ಕನ್ನಡಪ್ರಭ ವಾರ್ತೆ ಸರಗೂರು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನ.23 ರಿಂದ ನಾಲ್ಕು ದಿನಗಳ ಕಾಲ ಕಡೆ ಕಾರ್ತಿಕ ಮಾಸದ ವಿಶೇಷ ಪೂಜೆ, ಜಾತ್ರಾ ಮಹೋತ್ಸವದ ಕುಂಭಾಭಿಷೇಕಕ್ಕೆ ವಿಜೃಂಭಣೆಯಿಂದ ಚಾಲನೆ ದೊರಕಿತು.ಶ್ರೀ ಕ್ಷೇತ್ರ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಕಾರ್ಯಕ್ರಮಗಳ ತಯಾರಿ ಶುರುವಾಗಿದ್ದು, ಭಕ್ತರು, ಕಾಡು ಪ್ರಾಣಿಗಳು, ಅರಣ್ಯಕ್ಕೆ ಕಿಂಚಿತ್ತು ತೊಂದರೆಯಾಗದಂತೆ ಜಾತ್ರಾ ಮಹೋತ್ಸವದ ಹಿನ್ನೆಲೆ ಹೇರಲಾದ ಕೆಲ ನಿರ್ಬಂಧಗಳನ್ನು ಪಾಲಿಸಿಕೊಂಡು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ವಾರದಿಂದಲೇ ಭರದಿಂದ ಸಾಗಿದೆ.
ಸಮಿತಿಯು ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಆವರಣ ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಬಳಿದು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೊಂಡೋತ್ಸವ ನಡೆಯುವ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ರಥೋತ್ಸವ ದಿನ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅನ್ನಸಂತರ್ಪಣೆ ನಡೆಸಲು ಹಾಗೂ ಕೊಂಡೋತ್ಸವವನ್ನು ಭಕ್ತರು ಕಣ್ತುಂಬಿಕೊಳ್ಳಲು ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ದೇವರ ದರ್ಶನಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಜಾತ್ರೆ ಮಹೋತ್ಸವ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.ಇದೇ ಮೊದಲ ಬಾರಿಗೆ ಕುಂಭಾಭಿಷೇಕ:
ಶ್ರೀಕ್ಷೇತ್ರ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ವಿಮಾನ ಗೋಪುರ, ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಮತ್ತು ಶ್ರೀಯವರ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ನ. 23ರಂದು ಆಲಯ ಪ್ರವೇಶ, ಗಣಪತಿ ಪೂಜೆ, ಹೋಮ-ಹವನ, ರುದ್ರಾಭಿಷೇಕ ಪಾರಾಯಣ, ನೈವೇದ್ಯ ಮಹಾಮಂಗಳಾರತಿ ಇರಲಿದೆ. ನ. 24ರಂದು ಬ್ರಾಹ್ಮಿ ಮಹೂರ್ತದಲ್ಲಿ ನವರತ್ನನ್ಯಾಸ ವಿಮಾನ ಕಳಸ ಸ್ಥಾಪನೆ, ಪ್ರಾಣಪ್ರತಿಷ್ಠೆ, ಪೂರ್ಣಾಹುತಿ ನಂತರ ಮಕರ ಲಗ್ನದಲ್ಲಿ ಮಧ್ಯಾಹ್ನ 12ಕ್ಕೆ ಕುಂಭಾಭಿಷೇಕ, ಮಹಾಮಂಗಳಾರತಿ, ರಾಜೋಪಚಾರ, ತೀರ್ಥ ಪ್ರಸಾದ ವಿನಿಯೋಗ, ನ. 25ಕ್ಕೆ ಸ್ವಾಮಿ ಅವರಿಗೆ ದೇವಸ್ಥಾನ ಸಮೀಪವಿರುವ ಕೆರೆಯಿಂದ ವಿವಿಧ ಪೂಜೆಗಳನ್ನು ಸಲ್ಲಿಸಿ, ಹಾಲು ಹರವಿ ಸೇವೆ ತೆಗೆದುಕೊಂಡು ದೇವರನ್ನು ದೇವಾಲಯದವರೆಗೂ ಉದ್ಬವಸ್ಥಾನಕ್ಕೆ ಕರೆದೊಯ್ಯಲಾಗುವುದು.ರಾತ್ರಿ ಎಣ್ಣೆಮಜ್ಜನ ಮತ್ತು ಪ್ರಸಾದ ವಿನಯೋಗ ಇರಲಿದೆ. ವೀರಗಾಸೆ ನೃತ್ಯ, ಪೂಜಾ ಕುಣಿತ, ಕೋಲಾಟ, ಕಂಸಾಳೆ ರಸ್ತೆಯ ಮೂಲಕ ನೃತ್ಯ ಪ್ರದರ್ಶನ ನಡೆಯಲಿದೆ. ನಂತರ ಕೊಂಡೋತ್ಸವ ಇರಲಿದೆ. 26ಕ್ಕೆ ರುದ್ರಾಕ್ಷಿ ಮಂಟಪ, ಹುಲಿ ವಾಹನ, ನಂದಿಧ್ವಜದೊಂದಿಗೆ ರಥೋತ್ಸವ ನೆರವೇರಲಿದೆ.