ವಕೀಲಿಕೆ ಉದ್ಯೋಗ ಮಾತ್ರವಲ್ಲ, ಅದು ಸಂವಿಧಾನಿಕ ಹೊಣೆ: ನ್ಯಾ.ಟಿ.ಪಿ.ರಾಮಲಿಂಗೇಗೌಡ ಅಭಿಪ್ರಾಯ

KannadaprabhaNewsNetwork |  
Published : Dec 04, 2025, 01:05 AM IST
ಸಿಕೆಬಿ-2 ಜಿಲ್ಲಾವಕೀಲರ ಸಂಘದ ವತಿಯಿಂದ  ಏರ್ಪಡಿಸಲಾಗಿದ್ದ ವಕೀಲರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನ್ಯಾ.ಟಿ.ಪಿ.ರಾಮಲಿಂಗೇಗೌಡ  ಉಧ್ಘಾಟಿಸಿದರು | Kannada Prabha

ಸಾರಾಂಶ

ನ್ಯಾಯಕ್ಕಾಗಿ ಪರಿತಪಿಸುವ ಕಟ್ಟ ಕಡೆಯ ವ್ಯೆಕ್ತಿಗೆ ನ್ಯಾಯದಾನ ಒದಗಿಸುವುದು ವಕೀಲರ ಜವಾಬ್ದಾರಿಯೂ, ಕರ್ತವ್ಯವೂ ಆಗಿದೆ. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿ ಉಳಿಸುವ ಕೆಲಸವೂ ನಮ್ಮ ಮೇಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಕೀಲಿಕೆ ಒಂದು ಉದ್ಯೋಗ ಮಾತ್ರವಲ್ಲ, ಇದು ಸಾರ್ವಜನಿಕ ಕರ್ತವ್ಯ, ಸಂವಿಧಾನಿಕ ಹೊಣೆ ಮತ್ತು ನೈತಿಕ ಸೇವೆಯಾಗಿದೆ. ವಕೀಲಿಕೆ ವಾದ ಮಾಡುವ ಕಲೆಯಷ್ಟೇ ಅಲ್ಲ, ಅದು ಸಿದ್ಧತೆಯ ವಿಜ್ಞಾನ, ನ್ಯಾಯಕ್ಕಾಗಿ ಧೈರ್ಯದಿಂದ ನಿಲ್ಲುವ ಶಕ್ತಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಟಿ.ಪಿ.ರಾಮಲಿಂಗೇಗೌಡ ತಿಳಿಸಿದರು.

ನಗರದ ನ್ಯಾಯಾಲಯಗಳ ಆವರಣದ ವಕೀಲರ ಭವನದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ವಕೀಲರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ದೇಶದ ನವಶಿಲ್ಪದವರೆಗೆ, ವಕೀಲರು ಮಹತ್ವದ ಪರಿವರ್ತನಾ ಪಾತ್ರ ವಹಿಸಿದ್ದಾರೆ. ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್,ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್ ಮೊದಲಾದ ಮಹನೀಯರು ವಕೀಲಿಕೆಯನ್ನು ಕೇವಲ ವೃತ್ತಿಯಾಗಿರದೆ, ಸಮಾಜ ಪರಿವರ್ತನೆಯ ಶಕ್ತಿಯಾಗಿ ಬಳಸಿಕೊಂಡಿದ್ದರು ಎಂದರು.

ವಕೀಲರಾದವರ ಮೇಲೆ ಹಲವಾರು ಜವಾಬ್ದಾರಿಗಳಿವೆ, ವಕೀಲರು ಭಯವಿಲ್ಲದೆ ಹೋರಾಡಬೇಕು, ಪಕ್ಷಪಾತವಿಲ್ಲದೆ ವಾದಿಸಬೇಕು, ಅಚ್ಚುಕಟ್ಟಾದ ನೈತಿಕತೆ ಕಾಪಾಡಬೇಕು ಮತ್ತು ಸಂವಿಧಾನವನ್ನು ಅತಿ ಮೇಲಿನ ಸ್ಥಾನದಲ್ಲಿ ಇರಿಸಬೇಕು. ಪ್ರತಿಯೊಂದು ಕೇಸ್ ಒಂದು ಕೆಲಸವಷ್ಟೇ ಅಲ್ಲ ಸಮಾಜ ನೀಡಿದ ನಂಬಿಕೆಯಾಗಿದೆ. ನಾವು ಮಾಡುವ ಪ್ರತಿಯೊಂದು ವಾದ ನ್ಯಾಯದ ನಿರ್ಮಾಣಕ್ಕೆ, ಪೂರ್ವನಿದರ್ಶನಕ್ಕೆ ಮತ್ತು ನ್ಯಾಯಾಂಗದ ಮೇಲಿನ ಜನರ ನಂಬಿಕೆಗೆ ಕೊಡುಗೆ ನೀಡುತ್ತದೆ ಎಂದರು.

ತ್ವರಿತವಾಗಿ ಬದಲಾಗುತ್ತಿರುವ ಇಂದಿನ ಕಾನೂನು ಪರಿಸರದಲ್ಲಿ ತಂತ್ರಜ್ಞಾನ ಪರಿವರ್ತನೆ, ಸಾರ್ವಜನಿಕ ನಿರೀಕ್ಷೆಗಳ ಏರಿಕೆ, ಸಾಮಾಜಿಕ, ಆರ್ಥಿಕ ಸವಾಲುಗಳು ವಕೀಲರ ಹೊಣೆಗಾರಿಕೆಯೂ ಹೆಚ್ಚುತ್ತಿದೆ. ನ್ಯಾಯಾಲಯ ಮಾತ್ರ ನ್ಯಾಯ ರಚನೆಯ ವೇದಿಕೆ ಅಲ್ಲ, ನಮ್ಮ ನಡತೆ, ನಮ್ಮ ನೈತಿಕತೆ, ಸತ್ಯದ ಮೇಲಿನ ನಂಬಿಕೆ ಮತ್ತು ಸಮಾಜದ ಮೇಲಿನ ಬದ್ಧತೆ ಸದಾ ಸಾರ್ವಜನಿಕ ದೃಷ್ಟಿಯಲ್ಲಿ ಇರುತ್ತದೆ. ಇಂತಹ ದೊಡ್ಡ ವೃತ್ತಿಯನ್ನು ಹೆಮ್ಮೆಯಿಂದ, ಜವಾಬ್ದಾರಿಯಿಂದ ಹಾಗೂ ಉತ್ಸಾಹದಿಂದ ಮುಂದುವರಿಸಬೇಕಾಗಿದೆ. ಸಮಸ್ಯೆ ಪರಿಹರಿಸುವವರಾಗಿ, ಶಾಂತಿ ನಿರ್ಮಾಣಕಾರರಾಗಿ, ಹಕ್ಕುಗಳ ರಕ್ಷಕರಾಗಿ ಮುಂದುವರಿಯಬೇಕಾಗಿದೆ. ಸಂವಿಧಾನಿಕ ನೈತಿಕತೆ, ಮಾನವ ಗೌರವ, ಸಮಾನತೆಯ ದೀಪವನ್ನು ನಮ್ಮಿಂದಲೂ ಹೊತ್ತೊಯ್ಯೋಣ ಎಂದು ಕರೆ ನೀಡಿದರು.

ಮಾಜಿ ಸಂಸದ ಹಾಗೂ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಅನೇಕರು ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಬರುವ ಶಕ್ತಿ, ಸಾಮರ್ಥ್ಯ ಇಲ್ಲದೆ ಸಮಾಜದಲ್ಲಿ ಬದುಕುತ್ತಿದ್ದಾರೆ. ಅಂತಹವರ ನೆರವಿಗೆ ಮಾನವೀಯತೆಯನ್ನು ಆಧಾರವಾಗಿಸಿಕೊಂಡು ಮುಂದೆ ಬರಬೇಕಿದೆ. ವಕೀಲಿಕೆ ಎಂಬುದು ಕೇವಲ ವೃತ್ತಿ ಮಾತ್ರವಲ್ಲ, ಸಾರ್ವಜನಿಕ ಕ್ಷೇತ್ರದಲ್ಲಿ ನಮ್ಮ ಕರ್ತವ್ಯವೂ ಆಗಿದೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ನ್ಯಾಯಕ್ಕಾಗಿ ಪರಿತಪಿಸುವ ಕಟ್ಟ ಕಡೆಯ ವ್ಯೆಕ್ತಿಗೆ ನ್ಯಾಯದಾನ ಒದಗಿಸುವುದು ವಕೀಲರ ಜವಾಬ್ದಾರಿಯೂ, ಕರ್ತವ್ಯವೂ ಆಗಿದೆ. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿ ಉಳಿಸುವ ಕೆಲಸವೂ ನಮ್ಮ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಮಲಿಂಗೇಗೌಡ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ , ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಶ್ರೀನಿವಾಸ್, ಹರೀಶ್, ಇತರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಕೀಲ ಸಂಘದ ಜಿಲ್ಲಾಧ್ಯಕ್ಷ ಕೆ. ವಿ. ಅಭಿಲಾಷ್, ಉಪಾಧ್ಯಕ್ಷ ಮುನಿರಾಜು, ಕಾರ್ಯದರ್ಶಿ ವೆಂಕಟೇಶ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಅಯೂಬ್ ಖಾನ್, ಸಂಘದ ಸದಸ್ಯರು, ಹಿರಿಯ ವಕೀಲರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಡಘಟ್ಟ ಗ್ರಾ.ಪಂ.ಗೆ ಗಾಂಧೀಗ್ರಾಮ ಪುರಸ್ಕಾರ: ರುದ್ರಮ್ಮ ಬಸವರಾಜು
ಕಳವಾಗಿದ್ದ ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ