ಕುಮಟಾ: ತಾಲೂಕಾಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಮೂರೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಶಾಸಕ ದಿನಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ ನಡೆಯಿತು.
ಮಳೆಯ ಕೊರತೆಯಿಂದ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯನ್ನು ವ್ಯಾಪಕವಾಗಿ ಎದುರಿಸಲು ಸನ್ನದ್ಧರಾಗಿರಬೇಕು. ಮುಖ್ಯವಾಗಿ ನೀರಿನ ಮೂಲದ ಸಮಸ್ಯೆ ಇರುವ ಸರ್ಕಾರಿ ಶಾಲೆಗಳಿಗೆ ಕೂಡಲೇ ಬಾವಿ ಕೊರೆಯಲು ವ್ಯವಸ್ಥೆ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮುಸಗುಪ್ಪಾ ಸರ್ಕಾರಿ ಶಾಲೆಗೆ ಶಾಲಾ ವನ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದರು. ಸ್ಥಳೀಯರೊಬ್ಬರ ಜಾಗದ ತಕರಾರಿನಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲಾ ವನ ನಿರ್ಮಾಣದ ಯೋಜನೆಗೆ ಅಡ್ಡಿಯಾಗಿದೆ ಎಂದು ವಿವರಿಸಿದರು. ಪ್ರತಿಕ್ರಿಯಿಸಿದ ಶಾಸಕರು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಯಾರೂ ತಕರಾರು ಮಾಡಬಾರದು. ಅಧಿಕಾರಿಗಳು ಶಾಲಾ ವನ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಮೂರೂರಿನಿಂದ ಕರ್ಕಿಮಕ್ಕಿಗೆ ಗದ್ದೆಯ ಮೂಲಕ ಸಾಗುವ ಮಾರ್ಗದಲ್ಲಿರುವ ಹಳೆಯ ವಿದ್ಯುತ್ ಕಂಬಗಳನ್ನು ಬದಲಿಸಿ ಹೊಸದಾಗಿ ಅಳವಡಿಸುವಂತೆ ಕೋರಲಾಯಿತು. ಉಳಿದಂತೆ ರಸ್ತೆ, ನೀರು, ಕಾಲುಸಂಕ ಸಹಿತ ಮೂಲಸೌಕರ್ಯಗಳ ಕುರಿತು ಸಾರ್ವಜನಿಕರು ಬೇಡಿಕೆ ಮಂಡಿಸಿದರು.
ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಸ್ವಾಗತಿಸಿದರು. ತಾಪಂ ಇಒ ರಾಜೇಂದ್ರ ಭಟ್ ಉಪಸ್ಥಿತರಿದ್ದರು. ಸಭೆಯಲ್ಲಿ ವೃದ್ಧಾಪ್ಯ ವೇತನ ಇನ್ನಿತರ ಪಿಂಚಣಿಗಳು, ಸರ್ಕಾರದ ವಿವಿಧ ಜನಪರ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಮಂಜೂರು ನೀಡಿ ವಿತರಿಸಲಾಯಿತು. ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಜನರ ಸಮಸ್ಯೆಗಳಿಗೆ ಶಾಸಕರು ಹಾಗೂ ಅಧಿಕಾರಿಗಳು ಸ್ಪಂದಿಸಿದರು. ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಸಾರ್ವಜನಿಕರು ಇದ್ದರು.