ಕನ್ನಡಪ್ರಭ ವಾರ್ತೆ ತುಮಕೂರು
ಗುಬ್ಬಿ ತಾಲೂಕು ಹಂದಿಜೋಗಿ ಜನಾಂಗದವರು ವಾಸಿಸುವಂತಹ ಸ್ಥಳದಲ್ಲಿನ ಗುಡಿಸಲುಗಳಿಗೆ ಮಳೆ ನೀರು ನುಗ್ಗಿದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕ್ರಮಗಳ ಕೈಗೊಂಡು ವರದಿ ನೀಡಲು ಸೂಚಿಸಿದರು, ಪ್ರವಾಹ ಉಂಟಾಗುವ ಸ್ಥಳಗಳ ಸಂತ್ರಸ್ಥರಿಗೆ ಸೂಕ್ತ ರಕ್ಷಣೆಗೆ ಗಂಜಿ ಕೇಂದ್ರಗಳನ್ನು ತೆರೆಬೇಕು ಎಂದು ತಿಳಿಸಿದರು. ಜಿಲ್ಲಾ ಯೋಜನಾ ನಿರ್ದೇಶಕ ಅಂಜಿನಪ್ಪಗೆ ಮಳೆಯಿಂದ ಮನೆಗಳಿಗೆ ಆಗಿರುವ ಹಾನಿಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದರು.
ವಿದ್ಯುತ್ ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳಿ: ಮಧುಗಿರಿ ತಾಲೂಕಿನಲ್ಲಿ 19 ವಿದ್ಯುತ್ ಕಂಬಗಳು, ಶಿರಾದಲ್ಲಿ 2, ಕೊರಟಗೆರೆಯಲ್ಲಿ 2 ಸೇರಿದಂತೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಉರುಳಿದ ಬಿದ್ದ ವಿದ್ಯುತ್ ಕಂಬಗಳ ಬಗ್ಗೆ ಮಾಹಿತಿ ಪಡೆದರು. ಮಳೆಯಿಂದಾಗಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳಿದ್ದರೆ ಬೆಸ್ಕಾಂ ಅಧಿಕಾರಿಗಳು ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಪರಿಶೀಲಿಸಿ ಕೂಡಲೇ ತೆರವುಗೊಳಿಸಬೇಕು. ವಿದ್ಯುತ್ ಅವಘಡಗಳು ಸಂಭವಿಸದಂತೆ ಕ್ರಮವಹಿಸಬೇಕು. ವಿದ್ಯುತ್ ತಂತಿಗಳಿಗೆ ಆವರಿಸಿಕೊಂಡಿರುವ ಅಪಾಯಕಾರಿ ಮರಗಳ ರೆಂಬೆಕೊಂಬೆಗಳನ್ನು ತೆರವುಗೊಳಿಸಿ, ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಬೇಕು. ವಿದ್ಯುತ್ ತಂತಿಯಿಂದ ಯಾವುದೇ ಜೀವ ಹಾನಿಯಾಗದಂತೆ ಎಚ್ಚರವಹಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮವಹಿಸಿ: ಶಿರಾ ನಗರದ ವಾರ್ಡ್ ಸಂಖ್ಯೆ 21 ಮತ್ತು 25, ತಿಪಟೂರು ನಗರದ ಬಸ್ ನಿಲ್ದಾಣ, ರೈಲ್ವೆ ಅಂಡರ್ ಪಾಸ್, ತುರುವೆಕೆರೆ ನಗರದ ವಾರ್ಡ ಸಂಖ್ಯೆ 6 ಮೊದಲಾದ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಮಳೆಯಿಂದ ಸಮಸ್ಯೆ ಉಂಟಾದ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿರುವುದರ ಪರಿಶೀಲಿಸಿ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ರಾಷ್ಟ್ರೀಯ ಹಾಗೂ ರಾಜ್ಯ, ಜಿಲ್ಲಾ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಟಾಸ್ಕ್ ಪೋರ್ಸ್ ಸಭೆ: ಬರನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಪ್ರತಿ ತಾಲೂಕು ಹಂತದಲ್ಲಿ ತಹಸೀಲ್ದಾರ್‌ರು ಸಭೆಗಳನ್ನು ನಡೆಸಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡುವಂತೆ ತಿಳಿಸಿದರು.ತ್ಯಾಜ್ಯ ತೆರವುಗೊಳಿಸಿ: ಜಿಲ್ಲೆಯಲ್ಲಿರುವ ಕೆರೆಗಳ ಆವರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸೋರಿಕೆ ಇದ್ದಲ್ಲಿ ಅದನ್ನು ತಡೆಗಟ್ಟಲು ಸಣ್ಣ ನೀರಾವರಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕೆರೆಗಳು, ಚರಂಡಿ, ಕಾಲುವೆಗಳಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿದು ಹೋಗಲು ಕ್ರಮವಹಿಸಬೇಕು. ಯಾವುದೇ ದುರಸ್ಥಿ ಇದ್ದಲ್ಲಿ ಅವುಗಳನ್ನು ಸಕಾಲದಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದರು.ಜೀವ, ಆಸ್ತಿ ಹಾನಿಯಾಗದಂತೆ ಕ್ರಮವಹಿಸಿ: ಪ್ರಾಕೃತಿಕ ವಿಕೋಪ ಸಂಭವಿಸಿದ ಘಟನಾ ಸ್ಥಳಕ್ಕೆ ಕೂಡಲೇ ತಾಲೂಕು ಮಟ್ಟದ ಅಧಿಕಾರಿಗಳು ತೆರಳಿ, ಸಾರ್ವಜನಿಕ ಜೀವ, ಆಸ್ತಿ ಹಾನಿಯಾಗದಂತೆ ಅಗತ್ಯ ಕ್ರಮ ವಹಿಸಬೇಕು. ರಸ್ತೆ, ಸೇತುವೆಗಳು ಹಾನಿಯಾದಲ್ಲಿ, ಕೂಡಲೇ ರಸ್ತೆ ಸಂಪರ್ಕ ಪುನರ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸಂಬಂಧಿಸಿದ ಇಲಾಖಾ ನೌಕರರು ಸನ್ನದ್ದರಾಗಿದ್ದು, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಕಂದಾಯ, ಅರಣ್ಯ, ಬೆಸ್ಕಾಂ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ಮನೆಗಳಿಗೆ ಹಾನಿಯಾದರೆ ಪರಿಹಾರ ವಿತರಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಮಳೆಯಿಂದಾಗಿ ಸೋರುತ್ತಿದ್ದರೆ ದುರಸ್ಥಿಗೊಳಿಸಬೇಕು. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಅಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವರಿಕೆ ಮಾಡಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡಬೇಕು. ಮಳೆಯಿಂದ ಮನೆಗಳಿಗೆ ಹಾನಿಯಾದಲ್ಲಿ ಕೂಡಲೇ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ವರದಿ ನೀಡಿ ಸಂತ್ರಸ್ತರಿಗೆ ಮಾರ್ಗಸೂಚಿಯ ಅನುಸಾರ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮವಹಿಸಬೇಕು.