ಉತ್ತರಕನ್ನಡ ಜಿಲ್ಲೆಯಾದ್ಯಂತ ಸುಗ್ಗಿಯ ಬೆಡಗು, ಬೇಡರ ವೇಷದ ಬೆರಗು

KannadaprabhaNewsNetwork | Published : Mar 13, 2025 12:47 AM

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕತಿಕ ವೈಭವದ ಪ್ರತೀಕವಾದ ಸುಗ್ಗಿ ಕುಣಿತ ಈಗ ಜಿಲ್ಲೆಯಾದ್ಯಂತ ಕಳೆಗಟ್ಟಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕತಿಕ ವೈಭವದ ಪ್ರತೀಕವಾದ ಸುಗ್ಗಿ ಕುಣಿತ ಈಗ ಜಿಲ್ಲೆಯಾದ್ಯಂತ ಕಳೆಗಟ್ಟಿದೆ. ಬಣ್ಣ ಬಣ್ಣದ ವೇಷಭೂಷಣ ತೊಟ್ಟು ಗುಮ್ಮಟೆ, ಜಾಗಟೆಯ ಅಬ್ಬರದೊಂದಿಗೆ ತಾಳಕ್ಕೆ ತಕ್ಕಂತೆ ಹಾಡಿಗನುಗುಣವಾಗಿ ನರ್ತಿಸುತ್ತ ಹೊಸ ಲೋಕವೇ ಸೃಷ್ಟಿಸುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರು, ನಾಮಧಾರಿಗಳು, ಕೋಮಾರಪಂತರು, ಪರಿಶಿಷ್ಟ ಜಾತಿ, ಜನಾಂಗದವರು, ಗ್ರಾಮ ಒಕ್ಕಲಿಗರು, ಅಗೇರರು ಹೀಗೆ ವಿವಿಧ ಜಾತಿ ಜನಾಂಗದವರು ತಮ್ಮ ಎಲ್ಲ ಬೇಗುದಿಯನ್ನೂ ಬದಿಗೊತ್ತಿ ಮನೆ ಮನೆಗೆ ತಿರುಗುತ್ತ ಸುಗ್ಗಿ ಹಬ್ಬದ ಸಂಭ್ರಮವನ್ನು ಉಣಬಡಿಸುತ್ತಿದ್ದಾರೆ.

ಕೆಲವು ಸುಗ್ಗಿಗಳಿಗೆ ತುರಾಯಿಯ ಅಲಂಕಾರ, ಕೆಲವು ಸುಗ್ಗಿಗಳಿಗೆ ಯಕ್ಷಗಾನದ ವೇಷ, ಮತ್ತೆ ಕೆಲವು ಸುಗ್ಗಿಗಳಿಗೆ ಮುಂಡಾಸಿನ ಸೊಗಸು ಕಳೆಗಟ್ಟುತ್ತಿದೆ. ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರ ಮತ್ತಿತರ ಕಡೆಗಳಲ್ಲಿ ಸುಗ್ಗಿಯ ತಂಡಗಳು ಸಂಚರಿಸಿ ಪ್ರದರ್ಶನ ನೀಡುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಸಂಪ್ರದಾಯ, ಸಂಸ್ಕೃತಿ ಮೇಳೈಸಿರುವ ಸುಗ್ಗಿಯ ವೈಭವ ಈಗ ಎಲ್ಲೆಲ್ಲೂ ಕಂಡುಬರುತ್ತಿದೆ. ಅದೆಷ್ಟೋ ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದಾರೆ.

ಬೇಡರ ವೇಷದ ರೋಚಕತೆ:

ಉಳಿದೆಡೆ ಸುಗ್ಗಿಯ ಹಿಗ್ಗು ಆದರೆ ಶಿರಸಿಯಲ್ಲಿ ರಾತ್ರಿಯಾಗುತ್ತಿದ್ದಂತೆ ಬೇಡರ ವೇಷದ ರೋಚಕ ಲೋಕ ತಲೆಎತ್ತುತ್ತಿದೆ. ನವಿಲುಗರಿಯಿಂದ ಅಲಂಕೃತವಾದ ವಿಶೇಷ ಮುಖವರ್ಣಿಕೆಯಿಂದ ಕಂಗೊಳಿಸುವ ವೇಷಧಾರಿ ನರ್ತಿಸುತ್ತ, ಅಬ್ಬರಿಸುತ್ತಿದ್ದರೆ ಸಾವಿರಾರು ಜನರು ಇದಕ್ಕೆ ಸಾಕ್ಷಿಯಾಗುತ್ತಾರೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಬೇಡರ ವೇಷ ನೋಡಲೆಂದು ನಾಡಿನ ವಿವಿಧೆಡೆಯಿಂದ ಜನತೆ ಆಗಮಿಸುತ್ತಾರೆ. ಮುಸ್ಸಂಜೆಯಿಂದ ಮಧ್ಯರಾತ್ರಿಯ ತನಕ ಬೇಡರ ವೇಷದ ಸೊಗಸು ಈಗ ನೋಡಲು ಸಾಧ್ಯ.

ಹೋಳಿಯ ಬಣ್ಣದೋಕುಳಿ:

ಸುಗ್ಗಿ ಕುಣಿತ, ಬೇಡರವೇಷ ಹೋಳಿಯೊಂದಿಗೆ ಸಮಾಪ್ತವಾಗುತ್ತದೆ. ಮಾ. 14 ರಂದು ನಡೆಯುವ ಬಣ್ಣದೋಕುಳಿ ಬಣ್ಣದ ಲೋಕ ತೆರೆದಿಡುತ್ತದೆ. ಮನೆಮಂದಿ, ಆಪ್ತರು, ಸಂಬಂಧಿಕರು, ನೆರೆಹೊರೆಯವರೆಲ್ಲ ಸೇರಿ ಪರಸ್ಪರ ಬಣ್ಣ ಎರಚಿ ಶುಭಾಶಯ ವಿನಿಯಮ ಮಾಡಿಕೊಳ್ಳುವ ಹೋಳಿಗೆ ಈಗ ಮುನ್ನುಡಿ ಬರೆಯಲಾಗುತ್ತಿದೆ. ಮಾರುಕಟ್ಟೆಗಳಲ್ಲಿ ಬಗೆ ಬಗೆಯ ಮುಖವಾಡಗಳು, ಬಣ್ಣ ಎರಚುವ ಪರಿಕರಗಳು ಭರ್ಜರಿ ಮಾರಾಟವಾಗುತ್ತಿದೆ.

ಸುಗ್ಗಿ ಕುಣಿತ, ಬೇಡರ ವೇಷ, ಹೋಳಿಯ ಬಣ್ಣದಾಟ ಇವುಗಳಿಂದ ಜಿಲ್ಲೆಯಾದ್ಯಂತ ಹೊಸ ಲೋಕ ಸೃಷ್ಟಿಯಾಗಿದೆ. ಇವುಗಳನ್ನು ನೋಡುವುದೆ ಕಣ್ಣಿಗೊಂದು ಹಬ್ಬವಾಗಿದೆ ಎನ್ನುತ್ತಾರೆ ಕುಮಟಾ ವಿನಾಯಕ ಭಂಡಾರಿ.

ಸುಗ್ಗಿ ಕುಣಿಯುತ್ತ ಊರೂರು ತಿರುಗುತ್ತ ಪ್ರದರ್ಶನ ನೀಡುತ್ತಿರುವುದು ಹೊಸ ಅನುಭವವಾಗಿದೆ. ನಮ್ಮ ಹಿರಿಯರು ನಡೆಸಿಕೊಂಡು ಸಂಪ್ರದಾಯ ಮುಂದುವರಿಸಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾರೆ ಸುಗ್ಗಿ ಕಲಾವಿದ ವಿಕ್ರಮ ಗೌಡ.

Share this article