ಮತ್ತೆ ಹುಸಿಯಾದ ಬೆಳಗಾವಿ ಜಿಲ್ಲಾ ವಿಭಜನೆ ನಿರೀಕ್ಷೆ

KannadaprabhaNewsNetwork |  
Published : Mar 07, 2025, 11:48 PM IST
ಬೆಳಗಾವಿ | Kannada Prabha

ಸಾರಾಂಶ

ರಾಜ್ಯದ ಅತೀ ದೊಡ್ಡ ಜಿಲ್ಲೆ ಬೆಳಗಾವಿಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಭಜನೆ ಮಾಡಬೇಕು. ಹೊಸದಾಗಿ ಬೆಳಗಾವಿ, ಗೋಕಾಕ, ಚಿಕ್ಕೋಡಿ ಜಿಲ್ಲೆ ರಚನೆ ಬೇಡಿಕೆಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸ್ಪಂದನೆ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದ ಅತೀ ದೊಡ್ಡ ಜಿಲ್ಲೆ ಬೆಳಗಾವಿಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಭಜನೆ ಮಾಡಬೇಕು. ಹೊಸದಾಗಿ ಬೆಳಗಾವಿ, ಗೋಕಾಕ, ಚಿಕ್ಕೋಡಿ ಜಿಲ್ಲೆ ರಚನೆ ಬೇಡಿಕೆಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸ್ಪಂದನೆ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಕಳೆದ ಮೂರು ದಶಕಗಳಿಂದ ಜಿಲ್ಲಾ ವಿಭಜನೆ ಹೋರಾಟ ನಡೆಯುತ್ತಲೇ ಇದೆ. ಆದರೆ, ಸರ್ಕಾರ ಜಿಲ್ಲಾ ವಿಭಜನೆ ಬೇಡಿಕೆಗೆ ಸ್ಪಂದಿಸಿಲ್ಲ. ಬೆಳಗಾವಿ ನಗರಕ್ಕೆ ಎರಡನೇ ರಾಜಧಾನಿಯನ್ನಾಗಿ ಘೋಷಿಸುವುದು, ಉತ್ತರ ಕರ್ನಾಟಕ ಭಾಗದ ಶಕ್ತಿಸೌಧ ಸುವರ್ಣ ವಿಧಾನಸೌಧ ಕಟ್ಟಡಕ್ಕೆ ಶಕ್ತಿ ತುಂಬುವುದು ಸೇರಿದಂತೆ ಈ ಭಾಗದ ಜನತೆ ಪ್ರಮುಖ ಬೇಡಿಕೆಗೆ ಬಜೆಟ್‌ನಲ್ಲಿ ಆದ್ಯತೆ ನೀಡದಿರುವುದು ನಿರಾಸೆ ಮೂಡಿಸಿದೆ. ಆದಾಗ್ಯೂ, ಸಿಎಂ ಸಿದ್ದರಾಮಯ್ಯ ಅವರು ಗಡಿ ಜಿಲ್ಲೆ ಬೆಳಗಾವಿಗೆ ಹಲವು ಕೊಡುಗೆಗಳನ್ನು ನೀಡಿರುವುದು ಸಮಾಧಾನ ತಂದಿದೆ.

ಆಡಳಿತಾತ್ಮಕ ಹಾಗೂ ಅಧಿಕಾರ ವಿಕೇಂದ್ರೀಕರಣ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಬೆಳಗಾವಿ, ಗೋಕಾಕ ಮತ್ತು ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ರಚನೆ ಮಾಡಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಈ ನಡುವೆ ಬೈಲಹೊಂಗಲನ್ನು ಜಿಲ್ಲೆಯನ್ನಾಗಿಸಬೇಕು ಎಂಬ ಬೇಡಿಕೆ ಆ ಭಾಗದಿಂದ ಕೇಳಿಬರುತ್ತಿದೆ. ಆದರೆ, ಜಿಲ್ಲಾ ವಿಭಜನಾ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ, ಜಿಲ್ಲಾ ವಿಭಜನೆ ನಿರೀಕ್ಷೆ ಹುಸಿಯಾಗಿದೆ. ಈ ಮೂಲಕ ನೂತನ ಜಿಲ್ಲೆ ಕನಸು ಕಾಣುತ್ತಿದ್ದ ಚಿಕ್ಕೋಡಿ ಮತ್ತು ಗೋಕಾಕ ಜನತೆಗೆ ತೀವ್ರ ನಿರಾಸೆ ಮೂಡಿಸಿದ್ದು, ನೂತನ ಜಿಲ್ಲಾ ಕನಸು ಕನಸಾಗಿಯೇ ಉಳಿಯುವಂತಾಗಿದೆ.

ಬೆಳಗಾವಿ ನಗರವನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕೆಂಬ ಈ ಭಾಗದ ಕನ್ನಡಿಗರ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ. ಇನ್ನು ಉತ್ತರ ಕರ್ನಾಟಕ ಭಾಗದ ಪರ್ಯಾಯ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧ ಕಟ್ಟಡಕ್ಕೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗುವಂತೆ ಸರ್ಕಾರದ ಪ್ರಮುಖ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಈ ಮೂಲಕ ಸುವರ್ಣ ಸೌಧಕ್ಕೆ ಶಕ್ತಿ ತುಂಬುತ್ತದೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ.

ರಾಜ್ಯದಲ್ಲೇ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಾತ್ರ ನವೆಂಬರ್‌ 1ರ ಕರ್ನಾಟಕ ರಾಜ್ಯೋತ್ಸವವನ್ನು ಅತೀ ಅದ್ಧೂರಿಯಿಂದ ಆಚರಿಸಲಾಗುತ್ತದೆ. ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಕನ್ನಡಿಗರು ಅತೀ ಅದ್ಧೂರಿಯಿಂದ ಮೆರವಣಿಗೆ ಮಾಡಲಾಗುತ್ತದೆ. ಇದಕ್ಕೆ ಇನ್ನಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಅನುದಾನ ನೀಡಬೇಕೆಂಬ ಕನ್ನಡಪರ ಸಂಘಟನೆಗಳ ಬೇಡಿಕೆಗೂ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ. ಇದು ಸಹಜವಾಗಿಯೇ ಕನ್ನಡಪರ ಸಂಘಟನೆಗಳಲ್ಲಿ ನಿರಾಸೆ ಮೂಡಿಸಿದೆ.

ಖಾನಾಪುರದಲ್ಲಿ ಕಾನನದಲ್ಲಿರುವ ಕೆಲವು ಗ್ರಾಮಗಳ ಸ್ಥಳಾಂತರ ಕುರಿತಾಗಿ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾವ ಕೂಡ ಇಲ್ಲ. ಜಿಲ್ಲೆಯ ಹಲವೆಡೆ ಇರುವ ಏತ ನೀರಾವರಿ ಯೋಜನೆಗಳು, ನೂತನ ತಾಲೂಕುಗಳಲ್ಲಿರುವ ಆಸ್ಪತ್ರೆಗಳ ಮೇಲ್ದರ್ಜೆ, ಹಳೆ ತಾಲೂಕಿನಲ್ಲಿರುವ ಆಸ್ಪತ್ರೆಗಳ ಮೇಲ್ದರ್ಜೆ, ಬೆಳಗಾವಿ-ಕಿತ್ತೂರು ಧಾರವಾಡ ರೈಲು ಮಾರ್ಗಕ್ಕೆ ಹಣ ಮೀಸಲು ಸೇರಿದಂತೆ ಇನ್ಯಾವುದೇ ಪ್ರಸ್ತಾವಗಳು ಬಜೆಟ್‌ನಲ್ಲಿ ಸಿಕ್ಕಿಲ್ಲ.

ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದೇನು?:

1ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪಿಸಲು ತಜ್ಞರಿಂದ ಕಾರ್ಯ ಸಾಧ್ಯತಾ ವರದಿ ಪಡೆಯುವುದು

2ಅಥಣಿಯಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ ಮಾಡಲು ಅನುಮೋದನೆ

3ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದಿಂದ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಹಾಗೂ ಖಾನಾಪುರ ತಾಲೂಕಿ ನಂದಗಡದಲ್ಲಿ ₹28 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳುವುದು

4ಬೆಳಗಾವಿಯಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿಗೊಳಿಸುವುದು

5ಕಿಯೋನಿಕ್ಸ್‌ ವತಿಯಿಂದ ಬೆಳಗಾವಿಯಲ್ಲಿ ಪ್ಲಗ್‌ ಆ್ಯಂಡ್‌ ಪ್ಲೇ ಸೌಲಭ್ಯಗಳನ್ನೊಳಗೊಂಡ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ

6ಬೆಳಗಾವಿ ಜಿಲ್ಲೆಯ ನೀರಾವರಿ ಮತ್ತು ಜಲ ಸಂರಕ್ಷಣಾ ಯೋಜನೆಗಳಿಗೆ ₹600 ಕೋಟಿ ಅನುದಾನ ಕಾಯ್ದಿರಿಸಲಾಗಿದೆ

7ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆಗೆ ₹1000 ಕೋಟಿ ಕಾಯ್ದಿರಿಸಲಾಗಿದೆ

8ಬೆಳಗಾವಿ ಮತ್ತು ಧಾರವಾಡ ನಡುವಿನ ಸಂಪರ್ಕ ಬಲಪಡಿಸಲು ಹೊಸ ಎಕ್ಸ್‌ಪ್ರೆಸ್‌ ಸೇತುವೆ ನಿರ್ಮಾಣಕ್ಕೆ ₹1200 ಕೋಟಿ

9ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ₹850 ಕೋಟಿ ನಿಗದಿ

10ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ತಾಂತ್ರಿಕ ಹಬ್ ಸ್ಥಾಪಿಸಲು ₹500 ಕೋಟಿ ನಿಗದಿ

11ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ₹199 ಕೋಟಿ ಘೋಷಣೆ

12ಸೇವಾದಳ ಸಂಸ್ಥಾಪಕ, ಸ್ವಾತಂತ್ರ್ಯ ಸೇನಾನಿ ಪದ್ಮಭೂಷಣ ಡಾ.ನಾ.ಸು. ಹರ್ಡಿಕರ ಅವರ ಸ್ಮಾರಕವನ್ನು ಘಟಪ್ರಭಾ ಆರೋಗ್ಯ ಧಾಮದಲ್ಲಿ ನಿರ್ಮಿಸಲು ₹2 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.

13ಬೆಳಗಾವಿ ನಗರದಲ್ಲಿ ₹55 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ

14ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ₹5 ಕೋಟಿ ಅನುದಾನ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ