- ಕಲ್ಲೇದೇವರಪುರದ ಕಲ್ಲೇಶ್ವರ ದೇವಳದಲ್ಲಿ ಕಾಂಕ್ರೀಟ್ ಕಾಮಗಾರಿ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಜಗಳೂರು
ಲೋಕಕಲ್ಯಾಣ, ಕ್ಷೇತ್ರದಲ್ಲಿ ಉತ್ತಮ ಮಳೆ- ಬೆಳೆಯಾಗಿ ಸರ್ವರೂ ಆರೋಗ್ಯ, ನೆಮ್ಮದಿಯಿಂದ ಬದುಕಲಿ ಎಂದು ಪ್ರಾರ್ಥಿಸಿ, ಶ್ರಾವಣ ಸೋಮವಾರ ಹಿನ್ನೆಲೆ ಉರುಳು ಸೇವೆ ಸಂಕಲ್ಪ ಮಾಡಿಕೊಂಡಿದ್ದೆ. ಹೀಗಾಗಿ ಐತಿಹಾಸಿಕ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯ ನೆರವೇರಿಸಿದ್ದೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ತಾಲೂಕಿನ ಕ್ರಿಶ.11ನೇ ಶತಮಾನ ಹೊಯ್ಸಳರ ಕಾಲದ, ಕಲ್ಲೇದೇವರಪುರದ ಕಲ್ಲೇಶ್ವರಸ್ವಾಮಿ ದೇವಳದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರ ಹಿನ್ನೆಲೆ ಶಾಸಕ ಬಿ.ದೇವೇಂದ್ರಪ್ಪ ಉರುಳು ಸೇವೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಲ್ಲೇಶ್ವರ ದೇವಸ್ಥಾನದಲ್ಲಿ ₹30 ಲಕ್ಷ ವೆಚ್ಚದ ಕಾಂಕ್ರೀಟ್ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಸನಾತನ ಹಿಂದೂ ಧರ್ಮದಲ್ಲಿ ದೇವರನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸುವುದು ನಡೆದುಕೊಂಡು ಬಂದ ಪದ್ಧತಿ. ಮೊದಲು ದೇವಸ್ಥಾನದಕ್ಕೆ ಬಂದ ಭಕ್ತರು ಉರುಳು ಸೇವೆ ಮಾಡಲು ನೆಲ ಸಮತಟ್ಟಿರದೇ, ಉಬ್ಬು ತಗ್ಗುಗಳಿಂದ ಕೂಡಿತ್ತು. ಇಂಥ ದೇವಸ್ಥಾನ ಪಾಳುಇದ್ದ ಕಾರಣ ಅಭಿವೃದ್ಧಿಗೆ ₹30 ಲಕ್ಷ ವೆಚ್ಚದ ಕಾಂಕ್ರೀಟ್ ನೆಲಹಾಸು ನಿರ್ಮಿಸಲಾಗಿದೆ. ಭಕ್ತರ ಉರುಳು ಸೇವೆಗೆ ಅನುಕೂಲವಾಗುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಮುಜರಾಯಿ ಇಲಾಖೆಗೆ ಒಳಪಡುವ ಈ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ ಎಂದರು.ದೇಶದಲ್ಲಿ ನಾಲ್ಕಾರು ಧರ್ಮ, ನೂರಾರು ಜಾತಿಯ ಜನರಿದ್ದರೂ ವಿವಿಧತೆಯಲ್ಲಿ ಏಕತೆಯೊಂದೇ ಇಲ್ಲಿನ ಮೂಲಮಂತ್ರವಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಇನ್ನು ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದರು.
ಈ ವೇಳೆ ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಕಾಂಗ್ರೆಸ್ ಮುಖಂಡ, ಮಾಜಿ ಜಿ.ಪಂ. ಸದಸ್ಯರಾದ ಕೆ.ಪಿ.ಪಾಲಯ್ಯ, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀತಿಕುಮಾರ್, ಬಿ.ಮಹೇಶ್ವರಪ್ಪ, ಸಿ.ತಿಪ್ಪೇಸ್ವಾಮಿ, ಕೆಚ್ಚೇನಹಳ್ಳಿ ಹರೀಶ್, ಕಲ್ಲೇದೇವರಪುರ ಗ್ರಾಮದ ಕಿಲಾರಿ ಕೃಷ್ಣಮೂರ್ತಿ, ನಿವೃತ್ತ ಉಪನ್ಯಾಸಕ ಸುಭಾಶ್ಚಂದ್ರ ಬೋಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ, ಪಿ.ಎಲ್.ಡಿ. ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಸಣ್ಣಸೂರಯ್ಯ, ಶಂಶುದ್ದೀನ್, ದೇವಸ್ಥಾನ ಸಮಿತಿ ಅಧ್ಯಕ್ಷರು, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.- - -
-28ಜೆ.ಎಲ್.ಆರ್.ಚಿತ್ರ1:ಜಗಳೂರು ತಾಲೂಕಿನ ಐತಿಹಾಸಿಕ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭಕ್ತರೊಂದಿಗೆ ಶಾಸಕ ಬಿ.ದೇವೇಂದ್ರಪ್ಪ ಉರುಳು ಸೇವೆ ಸಲ್ಲಿಸಿದರು.