಯೂ ಮಕ್ಕಳ ಹಕ್ಕುಗಳ ರಕ್ಷಣ ಕ್ಲಬ್ ನಿರ್ಮಾಣ ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚಿಸಲಾಗಿದೆ ಎಂದರು.

ಇಂದು ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರತಿನಿಧಿಗಳಾಗಿರುವ ಮಕ್ಕಳಿಗೆ ತಮ್ಮ ಜವಾಬ್ದಾರಿ ಏನು ಎಂಬುದನ್ನು ತಿಳಿಸುವ ಸಲುವಾಗಿ ಮಕ್ಕಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇಲ್ಲಿಗೆ ಬಂದಿರುವ ಮಕ್ಕಳು ತಮ್ಮ ಸುತ್ತಮತ್ತ, ಶಾಲಾ, ಕಾಲೇಜುಗಳಲ್ಲಿ, ಬಡಾವಣೆಗಳಲ್ಲಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಧ್ವನಿ ಎತ್ತಬೇಕು ಎಂದರು.

ಮೊಬಿಲಟಿ ಇಂಡಿಯಾದ ಮುಖ್ಯಸ್ಥರಾದ ಅಲ್ವಿನಾ ಶಂಕರ್ ಮಾತನಾಡಿ, ಮೊಬಿಲಿಟಿ ಇಂಡಿಯಾ ಸಂಸ್ಥೆ ಪ್ರಮುಖವಾಗಿ ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಾ ಬಂದಿದೆ.ನಿಮ್ಮ ಪರಿಸರದಲ್ಲಿರುವ ವಿಕಲಚೇತನ ಮಕ್ಕಳು ನಿಮ್ಮಂತೆಯೇ ಶಾಲೆಗಳಿಗೆ ಬಂದು ಶಿಕ್ಷಣ ಕಲಿಯುವಂತಹ ವಾತಾವರಣ ನಿರ್ಮಾಣವಾಗಲು ತಾವುಗಳು ಜಾಗೃತಿ ಮೂಡಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಡಾ.ವಾಸುದೇವ ಶರ್ಮಾ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಪ್ರತಿನಿಧಿಗಳು ನಿಮ್ಮ ಶಾಲಾ, ಕಾಲೇಜುಗಳಲ್ಲಿ, ಮಕ್ಕಳ ಹಕ್ಕುಗಳ ರಕ್ಷಣಾ ವಕ್ತಾರರಾಗಿ ಕೆಲಸ ಮಾಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ. ತಮ್ಮನ್ನು ತಾವು ರಕ್ಷಿಸುವ ಕೆಲಸವನ್ನು ತಾವುಗಳೇ ಮಾಡಿಕೊಳ್ಳಬೇಕಾಗಿದೆ. ಕೆಲವೊಂದು ಸಂದರ್ಭದಲ್ಲಿ ಮಕ್ಕಳಿಗೆ ತಾವು ಮೋಸ ಹೋಗಿರುವ ಬಗ್ಗೆ ಅರಿವಿಗೆ ಬಂದಿರುವುದಿಲ್ಲ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಎಲ್ಲರೂ ಪಡೆಯಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೊಬಲಿಟಿ ಇಂಡಿಯಾದ ಹಿರಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಆನಂದ್ ಎಸ್.ಎನ್. ಇದೇ ಪ್ರಥಮ ಬಾರಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಮಕ್ಕಳೊಂದಿಗೆ ಸಂವಾದ ಏರ್ಪಡಿಸಲಾಗಿದೆ. ವಿಶ್ವ ಒಡಂಬಡಿಕೆಯ ಭಾಗವಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಂತೆ ಹಲವಾರು ಜಾಗೃತಿ ಕಾರ್ಯಕ್ರಮಗಳು ಜರುತಿದ್ದು, ಇದನ್ನು ಮಕ್ಕಳು ಅರ್ಥ ಮಾಡಿಕೊಂಡು, ತಮ್ಮ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕೆಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪವಿತ್ರ ಮಾತನಾಡಿದರು.ವೇದಿಕೆಯಲ್ಲಿ ಮೊಬಲಿಟಿ ಇಂಡಿಯಾದ ಅಧಿಕಾರಿಗಳು, ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ