ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಆರ್ಥಿಕ ಸಮಸ್ಯೆ ಆಗಿಲ್ಲ : ಸಿಎಂ

Published : Dec 20, 2024, 10:41 AM IST
siddaramaiah

ಸಾರಾಂಶ

 ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಆರ್ಥಿಕ ಸಮಸ್ಯೆ ಆಗಿಲ್ಲ. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಆರ್ಥಿಕ ಅಶಿಸ್ತು ಹಾಗೂ ಕೇಂದ್ರ ಸರ್ಕಾರದಿಂದ ಬರಬೇಕಾದ ರಾಜ್ಯದ ಪಾಲಿನ ತೆರಿಗೆ ಹಣ ಹಾಗೂ ವಿಶೇಷ ಅನುದಾನದ ಕೊರತೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸುವರ್ಣ ವಿಧಾನಸಭೆ : ಬಿಜೆಪಿಯವರು ಆರೋಪಿಸುತ್ತಿರುವಂತೆ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಆರ್ಥಿಕ ಸಮಸ್ಯೆ ಆಗಿಲ್ಲ. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಆರ್ಥಿಕ ಅಶಿಸ್ತು ಹಾಗೂ ಕೇಂದ್ರ ಸರ್ಕಾರದಿಂದ ಬರಬೇಕಾದ ರಾಜ್ಯದ ಪಾಲಿನ ತೆರಿಗೆ ಹಣ ಹಾಗೂ ವಿಶೇಷ ಅನುದಾನದ ಕೊರತೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಗುರುವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲಿನ ಚರ್ಚೆ ವೇಳೆ, ಬಿಜೆಪಿ ಸದಸ್ಯರಾದ ಸುನಿಲ್‌ಕುಮಾರ್‌, ಸುರೇಶ್‌ ಗೌಡ ಇತರರು ಮಾಡಿದ್ದ ಆರೋಪಗಳನ್ನು ಪ್ರಸ್ತಾಪಿಸಿ ಉತ್ತರ ನೀಡಿದರು.

ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಆರ್ಥಿಕತೆಯನ್ನು ಹಾಳು ಮಾಡಿದ್ದರು. ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬೊಮ್ಮಾಯಿ ಅವರಿಗೆ ಸ್ವಲ್ಪ ಆರ್ಥಿಕತೆ ಅರ್ಥವಾಗುತ್ತೆ ಎಂದುಕೊಂಡಿದ್ದೆ. ಆದರೆ, ಅವರ ಅವಧಿಯಲ್ಲಿ ಬಜೆಟ್‌ನಲ್ಲಿ ಯಾವುದೇ ಅನುದಾನ ಮೀಸಲಿಡದೆಯೇ ₹2.9 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಕಾರ್ಯಾದೇಶ ನೀಡಿದ್ದರು. 40 ಪರ್ಸೆಂಟ್‌ ಭ್ರಷ್ಟಾಚಾರ ಆರಂಭವಾಗಿದ್ದೇ ಇಲ್ಲಿ. ಇದರ ಪರಿಣಾಮ ಅವರ ಅವಧಿಯಲ್ಲಿ ₹29,600 ಕೋಟಿ ಗುತ್ತಿಗೆ ಕಾಮಗಾರಿಗಳ ಬಿಲ್‌ ಬಾಕಿ ಉಳಿಸಿಹೋಗಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಇದರಲ್ಲಿ ₹18,150 ಕೋಟಿ ಬಾಕಿ ಬಿಲ್‌ ತೀರಿಸಿದ್ದೇವೆ. ಉಳಿದದ್ದು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದರು.

ಕೇಂದ್ರದಿಂದ ತೆರಿಗೆ ಅನ್ಯಾಯ:

ಇನ್ನು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಸರಿಯಾಗಿ ಬರುತ್ತಿಲ್ಲ. ನಾವು ಒಂದು ರು. ತೆರಿಗೆ ಕಟ್ಟಿದರೆ ಅದರಲ್ಲಿ 13ರಿಂದ 14 ಪೈಸೆಯನ್ನಷ್ಟೇ ವಾಪಸ್‌ ನೀಡುತ್ತಿದ್ದಾರೆ. ಇದರಿಂದ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ದೊಡ್ಡ ಅನ್ಯಾವಯಾಗುತ್ತಿದೆ. ಇನ್ನು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ನೀಡಬೇಕಾಗಿದ್ದ ₹5,495 ಕೋಟಿ ವಿಶೇಷ ಅನುದಾನ, ಬೆಂಗಳೂರು ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫರಲ್‌ ರಿಂಗ್‌ ರಸ್ತೆ ಯೋಜನೆಗೆ ನೀಡಬೇಕಾದ ತಲಾ ₹3000 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದು ದೂರಿದರು. ಇನ್ನು, ಭದ್ರಾ ಮೇಲ್ದಂಡೆ ಯೋಜನೆಗೆ ಹಿಂದಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲೇ ₹5300 ಕೋಟಿ ಘೋಷಿಸಿದರೂ ಇದುವರೆಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಈ ರೀತಿ ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕೇಂದ್ರದಿಂದ ರಾಜ್ಯಕ್ಕಾಗಿರುವ ಆರ್ಥಿಕ ಅನ್ಯಾಯದ ಪರಿಣಾಮ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಕೊರತೆ ಆಗಿದೆ ಎಂದು ತಿಳಿಸಿದರು.

ಇಂತಹ ಸಂದರ್ಭದಲ್ಲಿಯೂ ನಾವು ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಇದುವರೆಗೆ ₹64000 ಕೋಟಿ ವಿನಿಯೋಗಿಸಿದ್ದೇವೆ. ಈ ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಬಜೆಟ್ಟಿನಲ್ಲಿ 2023-24 ರಲ್ಲಿ ₹36858 ಕೋಟಿ ಮತ್ತು 2024-25ರಲ್ಲಿ ₹52009 ಕೋಟಿ ಸೇರಿ ಒಟ್ಟು ₹88867 ಕೋಟಿಗಳನ್ನು ಬಜೆಟ್ಟಿನಲ್ಲಿ ಒದಗಿಸಿದ್ದೇವೆ ಎಂದು ಮಾಹಿತಿ ನೀಡಿದರು.

PREV
Stay informed with the latest news from Belagavi district (ಬೆಳಗಾವಿ ಸುದ್ದಿ) — covering local governance, industry & economy, agriculture and farming, heritage & tourism, community events, civic issues, and district-level developments in Belagavi only on Kannada Prabha News.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಮೇವು ಕತ್ತರಿಸುವ ಯಂತ್ರ ಮತ್ತು ಮ್ಯಾಟ್ ವಿತರಣೆ