ಗದಗ: ಜಿಲ್ಲೆಯ ಬಗರ್‌ಹುಕುಂ ರೈತರು ತಮ್ಮ ಹಕ್ಕು ಪತ್ರಕ್ಕೆ ಆರಂಭಿಸಿರುವ ಅಹೋರಾತ್ರಿ ಹೋರಾಟ ಸೋಮವಾರ 22ನೇ ದಿನಕ್ಕೆ ತಲುಪಿದ್ದು, ಅವಳಿ ನಗರದಾದ್ಯಂತ ಭಿಕ್ಷಾಟನೆ ಮಾಡುವ ಮೂಲಕ ಜನರಿಂದ ಭಿಕ್ಷೆ ಬೇಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿ ಸರ್ಕಲ್‌ನಿಂದ ಆರಂಭವಾಗಿ, ಮಾರ್ಕೆಟ್ ರಸ್ತೆ ಹಾದಿ ಹಿಡಿದು, ಜಿಲ್ಲಾಡಳಿತ ಕಚೇರಿಯವರೆಗೆ ತಟ್ಟೆ ಹಿಡಿದು ಭಿಕ್ಷಾಟನೆ ನಡೆಸಿ, ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು.ರೈತರು ಡೊಳ್ಳು ಬಾರಿಸುತ್ತಾ, ಕೈಯಲ್ಲಿ ತಟ್ಟೆ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದಾನಿಗಳಿಂದ ಹಣ, ಅಕ್ಕಿ, ತರಕಾರಿ ಮುಂತಾದ ವಸ್ತುಗಳನ್ನು ಬೇಡಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಭಿಕ್ಷೆಯಿಂದ ಸಂಗ್ರಹಿಸಿದ 3750 ನಗದು ಮೊತ್ತವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ, ನಮಗೆ ಹಕ್ಕುಪತ್ರ ನೀಡಿ ಎಂದು ಮನವಿ ಮಾಡಲು ಮುಂದಾದರು. ಆದರೆ ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾ ನಿರತ ರೈತರು, ಕಳೆದ 21 ದಿನಗಳಿಂದ ಅಹೋರಾತ್ರಿ ಧರಣಿ ಮುಂದುವರಿದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆಗೆ ಸ್ಪಂದಿಸದೇ ಇರುವುದು ಅತೀವ ಬೇಸರದ ಸಂಗತಿಯಾಗಿದೆ ಎಂದರು.ಪ್ರತಿಭಟನೆಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಚಿಂಚಲಿ, ಎನ್.ಟಿ. ಪೂಜಾರ, ನಾಮದೇವ, ಫಿರೋಜ್ ನದಾಫ, ಎಮ್. ಶಲವಡಿ ಸೇರಿದಂತೆ ನಾಗಾವಿ, ಬೆಳದಡಿ, ಹರ್ತಿ, ಶಿರಹಟ್ಟಿ, ಲಕ್ಷ್ಮೇಶ್ವರ, ಅಡವಿಸೋಮಾಪೂರ, ಗಜೇಂದ್ರಗಡ, ದಿಂಡೂರ, ಡೋಣಿ, ಮುರುಡಿ ಮುಂತಾದ ಗ್ರಾಮಗಳ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ಬಗರ್‌ಹುಕುಂ ಹಾಗೂ ಅರಣ್ಯ ಭೂಮಿಯನ್ನು ಅವಲಂಬಿಸಿ ಬದುಕುತ್ತಿರುವ ರೈತರು, ಜೊತೆಗೆ ನಾಗಾವಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕಾಗಿ ಭೂಮಿ ಕಳೆದುಕೊಂಡ ರೈತರು ಸರ್ಕಾರದಿಂದ ಹಕ್ಕುಪತ್ರ ಮತ್ತು ಪರಿಹಾರವನ್ನು ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆಯನ್ನು ಈಡೇರಿಸುವಂತೆ 2023ರ ಆಗಸ್ಟ್ 19 ರಿಂದ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಧರಣಿ ನಡೆದಾಗ, ಸಚಿವ ಎಚ್.ಕೆ. ಪಾಟೀಲ ಅವರು ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರೂ, ಇಂದಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವರು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ, ಮಾನವೀಯತೆಯಿಂದ ಧರಣಿ ಸ್ಥಳಕ್ಕೆ ಭೇಟಿ ನೀಡದೆ ಹೋದದ್ದು ರೈತರ ಆಕ್ರೋಶ ಹೆಚ್ಚಿಸಿದೆ.ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ರೈತ ವಿರೋಧಿ ಧೋರಣೆ ಖಂಡನೀಯ. ವಿವಿಧ ರೀತಿಯ ಶಾಂತಿಯುತ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ರೈತರೆಲ್ಲ ಸೇರಿ ಜಿಲ್ಲಾಡಳಿತದ ಎದುರು ಮಂಗಳವಾರ 12ಕ್ಕೆ ಬಾರಕೋಲು ಚಳವಳಿ ಮಾಡಲಾಗುವುದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.