ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

KannadaprabhaNewsNetwork | Published : Aug 17, 2024 12:52 AM

ಸಾರಾಂಶ

ಶುಕ್ರವಾರ ಜಿಪಂ ಸಭಾಂಗಣದಲ್ಲಿ ಪ್ರಕೃತಿ ವಿಕೋಪದಲ್ಲಿ ಕೈಗೊಳ್ಳಬೇಕಾದ ಅಗತ್ಯ, ಸಾಮರ್ಥ್ಯ ಬಲವರ್ಧನೆ ಹಾಗೂ ದುರಂತದ ಸಂದರ್ಭದಲ್ಲಿ ಮಾನಸಿಕ ಆರೈಕೆ ಕುರಿತಾದ ತರಬೇತಿ ಕಾರ್ಯಾಗಾರ ನಡೆಯಿತು.

ಕಾರವಾರ: ಭೂಕುಸಿತಗಳು ಮತ್ತು ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಅನುಭವದ ಆಧಾರದ ಮೂಲಕ ತಯಾರಿಸಿದ ಕಾರ್ಯಸಾಧ್ಯ ಕ್ರಿಯಾ ಯೋಜನೆಗಳಿಂದ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.

ಶುಕ್ರವಾರ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ, ಪ್ರಕೃತಿ ವಿಕೋಪದಲ್ಲಿ ಕೈಗೊಳ್ಳಬೇಕಾದ ಅಗತ್ಯ, ಸಾಮರ್ಥ್ಯ ಬಲವರ್ಧನೆ ಹಾಗೂ ದುರಂತದ ಸಂದರ್ಭದಲ್ಲಿ ಮಾನಸಿಕ ಆರೈಕೆ ಕುರಿತಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಆಗಸ್ಟ್ ಮಧ್ಯದಿಂದ ಸೆಪ್ಟೆಂಬರ್ ಮಧ್ಯದ ವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ಪೂರ್ವ ಸನ್ನದ್ಧತೆ ಕೈಗೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.

ಮುಂದೆ ಸಂಭವಿಸಬಹುದಾದ ವಿಕೋಪಗಳ ಕುರಿತಂತೆ ಮುನೆಚ್ಚರಿಕೆ ವಹಿಸಿದ್ದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಾಗಲಿದೆ. ಹೀಗಾಗಿ, ಎಲ್ಲ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ಅಗತ್ಯ ಸಹಕಾರ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಜಿ.ಐ.ಎಸ್. ವರದಿಯಂತೆ 439 ಅಪಾಯಕಾರಿ ಭೂಕುಸಿತ ಸ್ಥಳಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಪ್ರವಾಹದ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ನೋಡಲ್ ಅಧಿಕಾರಿಗಳಗೆ ಇದರ ಸಂಪೂರ್ಣ ಮಾಹಿತಿ ಇರುವುದರಂದ ತುರ್ತು ಸಂದರ್ಭಗಳಲ್ಲಿ ಕಾರ್ಯ ಸಾಧ್ಯವಾದ ಕ್ರಿಯಾ ಯೋಜನೆಗಳನ್ನು ತಯಾರಿ ಮಾಡಿಕೊಂಡಲ್ಲಿ ಯಾವ ಸಮಯದಲ್ಲಿ ಯಾರನ್ನು ಸಂಪರ್ಕಿಸಬೇಕು, ಬದಲಿ ಮಾರ್ಗಗಳ ವ್ಯವಸ್ಥೆ ಕುರಿತು ಕಸ್ಟರ್ ಮಟ್ಟದಲ್ಲಿ ತರಬೇತಿಯನ್ನು ನಾಳೆಯಿಂದ ನೀಡಲಾಗುತ್ತದೆ. ಎಂದರು.

ಪ್ರಕೃತಿ ವಿಕೋಪದ ನಂತರ ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು, ಆರೋಗ್ಯ ಶಿಕ್ಷಣದ ಜೊತೆ ಮಾನಸಿಕ ಆರೈಕೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ, ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಮನೆಯ ವಾತಾವರಣ ನಿರ್ಮಾಣ ಮಾಡುವ ಮೂಲಕ ಜನರ ಜೊತೆ ನಾವೆಲ್ಲರೂ ಇದ್ದೇವೆ ಎಂಬ ಭಾವನೆ ಮೂಡಿಸಬೇಕು. ಇದರ ಜೊತೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಂತ್ರಸ್ತರನ್ನು ನಿಭಾಯಿಸುವ ಬಗ್ಗೆ ಮಾನಸಿಕ ಆರೈಕೆ ತರಬೇತಿ ನೀಡಲಾಗುವುದು ಎಂದರು.

ಕೆಎಸ್‌ಎನ್‌ಡಿಎಂಸಿಯ ಮಾಜಿ ನಿರ್ದೇಶಕ ಡಾ. ಜಿ. ಶ್ರೀನಿವಾಸ್ ರೆಡ್ಡಿ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣೆಯ ಯೋಜನೆ ತಯಾರಿಕೆ, ಪುನರ್ ಪರಿಶೀಲನೆಯಲ್ಲಿ ಜಿಲ್ಲಾಡಳಿತದ ಜವಾಬ್ದಾರಿಗಳು ಹಾಗೂ ಜಿಲ್ಲಾಮಟ್ಟದ ವಿಕೋಪ ನಿರ್ವಹಣಾ ಯೋಜನೆಯ ವಿವಿಧ ಹಂತಗಳ ಹಾಗೂ ಯುಎನ್‌ಐಸಿಇಎಫ್ ಹೈದರಾಬಾದ್ ಫೀಲ್ಡ್ ಆಫೀಸ್‌ನ ಡಾ. ಮಟ್ಪಾಡಿ ಪ್ರಭಾತ್ ಕಲ್ಕೂರ, ವ್ಯಕ್ತಿಗಳಿಗೆ ವಿಪತ್ತು ಸಿದ್ಧತೆ ಮತ್ತು ವಿಕೋಪ ನಿರ್ವಹಣೆಯ ವಿವಿಧ ಹಂತಗಳಲ್ಲಿ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ಸಮುದಾಯ, ಸಂಘ-ಸಂಸ್ಥೆಗಳ ಪಾತ್ರ ಮತ್ತು ವೆಂಕಟೇಶ್ ಅಯ್ಯರ್ ಮಾನಸಿಕ ಪ್ರಥಮ ಚಿಕಿತ್ಸೆ ಮತ್ತು ಮಾನಸಿಕ ಆರೈಕೆ ಕುರಿತು ತರಬೇತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಕನಿಷ್ಕ ಜಿಪಂ ಉಪ ಕಾರ್ಯದರ್ಶಿ (ಆಡಳಿತ) ನಾಗೇಶ ರಾಯ್ಕರ್, ಉಪ ಕಾರ್ಯದರ್ಶಿ(ಅಭಿವೃದ್ಧಿ) ಪ್ರಕಾಶ ಹಾಲಮ್ಮನವರ್, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಇದ್ದರು.

Share this article