ಓದಿನ ಬಗ್ಗೆ ಪ್ರೀತಿ ಇರಲಿ, ಶಿಕ್ಷಣ ವ್ಯಕ್ತಿತ್ವ ರೂಪಿಸುತ್ತದೆ: ಪ್ರೊ.ಪದ್ಮಾ ಶೇಖರ್

KannadaprabhaNewsNetwork | Published : Nov 11, 2024 12:55 AM

ಸಾರಾಂಶ

ಶಿಕ್ಷಣದಿಂದ ಎಲ್ಲವೂ ಸಾಧ್ಯ, ಆದ್ದರಿಂದ ಓದು ನಮ್ಮ ಪ್ರಥಮ ಆಯ್ಕೆಯಾಗಬೇಕು. ಇದು ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ. ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಗುರುಗಳ ಮಾರ್ಗದರ್ಶನದಲ್ಲಿ ಗುರಿ ತಲುಪಬೇಕು. ಆ ಮೂಲಕ ಜ್ಞಾನ ವಿಸ್ತಾರ ಮಾಡಿಕೊಳ್ಳಬೇಕು. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಓದಿನ ಬಗ್ಗೆ ಪ್ರೀತಿ ಇರಲಿ ಏಕೆಂದರೆ ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಹೇಳಿದರು.

ಅಲೆಯನ್ಸ್ ಕ್ಲಬ್ ಆಫ್ ರಾಧಾಕೃಷ್ಣ, ಸಾವಿತ್ರಿಬಾಯಿಫುಲೆ, ಸಂಜನ ಬಳಗ ಪ್ರತಿಷ್ಠಾನ ವತಿಯಿಂದ ಮಾನಸ ಗಂಗೋತ್ರಿ ಗಾಂಧಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯೋತ್ಸವ, ಶಿಕ್ಷಕರು, ವೈದ್ಯರು, ಎಂಜಿನಿಯರ್ ದಿನಾಚರಣೆ, ಸರ್ಕಾರಿ ಪ್ರೌಢಶಾಲೆಗಳ ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ಎಲ್ಲವೂ ಸಾಧ್ಯ, ಆದ್ದರಿಂದ ಓದು ನಮ್ಮ ಪ್ರಥಮ ಆಯ್ಕೆಯಾಗಬೇಕು. ಇದು ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ. ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಗುರುಗಳ ಮಾರ್ಗದರ್ಶನದಲ್ಲಿ ಗುರಿ ತಲುಪಬೇಕು. ಆ ಮೂಲಕ ಜ್ಞಾನ ವಿಸ್ತಾರ ಮಾಡಿಕೊಳ್ಳಬೇಕು. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ ಎಂದರು.

ಮಾನವೀಯತೆ, ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ವ್ಯಕ್ತಿ ನಿಷ್ಠೆಗಿಂತ ಸಮಷ್ಠಿ ನಿಷ್ಠೆ ಬೆಳೆಸಿಕೊಳ್ಳಬೇಕು. ಈ ಮೂಲಕ ವೈಯಕ್ತಿಕ ಬೆಳವಣಿಗೆಯ ಜೊತೆಗೆ ರಾಷ್ಟ್ರದ ಬೆಳವಣಿಗೆಗೂ ಕಾರಣರಾಗಬೇಕು ಎಂದು ಕರೆ ನೀಡಿದರು.

ಗಾಂಧಿ ಭವನ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್ ಮಾತನಾಡಿ, ಪ್ರತಿಯೊಬ್ಬರಿಗೂ ಪ್ರೀತಿ, ಕಾರುಣ್ಯ, ಮೈತ್ರಿ ಮುಖ್ಯ. ಮನಸ್ಸು ಒಳಿತು ಹಾಗೂ ಕೆಡಕು ಎರಡನ್ನೂ ಮಾಡಬಲ್ಲದು. ಹೀಗಾಗಿ ಅದರ ನಿಯಂತ್ರಣ ಮುಖ್ಯ. ಜ್ಞಾನದ ಬೆಳಕಿನಿಂದ ಅಜ್ಞಾನದ ಕತ್ತಲು ಓಡಿಸಬೇಕು. ಅಂಬೇಡ್ಕರ್, ಮಹಾತ್ಮಗಾಂಧಿ, ಸಾವಿತ್ರಿಬಾಯಿ ಪುಲೆ, ಕುವೆಂಪು ಅವರ ಆದರ್ಶಗಳ ಹಾದಿಯಲ್ಲಿ ಸಾಗಿ, ಮನುಷ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯೋತ್ಸವ ಕುರಿತು ಅಲೆಯನ್ಸ್ ಕ್ಲಬ್ಗಳ ಒಕ್ಕೂಟದ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಬೈರಿ ಮಾತನಾಡಿ, ಕನ್ನಡನಾಡಿನ ಇತಿಹಾಸವನ್ನು ವಿವರಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಲೆಯನ್ಸ್ ಜಿಲ್ಲಾ ರಾಜ್ಯಪಾಲ ಸಿರಿ ಬಾಲು, ಎರಡನೇ ಉಪ ರಾಜ್ಯಪಾಲ ಮಹಾಬಲೇಶ್ವರ ಭೈರಿ, ಖಜಾಂಚಿ ಆರ್. ಕೃಷ್ಣೋಜಿರಾವ್, ಸಾರ್ವಜನಿಕ ಸಂಪರ್ಕಾಧಿಕಾರಿ ಎನ್. ಬೆಟ್ಟೇಗೌಡ, ಪ್ರಾಂತೀಯ ಅಧ್ಯಕ್ಷರಾದ ಎ.ಸಿ. ರವಿ, ಇಂದಿರಾ ವೆಂಕಟೇಶ್, ಸಾವಿತ್ರಿಬಾಯಿ ಪುಲೆ ಕ್ಲಬ್ ಅಧ್ಯಕ್ಷೆ ಕೆ.ಎಸ್. ಭಾರ್ಗವಿ ಮುಖ್ಯ ಅತಿಥಿಗಳಾಗಿದ್ದರು. ಅಲೆಯನ್ಸ್ ಕ್ಲಬ್ ಆಫ್ ರಾಧಾಕೃಷ್ಣ ಎನ್. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಸಂಘಟಕರಾದ ಕ್ಲಬ್ ಸೇವಾ ಸಮಿತಿ ಅಧ್ಯಕ್ಷ, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನ. ಗಂಗಾಧರಪ್ಪ ಪ್ರಾಸ್ತಾವಿಕ ಭಾಷಣ ಮಾಡಿ, ತಮ್ಮ ಮಾತಾಪಿತರಾದ ಮಲ್ಲಮ್ಮ, ನಂಜುಂಡಶೆಟ್ಟಿ ಅವರ ಸ್ಮರಣಾರ್ಥ 1991 ರಿಂದ ನಿರಂತರವಾಗಿ ಸಾಧಕರನ್ನು ಸನ್ಮಾನಿಸುತ್ತಿದ್ದೇನೆ. ಅದೇ ರೀತಿ ಮೊಮ್ಮಗಳು ಸಂಜನಾ ಸ್ಮರಣಾರ್ಥ 2009 ರಿಂದ ಸರ್ಕಾರಿ ಶಾಲೆಯ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ ಎಂದರು.

ಅಲೆಯನ್ಸ್ ಕ್ಲಬ್ ಕಾರ್ಯದರ್ಶಿ ಜಿ. ಶ್ರೀನಿವಾಸ್, ಖಜಾಂಚಿ ವಿ. ವೆಂಕಟೇಶ್, ಸಾವಿತ್ರಿಬಾಯಿ ಪುಲೆ ಕ್ಲಬ್ ಕಾರ್ಯದರ್ಶಿ ಉಷಾನಂದಿನಿ, ಖಜಾಂಚಿ ರಮ್ಯಾ ರವಿ ಇದ್ದರು.

ಡಾ.ಪೂರ್ಣಿಮಾ, ಶ್ರೀಲತಾ, ಸಿ.ಎಸ್. ವಾಣಿ ನಾಡಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಎಂಜಿನಿಯರ್ ಲಾವಣ್ಯ ತಯಾರಿಸಿರುವ ‘ಪದಕಟ್ಟು’ ಅನಾವರಣ ಮಾಡಲಾಯಿತು.

ಸನ್ಮಾನಿತರು:

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹುಣಸೂರು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಎಚ್.ಎನ್. ಗಿರೀಶ್, ರಾಜ್ಯಪ್ರಶಸ್ತಿ ಪುರಸ್ಕೃತ ಪ್ರಾಂಶುಪಾಲ ಇದೇ ಕಾಲೇಜಿನ ಎ. ರಾಮೇಗೌಡ, ಶಿಕ್ಷಕ ಹಿನ್ಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಎಸ್. ಮಧುಸೂದನ್ ಅವರನ್ನು ಸನ್ಮಾನಿಸಲಾಯಿತು.

ಇದಲ್ಲದೇ, ಪ್ರಾಧ್ಯಾಪಕರಾದ ಎನ್.ಕೆ. ಲೋಲಾಕ್ಷಿ, ಸಿ.ಗುರುಸಿದ್ದಯ್ಯ, ಲ್ಯಾನ್ಸಿ ಡಿಸೋಜ, ಶಿವಾನಂದ ಸಿಂಧನಕೇರ, ಸತ್ಯನಾರಾಯಣ, ಎಂಜಿನಿಯರ್, ಡಾಕ್ಟರ್ ಹಾಗೂ ಶಿಕ್ಷಕ ದಂಪತಿಗಳಾದ ಡಾ.ಶ್ರೀನಾಥ್, ಡಾ.ಮಧು ಶ್ರೀನಾಥ್, ಜಗದೀಶ್ ಆರ್ ತುಂಗಾ, ನೇತ್ರಾವತಿ, ಡಾ.ಎಸ್.ಎಸ್. ಪಾರ್ಥಸಾರಥಿ, ಮನೋಹರ್, ಶ್ರೀಲತಾ ಮನೋಹರ್, ಎಸ್.ಎನ್. ಮಹದೇವು, ಪಿ.ಆರ್. ಪದ್ಮಾ, ಡಾ.ದೇವಿ ಆನಂದ್, ಡಾ.ಪೂರ್ಣಿಮಾ, ಡಾ.ಎ.ಒ. ಚಿರಂಜೀವಿ, ಕೆ. ಮಹಾಬಲೇಶಪ್ಪ, ಜಿ.ಸಿ. ಭವ್ಯಾ, ಶಾರದಾ ಶಿವಲಿಂಗಸ್ವಾಮಿ, ಪದ್ಮಾ, ರಾಜರತ್ನಮ್ಮ, ವನಿತಾ, ಜಿ.ಸಿ. ಉಷಾ, ರೇಷ್ಮಾ ಖಾತೂನ್, ಎ. ಲತಾ, ಎಂ.ವಿ. ಜಯಶ್ರೀ, ಸಿ.ಜೆ. ಯಶವಂತಕುಮಾರ್, ಎಚ್.ಎಸ್. ಶ್ರೀಕಂಠಮೂರ್ತಿ, ಎಂ. ಸಿದ್ದರಾಜು, ನಿವೃತ್ತ ಯೋಧ ಪಿ.ಎಸ್. ಅಶೋಕ್, ಪ್ರಗತಿಪರ ರೈತರಾದ ರಂಗಸಮುದ್ರ ಪಿ.ರಮೇಶ್, ಕಳಲೆ ಜವರನಾಯಕ, ನಗರ ನೈರ್ಮಲ್ಯ ರಕ್ಷಕರಾದ ಗಂಗೋತ್ರಿ ಬಡಾವಣೆಯ ಶಿವು ಹಾಗೂ ಸುಜಾತ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು, ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮತ್ತು ಏಕಪೋಷಕ ವಿದ್ಯಾರ್ಥಿಗಳಿಗೆ ತಲಾ 1,000 ರು. ಪ್ರೋತ್ಸಾಹಧನ ವಿತರಿಸಲಾಯಿತು. ಪಿಯುಸಿಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಪಡೆದಿರುವ ಮೈಸೂರು ತಾಲೂಕಿನ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

Share this article