ಕೆವಿಕೆಯಲ್ಲಿ ಸಿದ್ಧವಾಗುತ್ತಿದೆ ‘ಬೆಳೇರಿ’ ಸಂರಕ್ಷಿತ ಸಾಂಪ್ರದಾಯಿಕ ಭತ್ತದ ತಳಿಗಳು!

KannadaprabhaNewsNetwork |  
Published : Oct 23, 2024, 12:53 AM IST
ಸತ್ಯನಾರಾಯಣ ಬೇಳೇರಿ ಅವರ 10 ಸಾಂಪ್ರದಾಯಿಕ ಭತ್ತದ ತಳಿಗಳನ್ನು ಕೆವಿಕೆಯಲ್ಲಿ ನಾಟಿ ಮಾಡಿರುವುದು | Kannada Prabha

ಸಾರಾಂಶ

ಸತ್ಯನಾರಾಯಣ ಬೆಳೇರಿ ಅವರು ಸುಮಾರು 650ಕ್ಕೂ ಅಧಿಕ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಇದರಿಂದ ಪ್ರೇರಣೆಗೊಂಡ ಕೆವಿಕೆ ವಿಜ್ಞಾನಿಗಳು, ಅವರದೇ ತಳಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ರೈತರಿಗೆ ಪೂರೈಸಲು ನಿರ್ಧರಿಸಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಡಿನಾಡು ಕಾಸರಗೋಡಿನ ಸತ್ಯನಾರಾಯಣ ಬೆಳೇರಿ ಅವರು ಸಂರಕ್ಷಣೆ ಮಾಡಿದ ಸಾಂಪ್ರದಾಯಿಕ ಭತ್ತದ ತಳಿಗಳನ್ನು ರೈತರಿಗೆ ಪೂರೈಸಲು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ (ಐಸಿಎಆರ್‌) ಆಶ್ರಯದ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಸಿದ್ಧತೆ ನಡೆಸುತ್ತಿದೆ.

ಸತ್ಯನಾರಾಯಣ ಬೆಳೇರಿ ಅವರು ಸುಮಾರು 650ಕ್ಕೂ ಅಧಿಕ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಇದರಿಂದ ಪ್ರೇರಣೆಗೊಂಡ ಕೆವಿಕೆ ವಿಜ್ಞಾನಿಗಳು, ಅವರದೇ ತಳಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ರೈತರಿಗೆ ಪೂರೈಸಲು ನಿರ್ಧರಿಸಿದೆ.ಸತ್ಯನಾರಾಯಣ ಬೆಳೇರಿ ಬಳಿಯಿಂದ 10 ಭತ್ತದ ತಳಿಗಳನ್ನು ಪಡೆದು ಅವುಗಳನ್ನು ಕೆವಿಕೆ ವಿಜ್ಞಾನಿಗಳು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಈ ಮುಂಗಾರು ಹಂಗಾಮಿನಲ್ಲಿ ಕೆವಿಕೆಯಲ್ಲಿ ನಾಟಿ ಮಾಡಿದ ಈ ತಳಿಗಳು ಈಗ ಪೈರಿನ ಹಂತಕ್ಕೆ ಬಂದಿವೆ. ಎರಡೇ ವರ್ಷಗಳಲ್ಲಿ ಸೂಕ್ತ ತಳಿಗಳನ್ನು ಆಯ್ಕೆ ಮಾಡಿ ರೈತರಿಗೆ ಭತ್ತದ ಬೀಜಗಳನ್ನು ಪೂರೈಸಲಿದೆ.

ಈ ಎಲ್ಲ 10 ಸಾಂಪ್ರದಾಯಿಕ ಭತ್ತದ ತಳಿಗಳಾಗಿದ್ದು, ಈಗ ಪರೀಕ್ಷಾರ್ಥ ಪೈರು ಬೆಳೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳಲ್ಲಿ ಅಧಿಕ ಇಳುವರಿ, ಹವಾಮಾನ ಆಧಾರಿತ ಹಾಗೂ ರೈತರ ಬೇಡಿಕೆಯನ್ನು ಗಮನದಲ್ಲಿರಿಸಿ ಅಂತಹ ತಳಿಗಳ ಬಿತ್ತನೆ ಬೀಜವನ್ನು ಯಥೇಚ್ಛವಾಗಿ ಮಾರುಕಟ್ಟೆಗೆ ಪೂರೈಸಲು ಕೃಷಿ ವಿಜ್ಞಾನಿಗಳು ನಿರ್ಧರಿಸಿದ್ದಾರೆ.

ಪ್ರಸಕ್ತ ಕೆವಿಕೆ ಮೂರು ತಳಿ ಪೂರೈಕೆ:

ಈ ಹಿಂದೆ ಕೆವಿಕೆ ಪೂರೈಸುತ್ತಿದ್ದ ಎಂಒ 4 ಭದ್ರಾ, ಜ್ಯೋತಿ ಮತ್ತಿತರ ತಳಿಗಳು ಹಳೆಯದಾಗಿದ್ದು, ಸತ್ವವನ್ನು ಕಳೆದುಕೊಂಡಿವೆ ಎಂಬ ಕಾರಣಕ್ಕೆ ಹೊಸ ಭತ್ತದ ತಳಿಗಳನ್ನು ಆವಿಷ್ಕರಿಸಿದೆ. ಪ್ರಸಕ್ತ ಕೆವಿಕೆಯೇ ಅಭಿವೃದ್ಧಿಪಡಿಸಿದ ಮೂರು ಭತ್ತದ ತಳಿಗಳನ್ನು ರೈತರಿಗೆ ನೀಡುತ್ತಿದೆ.

ಸಹ್ಯಾದ್ರಿ ಪಂಚಮುಖಿ, ಸಹ್ಯಾದ್ರಿ ಕೆಂಪು ಮುಕ್ತಿ ಹಾಗೂ ಸಹ್ಯಾದ್ರಿ ಬ್ರಹ್ಮ ತಳಿಗಳನ್ನು ರೈತರಿಗೆ ಪೂರೈಸಲಾಗುತ್ತಿದೆ. ಹಿಂಗಾರಿನಲ್ಲಿ ಇನ್ನೊಂದು ಹೊಸ ತಳಿಯನ್ನು ಕೆವಿಗೆ ಅಭಿವೃದ್ಧಿಪಡಿಸುತ್ತಿದೆ.

ಕೆವಿಕೆಯ ನೋಡಲ್‌ ಅಧಿಕಾರಿ, ಪ್ರಧಾನ ವಿಜ್ಞಾನಿ ಡಾ.ಎಂ.ಜೆ.ಚಂದ್ರೇಗೌಡ, ಹಿರಿಯ ವಿಜ್ಞಾನಿ ಡಾ.ಟಿ.ಜೆ.ರಮೇಶ್‌ ಇವರ ಮಾರ್ಗದರ್ಶನದಲ್ಲಿ ಬೇಳೇರಿ ಅವರ ಸಂರಕ್ಷಿತ ಸಾಂಪ್ರದಾಯಿಕ ತಳಿಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ತಳಿಗಳು ಮುಂದಿನ ದಿನಗಳಲ್ಲಿ ಕೆವಿಕೆಯಿಂದ ಶಿಫಾರಸುಗೊಂಡರೆ, ರೈತರು ಹಾಗೂ ಜನಸಾಮಾನ್ಯರಿಗೆ ಸಾಂಪ್ರದಾಯಿಕ ತಳಿಗಳ ಉತ್ಪಾದನೆಯೊಂದಿಗೆ ಸಂರಕ್ಷಣೆ ಸುಲಭವಾಗಲಿದೆ.

ಸಾಂಪ್ರದಾಯಿಕ 10 ಭತ್ತ ತಳಿಗಳು, ಅವುಗಳ ಮಹತ್ವ -ಕರಿಕಗ್ಗ ಎನ್ನುವುದು ಕರ್ನಾಟಕ ಮೂಲದ ತಳಿ.ಉಪ್ಪು ನೀರಿನ ನೆರೆ ಹಾವಳಿ ತಡೆದುಕೊಳ್ಳುವ ಗುಣ ಹೊಂದಿದ್ದು, ಹೆಚ್ಚು ಪ್ರೊಟೀನ್‌, ಪೋಷಕಾಂಶ ಹೊಂದಿದ್ದು, ಕುಚ್ಚಲಕ್ಕಿಗೆ ಸೂಕ್ತ.

-ತವಳ ಕಣ್ಣನ್‌ ಎನ್ನುವುದು ಕೇರಳ ಮೂಲದ ನೆರೆ ನಿರೋಧಕ ತಳಿ. ಹೆಚ್ಚು ಪ್ರೊಟೀನ್‌ ಹೊಂದಿದೆ.

-ನೆರೆಗುಳಿ ತಳಿ ಕರ್ನಾಟಕ ಮೂಲದ ತಗ್ಗು ನೆರೆ ಪ್ರದೇಶಕ್ಕೆ ಸೂಕ್ತವಾಗಿದೆ.

-ಜುಗಲ್‌ ತಳಿ ಪಶ್ಚಿಮ ಬಂಗಾಳ ಮೂಲವಾಗಿದ್ದು, ಒಂದು ಭತ್ತದ ಕಾಳಿನಲ್ಲಿ ಎರಡು ಅಕ್ಕಿ ಕಾಳು ಇರುವುದು ಇದರ ವಿಶೇಷ.

-ಕಳಮೆ ತಳಿ ಕರ್ನಾಟಕ ಮೂಲದ್ದಾಗಿದ್ದು, ಕರಾವಳಿಯ ಕ್ಷಾರ ಪ್ರದೇಶಕ್ಕೆ ಸೂಕ್ತವಾಗಿದೆ. ಮೂಲವ್ಯಾಧಿ ಗುಣಪಡಿಸುವ ಔಷಧೀಯ ಗುಣ ಹೊಂದಿದೆ ಎಂದು ನಂಬಲಾಗಿದೆ.

-ಬರ ನೆಲ್ಲು ತಳಿ ಕರ್ನಾಟಕ ಮೂಲವಾಗಿದ್ದು, ಬರ ನಿರೋಧಕ ಗುಣ ಹೊಂದಿದೆ.

-ನವರ ತಳಿ ಕೇರ‍ಳ ರಾಜ್ಯದ ಅಲ್ವಾವಧಿ ತಳಿ. 70-75 ದಿನಗಳ ಫಸಲು ಅವಧಿ ಹೊಂದಿದ್ದು, ಕಂದು ಬಣ್ಣವಾಗಿ, ಔಷಧೀಯ ಗುಣ ಹೊಂದಿದೆ.

-ರಾಜಕಯಮೆ ತಳಿ ಕರ್ನಾಟಕ ಮೂಲದ ಎತ್ತರದ ತಳಿ. ಕಡಿಮೆ ಇಳುವರಿ, ಉತ್ತಮ ಗುಣಮಟ್ಟದ ಅನ್ನ, ದುಂಡಗಾಕಾರದ ಅಕ್ಕಿಯನ್ನು ಹೊಂದಿದ್ದು, ಕಾಳಿನ ತೂಕ ಹೆಚ್ಚಾಗಿದೆ. ಪೀಡೆ ನಿರೋಧಕ ತಳಿ, ಅಕ್ಕಿ ಹಳೆಯದಾದಂತೆ ರುಚಿ ಹೆಚ್ಚು.

-ರಕ್ತಶಾಲಿ ತಳಿ ಕೇರಳ ಮೂಲದ ಕೆಂಪಕ್ಕಿ ತಳಿ. ಔಷಧೀಯ ಗುಣ ಹೊಂದಿದ್ದು, ರಕ್ತ ಕೊರತೆ ನೀಗಿಸುತ್ತದೆ.

-ಗಂಧಶಾಲೆ ತಳಿ ಕೂಡ ಕೇರಳದ ಸುಗಂಧಿತ ತಳಿ.ಮೊದಲ ಹಂತದಲ್ಲಿ ಸತ್ಯನಾರಾಯಣ ಬೆಳೇರಿ ಅವರಿಂದ 10 ಭತ್ತದ ತಳಿಗಳನ್ನು ಪಡೆದು ಕೆವಿಕೆಯಲ್ಲಿ ನಾಟಿ ಮಾಡಲಾಗಿದೆ. ಇವುಗಳಲ್ಲಿ ಉತ್ತಮ ಫಸಲು, ಗುಣಮಟ್ಟ, ಇ‍ಳುವರಿ ಹಾಗೂ ರೈತರ ಬೇಡಿಕೆಯನ್ನು ಗಮನಿಸಿ ರೈತ ಮಾರುಕಟ್ಟೆಗೆ ಶಿಫಾರಸು ಮಾಡಲಾಗುವುದು. ಉಳಿದ ತಳಿಗಳನ್ನು ಹಂತ ಹಂತವಾಗಿ ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಿ ಸೂಕ್ತ ತಳಿಗಳನ್ನು ರೈತರಿಗೆ ಶಿಫಾರಸು ಮಾಡಲಾಗುವುದು.

-ಡಾ.ಮಲ್ಲಿಕಾರ್ಜುನ್‌, ಮಣ್ಣು ವಿಜ್ಞಾನಿ, ಕೆವಿಕೆ ಮಂಗಳೂರು

PREV

Recommended Stories

''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ