ಕುಷ್ಟಗಿ: ವೀರಶೈವ ಸಮಾಜದ ಯುವಕರು ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಬೇಕು ಎಂದು ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
ಮಹಾಸಭಾದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಬಸವಣ್ಣನವರು ಸಾರಿದ ಸಮಾನತೆಯ ತತ್ವದಂತೆ ಸಮ ಸಮಾಜ ನಿರ್ಮಾಣ ಮಾಡಬೇಕು. ಒಳಪಂಗಡಗಳ ಕಾರಣದಿಂದ ಹರಿದು ಹಂಚಿಹೋಗಿರುವ ಸಮಾಜ ಒಂದಾಗುವ ಕಾಲ ಬಂದಿದೆ. ತಾಯಂದಿರು ಮಕ್ಕಳಲ್ಲಿ ವೀರಶೈವ ಲಿಂಗಾಯತ ಧರ್ಮದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿ, ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಸುಭದ್ರ ಸಮಾಜ ನಿರ್ಮಿಸಲು ಸಾಧ್ಯ. ಶಿಕ್ಷಣವೇ ಆರ್ಥಿಕ ಸುಧಾರಣೆಯ ಮೂಲಮಂತ್ರವಾಗಿದೆ. ವೀರಶೈವ ಸಮಾಜದ ಒಳಪಂಗಡಗಳು ಒಗ್ಗಟ್ಟಾದರೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬಹುದು. ಸಂಘಟನೆಯ ಬಲದಿಂದ ಸಮಾಜಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.ಮಾಜಿ ಶಾಸಕ ಪರಣ್ಣ ಮನವಳ್ಳಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಜನಸಂಖ್ಯೆಗೆ ಹೋಲಿಸಿದರೆ ಸದಸ್ಯತ್ವ ಪ್ರಮಾಣ ಕಡಿಮೆಯಿದೆ. ಸಮಾಜದ ಜನಸಂಖ್ಯೆ ಸುಮಾರು ಒಂದೂವರೆ ಕೋಟಿ ಇದ್ದರೂ ಸಮೀಕ್ಷೆಯಲ್ಲಿ 65 ಲಕ್ಷ ಎಂದು ವರದಿಯಾಗಿರುವುದು ಗಮನಿಸಬೇಕಾದ ಸಂಗತಿ. ರಾಜ್ಯಕ್ಕೆ ಹಲವು ಮುಖ್ಯಮಂತ್ರಿಗಳನ್ನು ನೀಡಿದ ಸಮಾಜ ಇಂದು ಒಗ್ಗಟ್ಟಿನಿಂದ ಸಂಘಟನಾತ್ಮಕವಾಗಿ ಬೆಳೆಯಬೇಕಿದೆ ಎಂದರು.
ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಅಶ್ವಿನಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ ನೆರವೇರಿತು. ಸದಾಶಿವ ಪಾಟೀಲ ತಂಡ ರೈತಗೀತೆ ಪ್ರಸ್ತುತಪಡಿಸಿತು. ಶಿಕ್ಷಕ ಮಲ್ಲಪ್ಪ ಕುದುರಿ ಕಾರ್ಯಕ್ರಮ ನಿರೂಪಿಸಿದರು. 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.