ಕಾರವಾರ: ಆತ್ಮಹತ್ಯೆ ತಡೆಯಲು ಮಾನಸಿಕವಾಗಿ ಸದೃಢರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಹೇಳಿದರು.
ಆಧುನಿಕ ಯುಗದಲ್ಲಿ ಮಕ್ಕಳು, ಪೋಷಕರೊಂದಿಗಿನ ಆತ್ಮೀಯತೆಗಿಂತ ಮೊಬೈಲ್, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂಗಳೊಂದಿಗೆ ಹೆಚ್ಚಿನ ಆತ್ಮೀಯತೆ ಹೊಂದಿರುವುದರಿಂದ ಆತ್ಮಹತ್ಯೆಯ ಯೋಚನೆಗಳು ಬರುತ್ತವೆ. ಮಕ್ಕಳು ಜನರಲ್ಲಿ ಆತ್ಮೀಯತೆ, ವಿಶ್ವಾಸ ಬೆಳೆಸಿಕೊಳ್ಳಬೇಕು. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೇ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಂತೆ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಶಂಕರ ರಾವ್, ಆತ್ಮಹತ್ಯೆಯು ವಿಶ್ವದಲ್ಲಿ ಸಾಮಾಜಿಕ ಪಿಡುಗಾಗಿ ಉಳಿದುಕೊಂಡಿದೆ. ಅನೇಕ ಕಾರಣಗಳಿಂದ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವರಿಗಿಂತ ಪ್ರಯತ್ನಿಸುವರ ಸಂಖ್ಯೆ ಹೆಚ್ಚಿಗಿದೆ. ಅದರಲ್ಲೂ 14ರಿಂದ 24 ವರ್ಷದ ವಯೋಮಾನದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.ಶಿಕ್ಷಣ ಇಲಾಖೆಯ ಯೋಜನಾ ಉಪ ಸಮನ್ವಯಾಧಿಕಾರಿ ಕಲ್ಪನಾ ನಾಯ್ಕ ಮಾತನಾಡಿದರು. ಮನೋರೋಗ ತಜ್ಞ ವೈದ್ಯ ಡಾ. ಸುಹಾಸ್, ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲೆ ವೀಣಾ ತೊರ್ಕೆ ಆತ್ಮಹತ್ಯೆ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು.
ಆತ್ಮಹತ್ಯೆ ತಡೆಗಟ್ಟುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.ಶಾಲಾ ಶಿಕ್ಷಣ ಇಲಾಖೆಯ ಸವಿತಾ ನಾಯ್ಕ ಇದ್ದರು. ಸ್ವಾತಿ ಭಟ್ ಪ್ರಾರ್ಥಿಸಿದರು. ಉಪನ್ಯಾಸಕ ಶುಭಂ ತಳೇಕರ್ ಸ್ವಾಗತಿಸಿದರು. ಸ್ನೇಹಾ ವಂದಿಸಿದರು.