;Resize=(412,232))
ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮವಾಗಿದ್ದು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸುವ ಮಹತ್ವದ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿತು.
ಮೇಯರ್ ಪ್ರೀತಿ ಕಾಮಕರ ಅವರು ರೂಲಿಂಗ್ ನೀಡುವ ಮೂಲಕ ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮತ್ವ ಎಂಬುವುದನ್ನು ಸಾರಿ ಹೇಳಿದರು. ಈ ಮೂಲಕ ಹಲವು ದಿನಗಳಿಂದ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ಪರ ನಿರ್ಣಯಕ್ಕೆ ಕೊನೆಗೂ ಪಾಲಿಕೆಯಲ್ಲಿ ಅಧಿಕೃತ ಮುದ್ರೆ ಬಿದ್ದಿದೆ. ಅದರಂತೆಯೇ 2005ರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನೇತೃತ್ವದ ಅಂದಿನ ಆಡಳಿತವು ಅಂಗೀಕರಿಸಿದ್ದ ಮಹಾರಾಷ್ಟ್ರ ಪರ ನಿರ್ಣಯಕ್ಕೆ 21 ವರ್ಷಗಳ ಬಳಿಕ ತಿರುಗೇಟು ನೀಡಿದಂತಾಗಿದೆ.
ನಗರ ಪಾಲಿಕೆ ಸಭೆಯಲ್ಲಿ ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಆ.29 2026ರಂದು ಕಳುಹಿಸಿದ್ದ ಪತ್ರವನ್ನು ಪರಿಷತ್‌ನ ಗಮನಕ್ಕೆ ತಂದರು. ಕರ್ನಾಟಕ ವಿಧಾನಸಭೆ ಈಗಾಗಲೇ ಮಹಾಜನ ಆಯೋಗದ ವರದಿಯನ್ನು ಅಂತಿಮವೆಂದು ಪರಿಗಣಿಸಿ, ಅದನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಂತೆ 2 ಬಾರಿ ನಿರ್ಣಯ ಅಂಗೀಕರಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯೂ ಕರ್ನಾಟಕದ ಪರ ತನ್ನ ನಿಲುವನ್ನು ಸ್ಪಷ್ಟಪಡಿಸುವ ನಿರ್ಣಯವನ್ನು ಅಂಗೀಕರಿಸುವಂತೆ ಸೂಚಿಸಲಾಗಿತ್ತು.
ಸರ್ಕಾರದ ಸೂಚನೆಯಂತೆ ನಿರ್ಣಯ ಅಂಗೀಕರಿಸಲು ಉಪಮೇಯರ್ ಹಣಮಂತ ಕೊಂಗಾಲಿ ಅವರು ಮೇಯರ್ ಪ್ರೀತಿ ಕಾಮಕರ ಅವರಿಗೆ ಮನವಿ ಮಾಡಿದರು. ಬಳಿಕ ವಿಷಯವನ್ನು ಸಭೆಯ ಮುಂದಿಟ್ಟ ಮೇಯರ್, ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ರೂಲಿಂಗ್ ನೀಡಿದರು. ನಿರ್ಣಯ ಅಂಗೀಕಾರದ ಬಳಿಕ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು ಮೇಯರ್ ಹಾಗೂ ಉಪಮೇಯರ್ ಅವರನ್ನು ಅಭಿನಂದಿಸಿದರು. ಈ ಮೂಲಕ ಗಡಿ ವಿಚಾರದಲ್ಲಿ ಪಾಲಿಕೆಯ ನಿಲುವು ಸ್ಪಷ್ಟವಾಗಿ ದಾಖಲಾಗಿದ್ದು, ಹಿಂದಿನ ಸಭೆಗಳಲ್ಲಿ ಉಂಟಾಗಿದ್ದ ಗೊಂದಲಕ್ಕೂ ತೆರೆ ಬಿದ್ದಂತಾಗಿದೆ.
ಕರ್ನಾಟಕ ಪರ ನಿರ್ಣಯ ಅಂಗೀಕಾರಕ್ಕೆ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮೂವರು ಬೆಂಬಲಿತ ಸದಸ್ಯರು ಸಭೆಯಿಂದ ಹೊರನಡೆದರು. ಗಡಿ ವಿವಾದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಉಳಿದಿದೆ. ಹೀಗಿರುವಾಗಿ ಬೆಳಗಾವಿ ಪಾಲಿಕೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿರುವುದಕ್ಕೆ ನಮ್ಮ ವಿರೋಧವಿದೆ ಎಂಬುದು ಅವರ ಆಕ್ಷೇಪ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕಾರ ಆಗುವ ಹಿಂದೆ ಕನ್ನಡಪರ ಸಂಘಟನೆಗಳ ನಿರಂತರ ಹೋರಾಟವೂ ಪ್ರಮುಖ ಕಾರಣವಾಗಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಪಾಲಿಕೆ ಅಧಿಕೃತವಾಗಿ ದಾಖಲಿಸಬೇಕೆಂದು ಹಲವು ವರ್ಷಗಳಿಂದ ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತ ಬಂದಿದ್ದವು. ಪಾಲಿಕೆ ಸಾಮಾನ್ಯಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಮನವಿ, ಪ್ರತಿಭಟನೆ ಹಾಗೂ ವಿವಿಧ ಹಂತಗಳಲ್ಲಿ ಒತ್ತಡ ಹೇರಲಾಗಿತ್ತು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 2005ರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನೇತೃತ್ವದ ಆಡಳಿತವಿತ್ತು. ಆಗ ಆ ಆಡಳಿತವು ಅಂಗೀಕರಿಸಿದ್ದ ಮಹಾರಾಷ್ಟ್ರ ಪರ ನಿರ್ಣಯಕ್ಕೆ 21 ವರ್ಷಗಳ ಬಳಿಕ ಕರ್ನಾಟಕ ಪರ ನಿರ್ಣಯ ತೆಗೆದುಕೊಳ್ಳುವ ಮೂಲಕ ತಿರುಗೇಟು ನೀಡಿದೆ.
ಏಕೆ ಈ ನಿರ್ಣಯ ಮಹತ್ವದ್ದು?
*ಬೆಳಗಾವಿ ಮತ್ತು ಜಿಲ್ಲೆಯ ಗಡಿ ಪ್ರದೇಶಗಳು ಕರ್ನಾಟಕದ್ದೆ ಎಂಬ ಸ್ಪಷ್ಟ ಸಂದೇಶ ರವಾನೆ
*ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿಲುವು ಸ್ಪಷ್ಟವಾಗಿ ದಾಖಲಿಸಲಾಗಿದೆ
*ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಎಂಇಎಸ್ ಪುಂಡಾಟಕ್ಕೆ ತಡೆ
*ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಿಸಲು ನಿರ್ಣಯಿಸಿದ್ದ ಎಂಇಎಸ್‌ಗೆ 21 ವರ್ಷಗಳ ಬಳಿಕ ತಿರುಗೇಟು
*ಬೆಳಗಾವಿ ಸೇರಿ 865 ಮರಾಠಿ ಭಾಷಿಕ ಗ್ರಾಮ, ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಮಹಾರಾಷ್ಟ್ರ ಸರ್ಕಾರ ಮತ್ತೆ ಮುಂದಿಟ್ಟಿತ್ತು. ಆ ನಿರ್ಣಯಕ್ಕೂ ಇದು ಠಕ್ಕರ್
*2004ರಲ್ಲಿ ಸಲ್ಲಿಸಿರುವ ಗಡಿ ವಿವಾದದ ಮೂಲ ದಾವಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಮಹಾರಾಷ್ಟ್ರ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೂ ಮಹಾರಾಷ್ಟ್ರಕ್ಕೆ ಹಿನ್ನಡೆ
2005ರಲ್ಲಿ ಬೆಳಗಾವಿ ಪಾಲಿಕೆ ಎಂಇಎಸ್ ವಶದಲ್ಲಿದ್ದಾಗ ಮಹಾರಾಷ್ಟ್ರ ಪರ ನಿರ್ಣಯ
ಬೆಳಗಾವಿ, ಕರ್ನಾಟಕದ ಗಡಿ ಭಾಗಗಳು ಮಹಾರಾಷ್ಟ್ರದ್ದೆಂಬ ನಿರ್ಣಯ ಅಂಗೀಕಾರ
ಇದಕ್ಕೆ ತಿರುಗೇಟು ನೀಡಲು ಬೆಳಗಾವಿ ಕರ್ನಾಟಕದ್ದೆಂಬ ನಿರ್ಣಯಕ್ಕೆ ಭಾರೀ ಬೇಡಿಕೆ
ಆದರೆ ಹಲವು ವರ್ಷಗಳಿಂದಲೂ ಇಂಥ ಘೋಷಣೆ ಅಂಗೀಕಾರದಲ್ಲಿ ಪಾಲಿಕೆ ವಿಫಲ
ಈ ಹಿನ್ನೆಲೆಯಲ್ಲಿ ನಿರ್ಣಯ ಅಂಗೀಕರಿಸಲು ಇತ್ತೀಚೆಗೆ ಪಾಲಿಗೆ ಸರ್ಕಾರದ ಸೂಚನೆ
ಹೀಗೆ 21 ವರ್ಷ ಬಳಿಕ ಮಹಾಪರ ನಿಲುವು ಪೂರ್ಣ ತಿರಸ್ಕರಿಸಿದ ಬೆಳಗಾವಿ ಪಾಲಿಕೆ