ಹೊಸಪೇಟೆ: ಸಂಶೋಧನಾರ್ಥಿಗಳು ಚಳವಳಿಗಳನ್ನು ಸೀಮಿತ ದೃಷ್ಟಿಯಿಂದ ನೋಡದೇ ಸಾಮಾಜಿಕ, ಧಾರ್ಮಿಕ, ಸಾಹಿತ್ಯಕವಾಗಿ ಅವುಗಳ ಮೂಲ ಆಶಯ ನೋಡಬೇಕಾಗುತ್ತದೆ. ಕರ್ನಾಟಕದಲ್ಲಿ ದಾಸಸಾಹಿತ್ಯ, ಮಹಾರಾಷ್ಟ್ರದಲ್ಲಿ ವಾರಕರಿ ಚಳವಳಿ ಏಕಕಾಲದಲ್ಲಿ ಆರಂಭವಾಗಿದ್ದು, ಈ ಎರಡು ರಾಜ್ಯಗಳು ಅವಳಿ ಸಹೋದರರಿದ್ದಂತೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ವಿಠ್ಠಲರಾವ್ ಟಿ. ಗಾಯಕ್ವಾಡ್ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ಬುಧವಾರ ಪುರಂದರದಾಸ ಅಧ್ಯಯನ ಪೀಠ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಾಸ ಸಾಹಿತ್ಯ ವಿಶೇಷ ಉಪನ್ಯಾಸ ಮತ್ತು ಹಳೆಯ ಹೊನ್ನು 100ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಹರಿದಾಸರು-ಮರಾಠಿ ಸಂತರು ವಿಷಯದ ಕುರಿತು ಮಾತನಾಡಿದ ಅವರು, ಒಂಬತ್ತನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಆಡು ಭಾಷೆಯಾಗಿತ್ತು. ಮುಂದೆ 13ನೇ ಶತಮಾನದಲ್ಲಿ ಮಹಾನುಭಾವ ಪಂಥವನ್ನು ಶ್ರೀ ಚಕ್ರದರ ಸ್ವಾಮಿಯವರು ಸ್ಥಾಪಿಸುವ ಮೂಲಕ ಮರಾಠಿ ಭಾಷೆಗೆ ಹೊಸ ಕಾಯಕಲ್ಪ ನೀಡಿದರು. ಶ್ರೀ ವಿಠಲನು ಜಾನಪದ ನಾಯಕನಾಗಿದ್ದ ಕಾಲಾನಂತರ ಮರಾಠಿಗರ ಭಕ್ತಿ ಮತ್ತು ಸ್ವಾಭಿಮಾನದ ಸಂಕೇತವಾಗಿ ನೋಡುತ್ತಾರೆ ಎಂದರು.ದಾಸ ಪರಂಪರೆ ಹುಟ್ಟುಹಾಕಿದ ಕೀರ್ತಿ ಪುರಂದರದಾಸರಿಗೆ ಸಲ್ಲುತ್ತದೆ. ದಾಸ ಮತ್ತು ಸಂತರು ಕನ್ನಡ ಮತ್ತು ಮರಾಠಿ ಅಸ್ಮಿತೆಯನ್ನು ತಂದು ಕೊಟ್ಟವರು. ನಾಡು ನುಡಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಇವರು ನೀಡಿದ ಕೊಡುಗೆ ಅಪಾರವಾಗಿದ್ದು, ಭಾರತದಲ್ಲಿ ಧಾರ್ಮಿಕ ಅಸ್ಥಿರತೆ ಉಂಟಾದಾಗ ದಾಸರು, ಸಂತರು ಸೇರಿ ಸಮಾಜೋ ಧಾರ್ಮಿಕ ಚಳವಳಿಗಳನ್ನು ನಡೆಸಿದ್ದಾರೆ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹರಿದಾಸರಿಗೆ ಮತ್ತು ಕನ್ನಡ ವಿಶ್ವವಿದ್ಯಾಲಯಕ್ಕೆ ಹತ್ತಿರದ ಸಂಬಂಧವಿದ್ದು, ದಾಸರ ಮತ್ತು ಶರಣರ ದಾರಿ ಬೇರೆ ಆದರೂ ಗುರಿ ಮೋಕ್ಷ ಸಂಪಾದಿಸುವುದೇ ಆಗಿತ್ತು. ಧರ್ಮ ಪರಂಪರೆಯಲ್ಲಿ ಏರಿಳಿತವಾದರೂ ಐಕ್ಯತೆಯನ್ನು ಸಾಧಿಸುವಲ್ಲಿ ಭಾರತ ಸದಾ ಮುಂದಿದೆ ಎಂದರು.ಈ ಸಂದರ್ಭದಲ್ಲಿ ಅಗಲಿದ ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆಯವರಿಗೆ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ. ರವೀಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಂದರದಾಸ ಅಧ್ಯಯನ ಪೀಠದ ಸಂಚಾಲಕ ಡಾ.ಎಸ್.ಆರ್. ಚನ್ನವೀರಪ್ಪ, ವಿವಿಯ ಪ್ರಾಧ್ಯಾಪಕರಾದ ಡಾ. ವೀರೇಶ್ ಬಡಿಗೇರ್, ಡಾ. ಎಫ್.ಟಿ. ಹಳ್ಳಿಕೇರಿ ಮತ್ತಿತರರಿದ್ದರು. ಹಳೆಯ ಹೊನ್ನು ಕಾರ್ಯಕ್ರಮದ ಸಂಚಾಲಕ ಕಮ್ಮಾರ ಸುಮ, ಬಿ. ಸತೀಶ್‌ಗೌಡ ನಿರ್ವಹಿಸಿದರು. ವಿವಿಧ ನಿಕಾಯದ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.