ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವರ್ಷ ವಾಡಿಕೆ ಮಳೆಗಿಂತ ತುಸು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರೂ ಸಹ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಜಿಲ್ಲೆಯ ಕೆಲವೆಡೆ ಸಮಸ್ಯೆ ಎದುರಾಗಲಿದೆ. ಅಂತಹ ಗ್ರಾಮಗಳು ಮತ್ತು ವಾರ್ಡ್ ಗಳನ್ನು ಗುರ್ತಿಸಿ ಮುನ್ನೆಚ್ಚರಿಗೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಪತ್ತು ನಿರ್ವಹಣಾ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ 736 ಮಿ.ಮೀ ವಾಡಿಕೆ ಮಳೆಗಿಂತ 755.3 ಮಿ.ಮೀ ಮಳೆ ಪ್ರಮಾಣ ತುಸು ಹೆಚ್ಚಾಗಿದ್ದರೂ ಕೂಡ ಬೇಸಿಗೆಯಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದರು.
ಅಗತ್ಯ ಕ್ರಮ ಕೈಗೊಳ್ಳಬೇಕುನೀರಿನ ಕೊರತೆ ಇರುವ ಕಡೆ ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ಅಧಿಕಾರಿಗಳು ಈಗಿನಿಂದಲೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲೆಯ 12 ಗ್ರಾಮ ಪಂಚಾಯ್ತಿಗಳ 14 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶಗಳ 26 ವಾರ್ಡ್ ಗಳಲ್ಲಿ ಈಗಾಗಲೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 63 ಗ್ರಾಮ ಪಂಚಾಯ್ತಿಗಳ 154 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದ 27 ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದರು.
ಅಂತಹ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅವಕಾಶ ಕಲ್ಪಿಸಿಕೊಂಡು ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಅಥವಾ ಖಾಸಗಿ ಕೊಳವೆ ಬಾವಿ ಮಾಲಿಕರ ಸಹಕಾರ ಪಡೆದು ನೀರು ಪೂರೈಸುವ ವ್ಯವಸ್ಥೆ ಆಗಬೇಕು. ಈಗಾಗಲೇ ನೀರು ಪೂರೈಸುತ್ತಿರುವವರಿಗೆ ನಿಯಮಿತವಾಗಿ ಹಣ ಸಂದಾಯವಾಗುವಂತೆ ನಿಗಾ ವಹಿಸಲು ಸೂಚಿಸಿದರು.ನೀರಿನ ಪರೀಕ್ಷೆ ಮಾಡಿಸಿಗ್ರಾಮಗಳಿಗೆ ಮತ್ತು ನಗರದ ವಾರ್ಡ್ ಗಳಿಗೆ ನೀರು ಪೂರೈಸುವ ಜಲಮೂಲಗಳಲ್ಲಿ, ಸಂಗ್ರಹಣಾ ಸ್ಥಳ, ಕೇಂದ್ರಗಳಲ್ಲಿ ಹಾಗೂ ನೀರಿನ ತೊಟ್ಟಿಗಳಲ್ಲಿನ ನೀರನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಬೇಕು. ನೀರಿನ ಪೈಪುಗಳು ಹಾನಿಯಾಗಿ ದುರಸ್ತಿ ಅವಶ್ಯಕತೆ ಇದ್ದರೆ ಕೂಡಲೆ ದುರಸ್ತಿ ಆಗಬೇಕು. ಸ್ವಚ್ಚತೆಗೆ ಆದ್ಯತೆ ನೀಡಿ, ಜನರ ಆರೊಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿ, ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶ ಪಡಿಸಬೇಕು. ಡೆಂಗ್ಯೂ ಪ್ರಕರಣಗಳನ್ನು ಆರಂಭಿಕ ಹಂತದಲ್ಲೆ ಹತೋಟಿಗೆ ತರಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಾಧವಿ, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ ಗಳು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ನಗರ ಆಡಳಿತ ಸಂಸ್ಥೆಗಳ ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತಿ ಪಿಡಿಓಗಳು ಇದ್ದರು.