ಕನ್ನಡಪ್ರಭ ವಾರ್ತೆ ತಾಳಿಕೋಟೆ: ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಪೊಲೀಸರನ್ನು ಬಿಟ್ಟು ಲಾಠಿ ಚಾರ್ಜ್ ಮಾಡಿಸಿ ಗೂಂಡಾ ಪ್ರವೃತ್ತಿಯನ್ನು ಕಾಂಗ್ರೆಸ್ ಸರ್ಕಾರ ಮೆರೆದಿದೆ. ಇದಕ್ಕೆ ತಕ್ಕ ಉತ್ತರ ಸಮಾಜದ ಬಂಧುಗಳು ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಹೇಳಿದರು.
ಪಟ್ಟಣದಲ್ಲಿ ತಾಲೂಕಾ ಪಂಚಮಸಾಲಿ ಸಮಾಜ ಹಾಗೂ ನಗರ ಘಟಕದಿಂದ ಪಂಚಮಸಾಲಿ ಸಮಾಜದವರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ಮಾತನಾಡಿದರು. ಶಾಂತಿಪ್ರಿಯ ಪಂಚಮಸಾಲಿ ಸಮಾಜದ ಶಾಂತಿಯುತ ಹೋರಾಟದ ವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದು ಮನವಿ ಸ್ವಿಕರಿಸಬೇಕಿತ್ತು. ಆದರೆ, ಖುರ್ಚಿಯ ಅಹಂಭಾವದಲ್ಲಿರುವ ಸಿದ್ದರಾಮಯ್ಯನವರು ನ್ಯಾಯಯುತ ಬೇಡಿಕೆ ಕೇಳಲು ಬಂದವರ ಮೇಲೆ ಲಾಠಿಚಾರ್ಜ್ ಮಾಡಿಸಿರುವದನ್ನು ಖಂಡಿಸುವುದಾಗಿ ಹೇಳಿದರು.ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ, ಯುವ ಮುಖಂಡರಾದ ಡಿ.ಕೆ.ಪಾಟೀಲ, ವೀರೇಶ ಬಾಗೇವಾಡಿ ಮಾತನಾಡಿ, ರಾಜ್ಯದಲ್ಲಿ ೭೦ ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಇದಕ್ಕೆ ಮೂಲ ಕಾರಣ ಬಡತನ. ಎಲ್ಲ ಸಮಾಜಗಳಂತೆ ನಾವು ಮೇಲೆ ಬರಬೇಕಾದರೆ ೨ಎ ಮಿಸಲಾತಿ ಅವಶ್ಯವಾಗಿದೆ. ಈ ಬೇಡಿಕೆ ಮಂಡಿಸಲು ಹೋದರೆ ಕಾಂಗ್ರೆಸ್ ಸರ್ಕಾರ ಲಾಠಿಚಾರ್ಜ್ ಮಾಡಿಸಿದೆ. ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದು ಎಚ್ಚರಿಸಿದರು.ವಿಠ್ಠಲ ಮಂದಿರದಿಂದ ಬೃಹತ್ ಪ್ರತಿಭಟನೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಂಟೆಕಾಲ ರಸ್ತೆ ತಡೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಂಜುಳಾ ತಾಯಿ ಅಮ್ಮನವರು, ಕಾಶಿನಾಥ ಮುರಾಳ, ಆರ್.ವೈ.ಜಾಲವಾದಿ, ಡಿ.ವ್ಹಿ.ಪಾಟೀಲ, ಪ್ರಕಾಶ ಸಾಸಾಬಾಳ, ಬಸು ಕಶೆಟ್ಟಿ, ಪ್ರಭು ಬಿಳೇಭಾವಿ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ, ನಾಗಪ್ಪ ಚಿನಗುಡಿ, ನಿಂಗು ಕುಂಟೋಜಿ, ಸಿದ್ದಲಿಂಗ ಸರೂರ, ಬಾಳಾಸಾಹೇಬಗೌಡ ಪಾಟೀಲ, ಮುತ್ತುಗೌಡ ಪಾಟೀಲ, ವಿರೇಶ ಬಾಗೇವಾಡಿ, ಅಪ್ಪು ಆನೇಸೂರ, ಮುತ್ತು ಕಶೆಟ್ಟಿ, ಗುರುಸಂಗ ಕಶೆಟ್ಟಿ, ಕಾಶೀನಾಥ ಪರಂಪೂರ, ಮಹಾಂತೇಶ ಮುರಾಳ, ವಿರೇಶ ಪಾಟೀಲ, ಮುತ್ತು ಮನಹಳ್ಳಿ, ಹೂವಪ್ಪಗೌಡ ಬಿರಾದಾರ, ರಾಹುತಪ್ಪ ವಾಲಿ, ಶಿವನಗೌಡ ಬಿರಾದಾರ, ಅಂಬ್ರೇಷಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಕಾಶೀನಾಥ ಅರಳಿಚಂಡಿ, ನೀಲಮ್ಮ ಪಾಟೀಲ, ನವೀನ ಗೋನಾಳ, ಪ್ರಭುಗೌಡ ಬಿರಾದಾರ ಮುಂತಾದವರು ಭಾಗವಹಿಸಿದ್ದರು.