ಬೆಳಗಾವಿ ಸಿಇಟಿ-ಸಕ್ಷಮ್ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ

KannadaprabhaNewsNetwork |  
Published : Aug 16, 2025, 02:01 AM IST
ವಿದ್ಯಾರ್ಥಿಗಳಿಗೆ ಐಐಟಿ, ನೀಟ್ ಮತ್ತು ಸಿಇಟಿ ಪರೀಕ್ಷೆಗಳಿಗೆ ತರಬೇತಿಯ ಕಾರ್ಯಕ್ರಮ  | Kannada Prabha

ಸಾರಾಂಶ

ಬೆಳಗಾವಿಯಲ್ಲಿ ಸದ್ಯ ಜಾರಿಯಲ್ಲಿರುವ ಸಿಇಟಿ-ಸಕ್ಷಮ್ ಕಾರ್ಯಕ್ರಮವು ಇಡೀ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯಲ್ಲಿ ಸದ್ಯ ಜಾರಿಯಲ್ಲಿರುವ ಸಿಇಟಿ-ಸಕ್ಷಮ್ ಕಾರ್ಯಕ್ರಮವು ಇಡೀ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಿಪಂ ವತಿಯಿಂದ ಶುಕ್ರವಾರ ಆಯೋಜಿಸಲಾದ ಬೈಲಹೊಂಗಲ ಮತ್ತು ಮಜಲಟ್ಟಿಯಲ್ಲಿ ಪ್ರಾರಂಭಿಸಿದ ಅತ್ಯುತ್ತಮ 50 ಬೆಳಗಾವಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಐಐಟಿ, ನೀಟ್ ಮತ್ತು ಸಿಇಟಿ ಪರೀಕ್ಷೆಗಳಿಗೆ ತರಬೇತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಹೆಮ್ಮೆಯ ವಿಷಯವಾಗಿದೆ. ಅವರು ಈಗಾಗಲೇ ಐಐಟಿ, ನೀಟ್ ಮತ್ತು ಸಿಇಟಿ ಪರೀಕ್ಷೆಗಳನ್ನು ಎದುರಿಸಿದ ಬಳಿಕ, ಉನ್ನತ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೀವು ಕೂಡ ತರಬೇತಿ ಪಡೆದು ಜೀವನದಲ್ಲಿ ತಮ್ಮ ಗುರಿಯನ್ನು ಮುಟ್ಟಬೇಕು ಎಂದು ಸಲಹೆ ನೀಡಿದರು.ಪದವಿ ಪೂರ್ವ ಶಿಕ್ಷಣ ಹಂತ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿದೆ. ಭವಿಷ್ಯದ ವೃತ್ತಿ ಆಯ್ಕೆಗೆ ಪೂರಕವಾದ ಶಿಕ್ಷಣ ಆಯ್ಕೆ ಮಾಡಲು ನೀಟ್​, ಜೆಇಇ, ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಪಡೆಯುವುದು ಮುಖ್ಯ ಎಂದರು.ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ನೀಟ್​, ಜೆಇಇ, ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಸಿಗಬೇಕು ಎಂಬುವುದು ನಮ್ಮ ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪಿಯು ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ಉಚಿತವಾಗಿ ನೀಡಲು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದರು.ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಶೈಕ್ಷಣಿಕ ಚಟುವಟಿಕೆಗಳು ಸಹ ಉನ್ನತ ಮಟ್ಟದಾಗಿದ್ದು ಹಾಗೂ ಹೆಚ್ಚಿನ ಸೌಕರ್ಯ ನೀಡಲಾಗಿದೆ. ಉತ್ತಮ ದಾಖಲಾತಿಯೊಂದಿಗೆ ಉತ್ತಮ ಫಲಿತಾಂಶವನ್ನು ಸಹ ನಿರೀಕ್ಷಿಸಬಹುದು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪಾಸಾದ ಎಸ್ಸಿ/ಎಸ್ಟಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಪ್ರತಿಭಾನ್ವಿತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಐಐಟಿ, ನೀಟ್ ಮತ್ತು ಸಿಇಟಿ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸೂಕ್ತ ಪೂರ್ವತಯಾರಿ ಹಾಗೂ ಮಾರ್ಗದರ್ಶನದ ಅಗತ್ಯವಾಗಿದೆ ಎಂದರು.ಈಗಾಗಲೇ ಚಿಕ್ಕೋಡಿ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು ಮಜಲಟ್ಟಿ ಮತ್ತು ಬೈಲಹೊಂಗಲದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳಿಗೆ ಈ ವರ್ಷ ಐಐಟಿ, ನೀಟ್ ಮತ್ತು ಸಿಇಟಿ ಪರೀಕ್ಷೆಗಳನ್ನು ಬರೆದು ಉತ್ತಮ ಫಲಿತಾಂಶ ಪಡೆಯಲು ಅನುಕೂಲವಾಗಲಿದೆ ಎಂದರು.

ಈ ಬಗ್ಗೆ ಎರಡೂ ಕಾಲೇಜುಗಳಿಂದ ಸುಮಾರು ಸಾವಿರ ವಿದ್ಯಾರ್ಥಿಗಳಿಗೆ ಕಠಿಣವಾದ ಅರ್ಹತಾ ಪರೀಕ್ಷೆ ನಡೆಸಿ ಅತ್ಯುತ್ತಮ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ವಿದ್ಯಾರ್ಥಿಗಳಿಗೆ ಇಂದಿನಿಂದ ತರಬೇತಿ ಪ್ರಾರಂಭಿಸಲಾಗುತ್ತಿದೆ. ಪರೀಕ್ಷಾ ತಯಾರಿಗಾಗಿ ಬೇಕಾದ ಪುಸ್ತಕಗಳನ್ನು ಒದಗಿಸಲಾಗಿದೆ ಹಾಗೂ ಸ್ಮಾರ್ಟ್ ಕ್ಲಾಸಗಳನ್ನು ಸಿದ್ಧಪಡಿಸಲಾಗಿದೆ. ಈ ಅತ್ಯುತ್ತಮ 50 ವಿದ್ಯಾರ್ಥಿಗಳಿಗೆ ಬೇಕಾದ ಸಹಾಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.ಈ ವೇಳೆ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ನಗರ ಪೋಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಹಾಗೂ ಇತರರು ಇದ್ದರು.

PREV

Recommended Stories

ಕಾಲ್ತುಳಿತದ ನಂತರ ನಾನು ವಿಚಲಿತ : ಸಿದ್ದರಾಮಯ್ಯ
ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ