ತಂದೆ-ತಾಯಂದಿರನ್ನು ಹೆತ್ತ ಮಕ್ಕಳೇ ಮನೆಯಿಂದ ಹೊರ ಹಾಕುತ್ತಿದ್ದು ವೃದ್ಧಾಶ್ರಮವಾಗುತ್ತಿದೆ ಬೆಳಗಾವಿಯ ಬಿಮ್ಸ್‌!

KannadaprabhaNewsNetwork | Updated : Mar 10 2025, 09:25 AM IST

ಸಾರಾಂಶ

ವಯೋವೃದ್ಧ ತಂದೆ-ತಾಯಂದಿರನ್ನು ಹೆತ್ತ ಮಕ್ಕಳೇ ಮನೆಯಿಂದ ಹೊರ ಹಾಕುತ್ತಿದ್ದು, ಹಿರಿಯ ಜೀವಿಗಳಿಗೆ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌)ಯ ಆಸ್ಪತ್ರೆಯೇ ಈಗ ಆಸರೆ ಆಗಿದೆ.

ಶ್ರೀಶೈಲ ಮಠದ

 ಬೆಳಗಾವಿ : ವಯೋವೃದ್ಧ ತಂದೆ-ತಾಯಂದಿರನ್ನು ಹೆತ್ತ ಮಕ್ಕಳೇ ಮನೆಯಿಂದ ಹೊರ ಹಾಕುತ್ತಿದ್ದು, ಹಿರಿಯ ಜೀವಿಗಳಿಗೆ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌)ಯ ಆಸ್ಪತ್ರೆಯೇ ಈಗ ಆಸರೆ ಆಗಿದೆ.

ವೃದ್ಧಾಪ್ಯದ ವೇಳೆ ಮಕ್ಕಳ ಆರೈಕೆಯಲ್ಲಿ ಜೀವನದ ಕೊನೆಯ ದಿನ ಕಳೆಯಬೇಕಾದ ಹಿರಿಯ ಜೀವಿಗಳು ಅಕ್ಷರಶಃ ಅನಾಥರಾಗುತ್ತಿದ್ದಾರೆ. ಕುಟುಂಬದ ಸದಸ್ಯರ ಜೊತೆಗೆ ಬದುಕು ಸವೆಸಬೇಕು. ಮಕ್ಕಳು, ಮೊಮ್ಮಕ್ಕಳ ಜೊತೆಗೆ ಜೀವನ ಕಳೆಯಬೇಕು ಎಂದು ಬಯಸುವವರು ಈಗ ಹೆತ್ತ ಮಕ್ಕಳಿಗೆ ಬೇಡವಾಗಿದ್ದಾರೆ. ಹೀಗೆ ಹೆತ್ತವರನ್ನೇ ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ಎಲ್ಲೆಡೆ ನಡೆದೇ ಇದೆ. ಆದರೆ, ಅನಾರೋಗ್ಯದ ನೆಪ ಮಾಡಿಕೊಂಡು ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ಪೋಷಕರನ್ನು ದಾಖಲಿಸಿ ಹೋದ ಮಕ್ಕಳು ಮತ್ತೆ ಮರಳಿ ಇತ್ತ ತಲೆ ಹಾಕುತ್ತಿಲ್ಲ. ಆರೋಗ್ಯದಿಂದ ಗುಣಮುಖರಾದ ಮೇಲೂ ಮಕ್ಕಳು ಪೋಷಕರನ್ನು ಕರೆದುಕೊಂಡು ಹೋಗುವುದಿಲ್ಲ. ಮಕ್ಕಳಿದ್ದರೂ ಅನಾಥ ಆಗಿರುವ ಪೋಷಕರಿಗೆ ಇದೀಗ ಬಿಮ್ಸ್‌ ಆಸ್ಪತ್ರೆಯೇ ಆಸರೆ ಆಗಿದೆ.

ಮರಳಿ ಬಾರದ ಮಕ್ಕಳು:

ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 152 ವಯೋ ವೃದ್ಧರನ್ನು ಮಕ್ಕಳು ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಹೋಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ, ಮರಳಿ ಇತ್ತ ಬಂದೇ ಇಲ್ಲ. ತಮ್ಮ ತಂದೆ, ತಾಯಿಯ ಆರೋಗ್ಯ ಹೇಗಿದೆ ಎಂಬ ವಿಚಾರವನ್ನು ತಿಳಿದುಕೊಳ್ಳುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಅನಾರೋಗ್ಯದ ನೆಪ ಮಾಡಿಕೊಂಡು ವೃದ್ಧರನ್ನು ಬಿಮ್ಸ್‌ ಆಸ್ಪತ್ರೆಗೆ ದಾಖಲಿಸುತ್ತಾರೆ. ಬಳಿಕ, ಬಂದು ಆಸ್ತಿ ದಾಖಲೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹೋಗಿ ಬಿಡುತ್ತಾರೆ. ಮರಳಿ ಆಸ್ಪತ್ರೆಗೆ ಬರುವುದೇ ಇಲ್ಲ ಎನ್ನುತ್ತಾರೆ ಬಿಮ್ಸ್‌ ಸಿಬ್ಬಂದಿ.

ಪೋಷಕರು ಗುಣಮುಖರಾದ ಬಳಿಕವೂ ಮನೆಗೆ ಕರೆದುಕೊಂಡು ಹೋಗಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಬಿಮ್ಸ್ ಸಿಬ್ಬಂದಿ ಪೊಲೀಸ್‌ ಸಹಾಯ ಪಡೆದು ಕುಟುಂಬಸ್ಥರನ್ನು ಸಂಪರ್ಕಿಸಿದರೂ ಪೋಷಕರನ್ನು ಮನೆಗೆ ಕರೆದುಕೊಂದು ಹೋಗಲು ಮಕ್ಕಳು ಬರುತ್ತಿಲ್ಲ. ಈ ರೀತಿ ದಾಖಲಾಗಿದ್ದ ಹೊರ ರಾಜ್ಯದ 17 ಜನ ವೃದ್ಧರನ್ನು ಮನೆಗೆ ತಲುಪಿಸಲಾಗಿದೆ. ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳ 73 ವಯೋವೃದ್ಧರನ್ನೂ ಮನೆಗಳಿಗೆ ಕಳುಹಿಸಲಾಗಿದೆ. ಮಕ್ಕಳಿಲ್ಲದವರು, ಇದ್ದರೂ ನೋಡಿಕೊಳ್ಳದ ಹಿನ್ನೆಲೆಯಲ್ಲಿ 62 ಜನ ವಯೋ ವೃದ್ಧರನ್ನು ವಿವಿಧ ವೃದ್ಧಾಶ್ರಮಗಳಿಗೆ ಸ್ಥಳಾಂತರಿಸಲಾಗಿದೆ. ಮಕ್ಕಳಿದ್ದರೂ ಅನಾಥರಾಗಿರುವ ವಯೋವೃದ್ಧರಿಗೆ ಬಿಮ್ಸ್‌ ಸಿಬ್ಬಂದಿ ಈಗ ಆಸರೆಯಾಗಿದ್ದಾರೆ. ಬಿಮ್ಸ್‌ ಆಸ್ಪತ್ರೆಯ ಸಿಬ್ಬಂದಿಯ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಪೋಷಕರನ್ನು ಆಸ್ಪತ್ರೆಗೆ ದಾಖಲಿಸಿದ ಮಕ್ಕಳು ಮರಳಿ ಬಾರದೇ ಇರುವುದರಿಂದ ಕೆಲವು ಹಿರಿಯರನ್ನು ನಾವೇ ಅವರ ಊರಿಗೆ ಕಳುಹಿಸಿದ್ದೇವೆ. ಇನ್ನು, ಮಕ್ಕಳಿಗೆ ಬೇಡವಾದ ಹೆತ್ತವರನ್ನು ಬಿಮ್ಸ್‌ನಲ್ಲಿ ಆರೈಕೆ ಮಾಡಿ, ವಿವಿಧ ವೃದ್ಧಾಶ್ರಮಗಳಿಗೆ ಸ್ಥಳಾಂತರಿಸಲಾಗಿದೆ.

- ಡಾ। ಸರೋಜಿನಿ ತಿಗಡಿ, ಆರ್‌ಎಂಒ, ಬಿಮ್ಸ್‌ ಆಸ್ಪತ್ರೆ.

Share this article