ನಿಲ್ಲದ ಮರಾಠಿಗರ ಪುಂಡಾಟಿಕೆ : ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ತಡೆದು, ಚಾಲಕನ ಮುಖಕ್ಕೆ ಮಸಿ

ಸಾರಾಂಶ

ಮಹಾರಾಷ್ಟ್ರದಲ್ಲಿ ಮರಾಠಿಗರ ಪುಂಡಾಟ ಮುಂದುವರಿದಿದ್ದು, ಗುರುವಾರ ತಡರಾತ್ರಿ ಪುಣೆ ಗೇಟ್‌ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ತಡೆದು, ಚಾಲಕನ ಮುಖಕ್ಕೆ ಮರಾಠಿ ಪುಂಡರು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ.

ಕಲಬುರಗಿ : ಮಹಾರಾಷ್ಟ್ರದಲ್ಲಿ ಮರಾಠಿಗರ ಪುಂಡಾಟ ಮುಂದುವರಿದಿದ್ದು, ಗುರುವಾರ ತಡರಾತ್ರಿ ಪುಣೆ ಗೇಟ್‌ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ತಡೆದು, ಚಾಲಕನ ಮುಖಕ್ಕೆ ಮರಾಠಿ ಪುಂಡರು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ. ಚಾಲಕನಿಂದ ‘ಜೈ ಮಹಾರಾಷ್ಟ್ರ’ ಘೋಷಣೆ ಕೂಗಿಸಿ, ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ಮಾತನಾಡಬೇಕು ಎಂದು ತಾಕೀತು ಮಾಡಿ, ಬೆದರಿಕೆ ಹಾಕಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಆಳಂದದಿಂದ ಪುಣೆಗೆ ಸಾರಿಗೆ ಬಸ್‌ಗಳ ಸೇವೆಗಳನ್ನು ರದ್ದುಪಡಿಸಲಾಗಿದೆ.

ಕಲಬುರಗಿ ಡಿಪೋಗೆ ಸೇರಿದ ಬಸ್‌ ಗುರುವಾರ ರಾತ್ರಿ ಆಳಂದದಿಂದ ಪುಣೆಗೆ ಹೊರಟಿತ್ತು. ತಡರಾತ್ರಿ ಪುಣೆ ಸಮೀಪದ ಸ್ವರಗೇಟ್‌ ಬಳಿ ಬಸ್‌ ತಡೆದ ಪುಂಡರು, ಬಸ್‌ ಚಾಲಕ ಸಾದಿಕ್‌, ನಿರ್ವಾಹಕ ಪರಮೇಶ್ವರ್‌ ಅವರನ್ನು ಬಸ್‌ನಿಂದ ಕೆಳಗಿಳಿಸಿದರು. ಬಳಿಕ, ಚಾಲಕನ ಮುಖಕ್ಕೆ ಕಪ್ಪು ಮಸಿ ಬಳಿದು, ‘ಜೈ ಮಹಾರಾಷ್ಟ್ರ’ ಎಂದು ಹೇಳಿಸಿ ಪುಂಡಾಟ ಪ್ರದರ್ಶಿಸಿದ್ದಾರೆ. ಅಲ್ಲದೆ, ಕನ್ನಡಿಗ ಭಾಷಿಕರ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡಬೇಡಿ, ಮರಾಠಿಯಲ್ಲಿ ಮಾತನಾಡಿ ಎಂದು ಬೆದರಿಕೆ ಹಾಕಿ, ಉದ್ಧಟತನ ಮೆರೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿಯವರು ಆಳಂದದಿಂದ ಪುಣೆಗೆ ಹೋಗುವ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಸಾದಿಕ್‌, ಪುಣೆಗೆ ತೆರಳುವ ವೇಳೆ ತಡರಾತ್ರಿ ಏಕಾಏಕಿ ಬಂದ ಮೂವರು ನನ್ನನ್ನು ಕೆಳಗೆ ಇಳಿಸಿ, ಮುಖಕ್ಕೆ ಮಸಿ ಬಳಿದರು. ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ಮಾತನಾಡಬೇಕು ಎಂದು ಒತ್ತಾಯಿಸಿದರು ಎಂದು ತಿಳಿಸಿದರು.

ಮಹಾ ಪುಂಡಾಟಿಕೆಗೆ ಶಾಂತಿಯುತ ಪ್ರತಿಕ್ರಿಯೆ:

ಈ ಮಧ್ಯೆ, ಮಹಾ ಪುಂಡಾಟಿಕೆಗೆ ಕನ್ನಡಪರ ಸಂಘಟನೆಗಳು ಶಾಂತಿಯುತ ಪ್ರತಿಕ್ರಿಯೆ ನೀಡಿದ್ದು, ಆಳಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರದ ಬಸ್ ಚಾಲಕರಿಗೆ ಸನ್ಮಾನ ಮಾಡಿವೆ. ಇದೇ ವೇಳೆ, ಪುಣೆ ಗೇಟ್‌ ಘಟನೆಗೆ ಕಿಡಿ ಕಾರಿರುವ ಸಂಘಟನೆಗಳು, ಅಲ್ಲಿನ ಸರ್ಕಾರ ಕನ್ನಡಿಗರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಕೆಲವು ಪುಂಡರು ಮತ್ತು ಅವಿವೇಕಿಗಳು, ಕರ್ನಾಟಕದ ಸಂಸ್ಕೃತಿ, ಭಾಷೆ ಮತ್ತು ನಮ್ಮ ನಾಡಿನ ಆತ್ಮಗೌರವವನ್ನು ಮೀರಿದ ರೀತಿಯಲ್ಲಿ ವರ್ತಿಸಿದ್ದು ಖಂಡನೀಯ ಎಂದಿದ್ದಾರೆ. 

Share this article