ವಿದ್ಯಾವಂತರಾಗಿ ಸದ್ಗುಣವಿಲ್ಲದಿದ್ದರೆ ಸಮಾಜಕ್ಕೆ ಶಾಪ: ರಾಘವೇಶ್ವರ ಭಾರತೀ ಶ್ರೀ

KannadaprabhaNewsNetwork |  
Published : Jun 21, 2024, 01:10 AM IST
ಮೂರೂರು ಪ್ರಗತಿ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಘವೇಶ್ವರ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ. ಕೆಲವು ಸಲ ನಾವು ಗೆದ್ದಾಗ ಸೋಲುತ್ತೇವೆ. ಅಹಂಕಾರ ನಮ್ಮನ್ನು ಸೋಲುವ ಹಾಗೆ ಮಾಡುತ್ತದೆ. ತ್ಯಾಗದಿಂದ ಸಾಧನೆ ಸಾಧ್ಯ.

ಕುಮಟಾ: ವಿದ್ಯಾವಂತರಾಗಿ ಒಳ್ಳೆಯವರಾಗದೇ ಇದ್ದರೆ ಸಮಾಜಕ್ಕೆ ಶಾಪವಿದ್ದಂತೆ. ಹೀಗಾಗಿ ವಿದ್ಯೆಯ ಜತೆಗೆ ನಯ- ವಿನಯ, ಸೌಜನ್ಯ, ಸದ್ಗುಣಗಳನ್ನು ಬೆಳೆಸಿಕೊಂಡು ಜೀವನವನ್ನು ಸಾಧನಾಮಯವಾಗಿ ರೂಪಿಸಿಕೊಳ್ಳಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದಲ್ಲಿ ಇತ್ತೀಚೆಗೆ ಎಸ್ಎಸ್ಎಲ್‌ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಆಶೀರ್ವಚನ ನೀಡಿದರು.ಗ್ರಾಮೀಣ ಭಾಗದಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಈ ಶಾಲೆ ಯಾವ ನಗರ ಪ್ರದೇಶದ ಶಾಲೆಗಳಿಗೂ ಕಡಿಮೆ ಇಲ್ಲ. ಶಹರದಲ್ಲಿ ಎಲ್ಲದರಲ್ಲಿ ಕೃತಕತೆ ಮೇಳೈಸಿದ್ದರೆ, ಹಳ್ಳಿಗಳಲ್ಲಿ ನೈಜತೆ ಹಾಸುಹೊಕ್ಕಾಗಿರುತ್ತದೆ. ನಗರದಲ್ಲಿ ಬೆಳೆದರೆ ಆ ಮಗುವಿನ ಬೆಳವಣಿಗೆ ಪೂರ್ಣವಲ್ಲ. ಯಾಕೆಂದರೆ ಬೆಳೆಯುವ ಮಗು ಕಾಡು, ಬೆಟ್ಟ, ಹರಿಯುವ ನೀರು, ಪ್ರಾಣಿ- ಪಕ್ಷಿ, ಸುಂದರ ಪರಿಸರವನ್ನು ನೋಡಬೇಕು. ಈ ಹಳ್ಳಿಯ ಶಾಲೆಯಲ್ಲಿ ಅಸಾಮಾನ್ಯವಾದ ಸಾಧನೆಯಾಗುತ್ತಿದೆ ಎಂದರು.ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ. ಕೆಲವು ಸಲ ನಾವು ಗೆದ್ದಾಗ ಸೋಲುತ್ತೇವೆ. ಅಹಂಕಾರ ನಮ್ಮನ್ನು ಸೋಲುವ ಹಾಗೆ ಮಾಡುತ್ತದೆ. ತ್ಯಾಗದಿಂದ ಸಾಧನೆ ಸಾಧ್ಯ. ವಿದ್ಯಾರ್ಥಿಯಾಗಿದ್ದಾಗ ಕ್ಷಣ ಕಾಲವು ವ್ಯಯ ಮಾಡದೆ ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಸಾಧನೆಯ ಜೀವನ ನಮ್ಮದಾಗುತ್ತದೆ. ಸದಾ ಸಾಧನೆಯ ಕಡೆ ಗುರಿ ಇರಲಿ ಎಂದರು.ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸುಪ್ರಿಯಾ ಶಂಕರ ಗೌಡ ಅವರನ್ನು ಸನ್ಮಾನಿಸಲಾಯಿತು. ಅಭ್ಯಾಗತರಾಗಿ ನಾರಾಯಣ ಭಟ್ಟ, ಜಿ.ಎಸ್. ಹೆಗಡೆ, ಸುಬ್ರಾಯ ಭಟ್ಟ, ಮಂಜುನಾಥ ಭಟ್ಟ ಸ್ವರ್ಣಗದ್ದೆ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಪದಾಧಿಕಾರಿಗಳು ಶ್ರೀಗಳಿಂದ ಮಂತ್ರಾಕ್ಷತೆ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌