ವಿಶೇಷ ಮಾರ್ಗದರ್ಶಿ ಯೋಜನೆಗಳು ಹಾಗೂ ಕಾರ್ಯಕ್ರಮಗಳ ನಡುವೆಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲಾವಾರು ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ. 61.64 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ. 62.12 ರಷ್ಟು ಫಲಿತಾಂಶ ಪಡೆದಿವೆ.
ಶ್ರೀಶೈಲ ಮಠದ
ಬೆಳಗಾವಿ : ವಿಶೇಷ ಮಾರ್ಗದರ್ಶಿ ಯೋಜನೆಗಳು ಹಾಗೂ ಕಾರ್ಯಕ್ರಮಗಳ ನಡುವೆಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲಾವಾರು ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ. 61.64 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ. 62.12 ರಷ್ಟು ಫಲಿತಾಂಶ ಪಡೆದಿವೆ. ಆದರೆ, ಎರಡೂ ಜಿಲ್ಲೆಗಳ ಫಲಿತಾಂಶ ಕಳೆದ ಬಾರಿಗೆ ಹೋಲಿಸಿದರೆ, ಅಷ್ಟೊಂದು ಸುಧಾರಣೆ ಸಾಧಿಸಿಲ್ಲ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 31,503 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 19583 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 11920 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ. 64.93 ರಷ್ಟು ಫಲಿತಾಂಶದ ಮೂಲಕ 29ನೇ ಸ್ಥಾನದಲ್ಲಿತ್ತು. ಈ ಬಾರಿಯ ಫಲಿತಾಂಶ ಶೇ. 61.64 ರಷ್ಟಾಗಿದೆ. 25ನೇ ಸ್ಥಾನಕ್ಕೆ ಏರಿದೆ. ಆದರೆ, ಶೇಕಡಾವಾರು ಫಲಿತಾಂಶ ಸುಧಾರಣೆ ಕಂಡಿಲ್ಲ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 42,366 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 26317 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 16049 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ. 62.82ರಷ್ಟು ಫಲಿತಾಂಶದೊಂದಿಗೆ 25ನೇ ಸ್ಥಾನ ಪಡೆದಿದ್ದ ಚಿಕ್ಕೋಡಿ ಈ ಬಾರಿ ಶೇ. 62.12 ರಷ್ಟು ಫಲಿತಾಂಶದ ಮೂಲಕ 26ನೇ ಸ್ಥಾನಕ್ಕೆ ಕುಸಿದಿದೆ.ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಶೈಕ್ಷಣಿಕ ಜಿಲ್ಲೆ ಸೇರಿ ಒಟ್ಟು 73,869 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 45,900 ವಿದ್ಯಾರ್ಥಿಗಳು ಪಾಸಾಗಿದ್ದರೆ, ಒಟ್ಟು 27969 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಹುಸಿಯಾದ ನಿರೀಕ್ಷೆ:
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಶಿಕ್ಷಣ ತಜ್ಞರ ಮಾರ್ಗದರ್ಶನ, ವಿಶೇಷ ಪಠ್ಯ ಬೋಧನೆ, ಶಿಕ್ಷಕರ ಕಾರ್ಯಾಗಾರ, ಕಲಿಕಾ ನ್ಯೂನ್ಯತೆಗಳ ಪರಿಹಾರ ಸೇರಿದಂತೆ ವಿವಿಧ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜಿಲ್ಲಾವಾರು ಫಲಿತಾಂಶದಲ್ಲಿ ಟಾಪ್ ಟೆನ್‌ನಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿಗಳಿಗೆ ಸ್ಥಾನ ಪಡೆಯುವ ನಿರೀಕ್ಷೆ ಹೊಂದಲಾಗಿತ್ತು.
ಆದರೆ, ಎಲ್ಲ ನಿರೀಕ್ಷೆಗಳು ಹುಸಿಗೊಂಡಿವೆ. ಬೆಳಗಾವಿಗೆ 25 ಮತ್ತು ಚಿಕ್ಕೋಡಿಗೆ 26ನೇ ಸ್ಥಾನ ಸಿಕ್ಕಿದೆ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ನಕಲು, ಅವ್ಯವಹಾರಗಳಿಗೆ ಅವಕಾಶ ನೀಡಿರಲಿಲ್ಲ. ವೆಬ್ ಕಾಸ್ಟಿಂಗ್ ವ್ಯವಸ್ಥೆಯ ಮೂಲಕ ಪರೀಕ್ಷಾ ಕೊಠಡಿಗಳ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು.