ಬೆಳಗಾವಿ, ಚಿಕ್ಕೋಡಿ ಡಿಡಿಪಿಐ ಹುದ್ದೆ ಖಾಲಿ

KannadaprabhaNewsNetwork | Published : Jul 15, 2024 1:52 AM

ಸಾರಾಂಶ

ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಎರಡೂ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಹುದ್ದೆಗಳು ಖಾಲಿಯಾಗಿವೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಎರಡೂ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಹುದ್ದೆಗಳು ಖಾಲಿಯಾಗಿವೆ. ಬೆಳಗಾವಿ ಡಿಡಿಪಿಐ ಹುದ್ದೆ ಬರೋಬ್ಬರಿ 10 ತಿಂಗಳಿಂದ ಖಾಲಿ ಇದ್ದರೆ, ಚಿಕ್ಕೋಡಿ ಡಿಡಿಪಿಐ ಹುದ್ದೆ ಇತ್ತೀಚೆಗಷ್ಟೇ ಖಾಲಿಯಾಗಿದೆ. ಸರ್ಕಾರಿ ಇಲ್ಲಿಯವರೆಗೂ ಹುದ್ದೆ ಭರ್ತಿ ಮಾಡದಿರುವುದು ಜಿಲ್ಲೆಯ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕಾಗಿದೆ.

ಜಿಲ್ಲೆ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳನ್ನೊಳಗೊಂಡಿದೆ. 3394 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಚಿಕ್ಕೋಡಿ ಡಿಡಿಪಿಐ ಆಗಿದ್ದ ಮೋಹನಕುಮಾರ ಹಂಚಾಟೆ ಅ‍ವರಿಗೆ ಬೆಳಗಾವಿ ಡಿಡಿಪಿಐ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. ಇತ್ತೀಚೆಗೆ ಚಿಕ್ಕೋಡಿಯಿಂದ ಹಂಚಾಟೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಹಾಗಾಗಿ, ಜಿಲ್ಲೆಯ ಎರಡೂ ಡಿಡಿಪಿಐ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಇದು ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಹಿನ್ನಡೆಯಾಗುವ ಆತಂಕ ತಂದೊಡ್ಡಿದೆ.

ಕಳೆದ 2023ರ ಅಕ್ಟೋಬರ್‌ ತಿಂಗಳಿಂದ ಬೆಳಗಾವಿ ಡಿಡಿಪಿಐ ಹುದ್ದೆ ಖಾಲಿ ಉಳಿದಿದೆ. ಡಿಡಿಪಿಐ ಆಗಿದ್ದ ಬಸವರಾಜ ನಾಲತವಾಡ ಲೋಕಾಯುಕ್ತರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದರು. ಬಳಿಕ ಡಯಟ್‌ ಪ್ರಾಚಾರ್ಯರಾಗಿದ್ದ ಎಸ್‌.ಡಿ.ಗಾಂಜಿ ಮತ್ತು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಬಿ.ಎಸ್‌. ಮಾಯಾಚಾರಿ ಅವರನ್ನು ಪ್ರಭಾರ ಡಿಡಿಪಿಐ ಆಗಿ ಸರ್ಕಾರ ನಿಯೋಜನೆ ಮಾಡಿತ್ತು. ಕಳೆದ ಡಿಸೆಂಬರ್‌ 1 ರಿಂದ ಚಿಕ್ಕೋಡಿ ಡಿಡಿಪಿಐ ಆಗಿದ್ದ ಮನೋಜಕುಮಾರ ಹಂಚಾಟೆ ಅವರಿಗೆ ಬೆಳಗಾವಿ ಡಿಡಿಪಿಐ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಇದಕ್ಕೂ ಮೊದಲು ಬೆಳಗಾವಿ ಡಿಡಿಪಿಐ ಹುದ್ದೆಗೆ ಎ.ಬಿ.ಪುಂಡಲೀಕ ಮತ್ತು ಬಸವರಾಜ ನಾಲತವಾಡ ನಡುವೆ ಪೈಪೋಟಿ ನಡೆದಿತ್ತು. ಕೊನೆಗೂ ನಾಲತವಾಡ ಅ‍ವರನ್ನು ಡಿಡಿಪಿಐ ಆಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು.

ಲೋಕಾಯುಕ್ತ ಬಲೆಗೆ ಬಿದ್ದಿದ್ದ ನಾಲತವಾಡ:

ಕಿತ್ತೂರು ತಾಲೂಕಿನ ತುರುಮುರಿ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಪರವಾನಗಿ ನವೀಕರಣ ಮಾಡಿಕೊಡಲು ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ವೇಳೆ ಅಕ್ಟೋಬರ್‌ 20ರಂದು ಬಸವರಾಜ ನಾಲತವಾಡ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಆನಂತರ ಬೆಳಗಾವಿ ಡಿಡಿಪಿಐ ಪೂರ್ಣಪ್ರಮಾಣದ ಹುದ್ದೆ ಖಾಲಿ ಉಳಿದಿದ್ದು, 10 ತಿಂಗಳು ಕಳೆದರೂ ಸರ್ಕಾರ ನೇಮಕ ಮಾಡುತ್ತಿಲ್ಲ. ಇದರಿಂದಾಗಿ ಶೈಕ್ಷಣಿಕ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಶೈಕ್ಷಣಿಕ ಜಿಲ್ಲೆಗಳಿಗೆ ಕೂಡಲೇ ಡಿಡಿಪಿಐ ನೇಮಕ ಮಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಶೀಘ್ರದಲ್ಲೇ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರನ್ನು ನೇಮಿಸಲಾಗುವುದು.

- ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

Share this article