ಪರಿಸರ ಕಾರ್ಯದಲ್ಲಿ ಭಾಗಿಯಾಗಿರುವುದು ಶ್ಲಾಘನೀಯ

KannadaprabhaNewsNetwork | Published : Oct 6, 2024 1:27 AM

ಸಾರಾಂಶ

ಕನಕಪುರ: ಕನ್ನಡಪರ ಸಂಘಟನೆಯೊಂದು ಪರಿಸರ ಸ್ನೇಹಿ ಕಾರ್ಯಗಳಲ್ಲಿ ಭಾಗಿಯಾಗಿ ಆದರ್ಶ ಮೆರೆಯುತ್ತಿರುವುದು ಸಂತಸಕರ ಸಂಗತಿ ಎಂದು ಜಿಕೆವಿಕೆ ನಿವೃತ್ತ ಪ್ರಾಧ್ಯಾಪಕ ಪುಟ್ಟರಾಜು ಹೇಳಿದರು.

ಕನಕಪುರ: ಕನ್ನಡಪರ ಸಂಘಟನೆಯೊಂದು ಪರಿಸರ ಸ್ನೇಹಿ ಕಾರ್ಯಗಳಲ್ಲಿ ಭಾಗಿಯಾಗಿ ಆದರ್ಶ ಮೆರೆಯುತ್ತಿರುವುದು ಸಂತಸಕರ ಸಂಗತಿ ಎಂದು ಜಿಕೆವಿಕೆ ನಿವೃತ್ತ ಪ್ರಾಧ್ಯಾಪಕ ಪುಟ್ಟರಾಜು ಹೇಳಿದರು.

ಇಲ್ಲಿನ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಹಣ್ಣಿನ ಗಿಡ ನೆಟ್ಟು ಮಾತನಾಡಿದರು. ಒಂದು ಸಂಘಟನೆಯು ಸಮಾಜದಲ್ಲಿನ ಅಂಕು-ಡೊಂಕುಗಳ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು ಎಂದರು.

ಕನಕಪುರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಅನುಮೋದನೆಗೊಂಡಿದ್ದು, ಮುಂದೆ ಇಲ್ಲಿನ ರೈತರ ಮಕ್ಕಳು ಕೃಷಿ ವಿಭಾಗದಲ್ಲಿ ಕಡಿಮೆ ಖರ್ಚಿನಲ್ಲಿ ಪದವೀಧರಾಗಿ ಪರಿಸರಮುಖಿ ಸಂಶೋಧನೆಗಳಲ್ಲಿ ತೊಡಗಿಕೊಳ್ಳುವುದನ್ನು ಕಾಣಲು ಹೆಮ್ಮೆ ಎನಿಸುತ್ತದೆ ಎಂದರು.

ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ ಜನಪರ ವೇದಿಕೆಯು ಇಲ್ಲಿ ಮಾತ್ರವಲ್ಲದೆ ಪ್ರತಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಸಹ ಹಣ್ಣಿನ ಗಿಡ ನೆಡುವ ಮೂಲಕ ಕರ್ನಾಟಕದಾದ್ಯಂತ ವಾರ್ಷಿಕೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನಮ್ಮ ಸಂಘಟನೆ ಕೇವಲ ಕನ್ನಡಪರ ಸಂಘಟನೆಯಲ್ಲದೆ, ಸಾಮಾಜಿಕ ಕೆಲಸಗಳನ್ನು ಸಹ ಅನುಸರಿಸುವ ವಿಶಿಷ್ಟವಾದ ಸಂಘಟನೆಯಾಗಿದ್ದು, ಸಂಘಟನೆಯ ಸಂಸ್ಥಾಪಕ ಗುಣರಂಜನ್ ಶೆಟ್ಟಿ ಹಾಗೂ ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡರ ಮಾರ್ಗದರ್ಶನದಲ್ಲಿ ವೇದಿಕೆ ಸಂಘಟನೆಯು ಉತ್ತಮ ಆಶಯಗಳನ್ನು ಹೊತ್ತು ಸಾಗುತ್ತಿದೆ ಎಂದರು.

ಮುಂದಿನ ತಲೆಮಾರಿಗೆ ಒಂದು ಉತ್ತಮ ಪರಿಸರವನ್ನು ಉಡುಗೊರೆಯಾಗಿ ನೀಡುವ ಉದ್ದೇಶದಿಂದ ಸಂಘಟನೆ ವತಿಯಿಂದ ಗೋಮಾಳದ ಜಾಗಗಳನ್ನು ದತ್ತು ಪಡೆದು ದಟ್ಟವಾದ ಕಾಡು ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ನಗರ ಸಭಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಗೋವಿಂದಪ್ಪ, ಸದಸ್ಯ ಸ್ಟುಡಿಯೋ ಚಂದ್ರು, ಜಿಲ್ಲಾ ಲೇಖಕರ ವೇದಿಕೆ ಜಿಲ್ಲಾಧ್ಯಕ್ಷ ಸಾಹಿತಿ ಕೂ.ಗಿ. ಗಿರಿಯಪ್ಪ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಹೊಸದುರ್ಗ, ಕನ್ನಡ ಭಾಸ್ಕರ್, ಗಬ್ಬಾಡಿ ಕಾಡೇಗೌಡ, ಮಳಗಾಳು ದಿನೇಶ್, ಚೀರಣಗುಪ್ಪೆ ರಾಜೇಶ್, ನಲ್ಲಹಳ್ಳಿ ಶ್ರೀನಿವಾಸ್, ಛಲವಾದಿ ನವೀನ್, ಕೆಬ್ಬಹಳ್ಳಿ ಶಿವರಾಜು, ಪುಟ್ಟಲಿಂಗಯ್ಯ, ಅಸ್ಗರ್ ಖಾನ್, ಅಂಗಡಿ ರಮೇಶ್, ಹಾರೋಹಳ್ಳಿ ಗಿರೀಶ್, ಕುಮಾರ್, ಅಂದಾನಿಗೌಡ, ಕಗ್ಗಲಹಳ್ಳಿ ಲಿಂಗರಾಜು ಭಾಗವಹಿಸಿದ್ದರು.

Share this article